ರೈತರು ಕೃಷಿಗೆ ದೊಡ್ಡ ತೊಡಕಾಗಿರುವ ಎರಡು ಪ್ರಮುಖ ಸವಾಲುಗಳಾದ ಹವಾಮಾನ ಬದಲಾವಣೆ ಮತ್ತು ಅಪೌಷ್ಟಿಕತೆ. ರೈತರು ಈ ಎರಡೂ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಬೇಸಾಯ ನಡೆಸಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಅಭಿವೃದ್ಧಿಪಡಿಸಿರುವ, ವಿಶೇಷ ಗುಣಲಕ್ಷಣಗಳುಳ್ಳ 35 ತಳಿಯ ಬೆಳೆಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿ, ಹವಾಮಾನ ವೈಪರೀತ್ಯದಿಂದ ಬೆಳೆಗಳ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ರೈತರಲ್ಲಿ ಅರಿವು ಮೂಡಿಸುವಂತೆ ಶಿಕ್ಷಣ ತಜ್ಞರು, ಕೃಷಿ ವಿಜ್ಞಾನಿಗಳು ಮತ್ತು ಎನ್ಜಿಒಗಳಿಗೆ ಕರೆ ನೀಡಿದರು.
ವಿಶೇಷ ಗುಣಲಕ್ಷಣಗಳನ್ನು ಹೊಂದಿರುವ ಒಟ್ಟು 35 ಬೆಳೆ ತಳಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, ಇಡೀ ಪರಿಸರ ವ್ಯವಸ್ಥೆ ಮೇಲೆ ಹವಾಮಾನ ಬದಲಾಣೆ ತೀವ್ರವಾಗಿ ಪರಿಣಾಮ ಬೀರುತ್ತಿದೆ. ಅದರಲ್ಲಿ ಕೃಷಿಕ್ಷೇತ್ರವೂ ಹೊರತಾಗಿಲ್ಲ. ಆ ಸವಾಲನ್ನು ಎದುರಿಸಿ, ಕೃಷಿ ಸುಸೂತ್ರವಾಗಿ ನಡೆಯಬೇಕು. ಹಾಗಾಗಬೇಕು ಎಂದರೆ ರೈತರಲ್ಲಿ ಅರಿವು ಮೂಡಬೇಕು. ಇದೀಗ ಲೋಕಾರ್ಪಣೆಗೊಂಡ ಹೊಸ ಬೆಳೆಗಳ ಬಗ್ಗೆ ರೈತರಲ್ಲಿ ತಿಳಿವಳಿಕೆ ಮೂಡಿಸಲು ಅಭಿಯಾನಗಳು ನಡೆಯಬೇಕು. ಶಿಕ್ಷಣ ತಜ್ಞರು, ಕೃಷಿ ವಿಜ್ಞಾನಿಗಳು ಮುಂದಾಗಿ ಅದನ್ನು ಮಾಡಬೇಕು. ಬಲವರ್ಧಿತ ಬೀಜಗಳ ಬಗ್ಗೆ ಅವರಿಗೆ ಸರಿಯಾಗಿ ಮಾಹಿತಿ ನೀಡಬೇಕು. ನಾವೆಲ್ಲರೂ ಒಂದಾಗಿ ಈ ಪ್ರಯತ್ನದಲ್ಲಿ ತೊಡಗಿಕೊಂಡಾಗ ಮಾತ್ರ ಹವಾಮಾನ ವೈಪರೀತ್ಯದಿಂದ ನಮ್ಮ ದೇಶದ ಕೃಷಿ ಕ್ಷೇತ್ರವನ್ನು ರಕ್ಷಿಸಬಹುದು ಎಂದು ಹೇಳಿದರು. ಈ ಮೂಲಕ ರೈತರು ಸಮೃದ್ಧ ಜೀವನ ನಡೆಸುವ ಜತೆಗೆ ದೇಶದ ಆರೋಗ್ಯ ಭದ್ರತೆಗೂ ಪೂರಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
35 crop varieties with special traits are being dedicated to the nation. Watch. https://t.co/uVEZATpBZ2
— Narendra Modi (@narendramodi) September 28, 2021
ಒಲಿಂಪಿಕ್ಸ್ ಚಾಂಪಿಯನ್ಗಳಲ್ಲಿ ಒಂದು ಮನವಿ
ದೇಶಕ್ಕೆ ಹವಾಮಾನ ವೈಪರೀತ್ಯದೊಂದಿಗೆ ಎದುರಾಗಿರುವ ಇನ್ನೊಂದು ಬಹುದೊಡ್ಡ ಸವಾಲು ಅಪೌಷ್ಟಿಕತೆ. ಈ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಿ, ಅಪೌಷ್ಟಿಕತೆ ಕೊನೆಗೊಳಿಸಲು ಸಹಾಯ ಮಾಡಿ ಎಂದು ಪ್ರಧಾನಿ ಮೋದಿ ಒಲಿಂಪಿಕ್ಸ್ ಚಾಂಪಿಯನ್ಗಳಲ್ಲಿ ಮನವಿ ಮಾಡಿದ್ದಾರೆ. ಪ್ರತಿ ಅಥ್ಲೀಟ್ ಬರುವ ವರ್ಷಗಳಲ್ಲಿ 75 ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು. ಅವರಿಗೆ ಪೌಷ್ಟಿಕಾಂಶದ ಮಹತ್ವ ತಿಳಿಸಬೇಕು. ಕ್ರೀಡೆ, ದೈಹಿಕ ವ್ಯಾಯಾಮಗಳ ಬಗ್ಗೆಯೂ ಅವರಲ್ಲಿ ಅರಿವು ಮೂಡಿಸಬೇಕು. ಅಪೌಷ್ಟಿಕತೆಯಿಂದ ಎದುರಾಗುವ ಆರೋಗ್ಯ ಸಮಸ್ಯೆಯ ತಿಳಿವಳಿಕೆಯನ್ನು ಮೂಡಿಸಬೇಕು ಎಂದು ಮೋದಿ ಹೇಳಿದ್ದಾರೆ.
ಹವಾಮಾನ ಬದಲಾವಣೆಯಿಂದ ಹೊಸಹೊಸ ಕಾಯಿಲೆಗಳು ಉದ್ಭವಿಸುತ್ತಿವೆ. ಸಾಂಕ್ರಾಮಿಕ ರೋಗಗಳಿಗೂ ಇದೇ ಮುಖ್ಯ ಕಾರಣ. ಬದಲಾಗುತ್ತಿರುವ ಹವಾಮಾನ ಮನುಕುಲದ ಮತ್ತು ಇತರ ಜೀವಿಗಳ ಆರೋಗ್ಯಕ್ಕೆ ಬಹುದೊಡ್ಡ ಅಪಾಯ ತಂದೊಡ್ಡಿದೆ. ಈ ಬಗ್ಗೆ ನಿರಂತರವಾದ ಸಂಶೋಧನೆ ಅಗತ್ಯವಿದ್ದು, ವಿಜ್ಞಾನ, ಸರ್ಕಾರಗಳು ಮತ್ತು ಸಮಾಜ ಒಟ್ಟಾಗಿ ಕೆಲಸ ಮಾಡಬೇಕು. ಕೃಷಿ ಕ್ಷೇತ್ರಕ್ಕೆ ಎದುರಾಗಿರುವ ಸವಾಲುಗಳನ್ನು ಎದುರಿಸಲು ರೈತ ಮತ್ತು ವಿಜ್ಞಾನಿಗಳ ಸಮುದಾಯ ಒಗ್ಗಟ್ಟಾಗಬೇಕು ಎಂದು ತಿಳಿಸಿದರು.
ಏನಿದು 35 ವಿಶೇಷ ತಳಿಗಳ ಬೆಳೆಗಳು
ವಿಶೇಷ ಗುಣಲಕ್ಷಣಗಳಿರುವ 35 ತಳಿಗಳ ಬೆಳೆಗಳ ಬಗ್ಗೆ ಪ್ರಧಾನಮಂತ್ರಿ ಕಚೇರಿ ಮಾಹಿತಿ ನೀಡಿದೆ. ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಹೆಚ್ಚಿನ ಪೋಷಕಾಂಶಹೊಂದಿರುವ ಈ 35 ತಳಿಗಳನ್ನು 2021ರಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬರಪರಿಸ್ಥಿತಿಯಲ್ಲೂ ಬೆಳೆಯಬಹುದಾದಂತ ಕಡಲೆ, ಮುದುಡುವ ಮತ್ತು ಬರಡು ನಿರೋಧಕ ಬಟಾಣಿ, ಬೇಗನೇ ಕೊಯ್ಲಿಗೆ ಬರುವ ಸೊಯಾಬಿನ್, ಕಾಯಿಲೆ ನಿರೋಧಕ ಗುಣಹೊಂದಿರುವ ಅಕ್ಕಿ, ಜೈವಿಕ ಬಲವರ್ಧಿತ ತಳಿಗಳ ಗೋಧಿ, ಮುತ್ತು ರಾಗಿ, ಜೋಳ, ಕಡಲೆ, ನವಣೆ ಅಕ್ಕಿ, ಹುರುಳಿ ಇತರ ತಳಿಗಳನ್ನು ಒಳಗೊಂಡಿದೆ. ಹಾಗೇ, ಇದನ್ನು ಅಪೌಷ್ಟಿಕತೆ ನಿವಾರಣೆಯನ್ನೂ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಿದ್ದಾಗಿ ಪಿಎಂಒ ಮಾಹಿತಿ ನೀಡಿದೆ. ಇಂದಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಕೂಡ ಪಾಲ್ಗೊಂಡಿದ್ದರು.
ಇದನ್ನೂ ಓದಿ:9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೈಲು ಶಿಕ್ಷೆಗೊಳಗಾಗಿದ್ದ ಅಪರಾಧಿ ಬಂಧನ
ಟ್ರಾಫಿಕ್ ಜಾಮ್ನಿಂದ ಸಿಗಲಿದೆ ಇನ್ನು ಮುಕ್ತಿ, ಕೆಲವೇ ದಿನಗಳಲ್ಲಿ ಲಾಂಚ್ ಆಗುತ್ತಿದೆ ಹೈಬ್ರಿಡ್ ಹಾರುವ ಕಾರು!
(PM Modi launches 35 crop varieties through Video Conference)
Published On - 4:25 pm, Tue, 28 September 21