Mann Ki Baat: ಇ-ತ್ಯಾಜ್ಯ ನಿರ್ವಹಣೆ, ಸಿರಿಧಾನ್ಯಗಳ ಮಹತ್ವ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jan 29, 2023 | 12:11 PM

PM Modi Mann Ki Baat Speech: ಪ್ರಧಾನಿ ನರೇಂದ್ರ ಮೋದಿ ತಮ್ಮ 97ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಮಹತ್ವ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಪದ್ಮಪ್ರಶಸ್ತಿ ವಿಜೇತರಿಗೆ ಶುಭಾಶಯಗಳನ್ನು ಹೇಳಿದ್ದಾರೆ. ಹವಾಮಾನ ಬದಲಾವಣೆ, ಇ-ತ್ಯಾಜ್ಯ ಇತ್ಯಾದಿ ಗಂಭೀರ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

Mann Ki Baat: ಇ-ತ್ಯಾಜ್ಯ ನಿರ್ವಹಣೆ, ಸಿರಿಧಾನ್ಯಗಳ ಮಹತ್ವ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ 97ನೇ ಆವೃತ್ತಿಯ ಮನ್ ಕೀ ಬಾತ್ (Mann Ki Baat) ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಮಹತ್ವ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಪದ್ಮಪ್ರಶಸ್ತಿ ವಿಜೇತರಿಗೆ ಶುಭಾಶಯಗಳನ್ನು ಹೇಳಿದ್ದಾರೆ. ಹವಾಮಾನ ಬದಲಾವಣೆ, ತ್ಯಾಜ್ಯ ಇತ್ಯಾದಿ ಗಂಭೀರ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿಗಳು ಭಾರತದ ಆರ್ಥಿಕತೆ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡಿದ್ದರು. ಈ ಬಾರಿ ಹವಾಮಾನ ಬದಲಾವಣೆ ಸುತ್ತಮುತ್ತಲ ವಿಚಾರದ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಮೋದಿ ಅವರ 97ನೇ ಎಪಿಸೋಡ್​ನ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ತಿಳಿಸಿದ ಕೆಲ ಪ್ರಮುಖ ವಿಚಾರಗಳ ಮುಖ್ಯಾಂಶಗಳು ಇಲ್ಲಿವೆ:

ಸಿರಿಧಾನ್ಯ:

ಪ್ರಧಾನಿ ನರೇಂದ್ರ ಮೋದಿ ಅವರು ಜನರ ಆರೋಗ್ಯಕ್ಕೆ ಯೋಗ ಮತ್ತು ಸಿರಿಧಾನ್ಯ (Millet) ಎಷ್ಟು ಮಹತ್ವ ಎಂಬುದನ್ನು ಮನ್ ಕೀ ಬಾತ್​ನಲ್ಲಿ ತಿಳಿಸಿದರು. ರಾಗಿ ಸೇರಿದಂತೆ ಸಿರಿಧಾನ್ಯಗಳು ಜನರ ಆರೋಗ್ಯ ಹೆಚ್ಚಿಸುತ್ತವೆ. ಜನರು ತಮ್ಮ ಆರೋಗ್ಯಪಾಲನೆಗೆ ಸಿರಿಧಾನ್ಯಗಳ ಸೇವನೆಗೆ ಹೆಚ್ಚು ಒತ್ತುಕೊಡಬೇಕು. ಯೋಗ ಮತ್ತು ಸಿರಿಧಾನ್ಯಗಳನ್ನು ತಮ್ಮ ಜೀವನಶೈಲಿಗೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಭಾರತದ ಮನವಿ ಮೇರೆಗೆ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ದಿನ ಮತ್ತು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಆಚರಣೆಯನ್ನು ಘೋಷಿಸಿದೆ ಎಂದು ಹೇಳಿದ ನರೇಂದ್ರ ಮೋದಿ, ದೇಶದ ವಿವಿಧೆಡೆ ಇರುವ ಸಿರಿಧಾನ್ಯ ಉದ್ಯಮಿಗಳ ಶ್ರಮವನ್ನು ಶ್ಲಾಘಿಸಿದರು. ಕಲಬುರ್ಗಿಯ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಮಿಲೆಟ್, ಬೀದರ್​ನ ಹುಲ್ಸೂರು ಮಹಿಳಾ ಕಿಸಾನ್ ಮಿಲೆಟ್ ಕಂಪನಿಯ (Hulsoor Mahila Kisan Millets Producer Company) ಕಾರ್ಯಗಳನ್ನೂ ಪ್ರಧಾನಿಗಳು ಈ ವೇಳೆ ಪ್ರಸ್ತಾಪಿಸಿ ಹೊಗಳಿದರು.

ಹಾಗೆಯೇ, ಭಾರತದಲ್ಲಿ ನಡೆಯುತ್ತಿರುವ ಜಿ20 ಸಭೆ ಕಾರ್ಯಕ್ರಮಗಳಲ್ಲಿ ಸಿರಿಧಾನ್ಯಯುಕ್ತ ಆಹಾರಗಳನ್ನು ತಯಾರಿಸಿ ಕೊಡಲಾಗುತ್ತಿದೆ ಎಂದ ಅವರು ರಾಗಿ ಪಾಯಸ ಮೊದಲಾದ ಖಾದ್ಯಗಳನ್ನು ಉಲ್ಲೇಖಿಸಿದರು.

ಇಂಡಿಯಾ: ದಿ ಮದರ್ ಆಫ್ ಡೆಮಾಕ್ರಸಿ

ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್​ನಲ್ಲಿ ಇಂಡಿಯಾ: ದಿ ಮದರ್ ಆಫ್ ಡೆಮಾಕ್ರಸಿ” (India: The Mother Of Democracy) ಪುಸ್ತಕದ ಬಗ್ಗೆ ಕೆಲ ಹೊತ್ತು ಮಾತನಾಡಿದರು. ಭಾರತದಲ್ಲಿ ಪ್ರಜಾತಂತ್ರದ ಭವ್ಯ ಇತಿಹಾಸದ ಬಗ್ಗೆ ಮಾತನಾಡಿದರು. ಈ ವೇಳೆ ಬಸವಣ್ಣರ ಅನುಭವ ಮಂಟಪವನ್ನೂ ಅವರು ಉಲ್ಲೇಖಿಸಿದರು. ಧರ್ಮೇಂದ್ರ ಪ್ರಧಾನ್ ಬರೆದಿರುವ ಇಂಡಿಯಾ: ದಿ ಮದರ್ ಆಫ್ ಡೆಮಾಕ್ರಸಿಪುಸ್ತಕವನ್ನು ಪ್ರತಿಯೊಬ್ಬ ಭಾರತೀಯರೂ ಓದಬೇಕು ಎಂದು ಕರೆ ನೀಡಿದರು.

ಪ್ರಜಾತಂತ್ರ ನಮ್ಮ ನರನಾಡಿಗಳಲ್ಲೇ ಇದೆ. ನಮ್ಮ ಸಂಸ್ಕೃತಿಯ ಭಾಗವಾಗಿದೆ. ಶತಮಾನಗಳ ಹಿಂದಿನಿಂದಲೂ ಪ್ರಜಾಪ್ರಭುತ್ವ ವ್ಯವಸ್ಥೆಯ ನಾಡು ಭಾರತವಾಗಿದೆ. ಸ್ವಾಭಾವಿಕವಾಗಿ ನಮ್ಮದು ಪ್ರಜಾಪ್ರಭುತ್ವದ ಸಮಾಜಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಹವಾಮಾನ್ಯ ಬದಲಾವಣೆ ಮತ್ತು ಇ ತ್ಯಾಜ್ಯ

ಜಾಗತಿಕವಾಗಿ ಹವಾಮಾನ ಬದಲಾವಣೆ (Climate Change) ವಿರುದ್ಧ ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್ ರೇಡಿಯೋ ಶೋನಲ್ಲಿ ಈ ವಿಚಾರಕ್ಕೆ ಮಹತ್ವ ಕೊಟ್ಟರು. ಹವಾಮಾನ ಬದಲಾವಣೆ ಅದೆಷ್ಟು ಗಂಭೀರ ಸಮಸ್ಯೆ ಎಂದು ತಿಳಿಸಿದ ಅವರು ಇತ್ಯಾಜ್ಯ ಮರುಬಳಕೆ (E-waste recycling) ಬಗ್ಗೆ ಜಾಗೃತಿ ಮೂಡಿಸಿದರು. ಭಾರತದಲ್ಲಿ ತಯಾರಾಗುತ್ತಿರುವ ಎಲೆಕ್ಟ್ರಾನಿಕ್ ತ್ಯಾಜ್ಯಗಳು ಪರಿಸರಕ್ಕೆ ಮಾರಕವಾಗಿದೆ ಎಂದ ಅವರು ಇವೇಸ್ಟ್ ರೀಸೈಕ್ಲಿಂಗ್ ಕಾರ್ಯಗಳಲ್ಲಿ ಬಹಳಷ್ಟು ಸಂಘ ಸಂಸ್ಥೆಗಳು ತೊಡಗಿಸಿಕೊಳ್ಳುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಿವ್ಯಾಂಗರ ಉತ್ಸವ

ಗೋವಾರದಲ್ಲಿ ಈ ತಿಂಗಳ ಮೊದಲ ವಾರದಲ್ಲಿ ನಡೆದ ಪರ್ಪಲ್ ಫೆಸ್ಟಿವಲ್ ಅನ್ನು ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್​ನಲ್ಲಿ ಪ್ರಸ್ತಾಪ ಮಾಡಿದರು. ದೇಶಾದ್ಯಂತ ಬಂದಿದ್ದ ದಿವ್ಯಾಂಗ ಜನರು (Specially Abled Persons) ಗೋವಾದಲ್ಲಿ ವಿವಿಧ ಕ್ರೀಡೆ, ಮನರಂಜನೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಸಿಕ್ಕಿದ್ದನ್ನು ಮೋದಿ ಇಲ್ಲಿ ಶ್ಲಾಘಿಸಿದರು.

ಈ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಭಾರತದಲ್ಲಿ ಹೊಸ ಪ್ರಯೋಗಗಳು (Innovation) ಹೆಚ್ಚುತ್ತಿರುವುದು, ಇನೋವೇಶನ್ ಇಂಡೆಕ್ಸ್​ನಲ್ಲಿ ಭಾರತದ ಸ್ಥಾನ ಏರುತ್ತಿರುವುದು ಇತ್ಯಾದಿ ವಿಚಾರಗಳನ್ನು ಮೋದಿ ಈ ವೇಳೆ ಪ್ರಸ್ತಾಪಿಸಿ ಮಾತನಾಡಿದರು.

Published On - 11:38 am, Sun, 29 January 23