ದೆಹಲಿಯಲ್ಲಿ ಶ್ರೀಲಂಕಾ ಪ್ರಧಾನಿಯನ್ನು ಭೇಟಿಯಾದ ಪ್ರಧಾನಿ ಮೋದಿ

ಮೀನುಗಾರರ ವಿಷಯದ ಕುರಿತು ಶ್ರೀಲಂಕಾದ ಪ್ರಧಾನಿ ಹರಿಣಿ ಅಮರಸೂರ್ಯ ಮಾತನಾಡಿದ್ದು, "ಅದು ಸದ್ಯಕ್ಕೆ ನಡೆಯುತ್ತಿರುವ ಮತ್ತು ಚರ್ಚಿಸಬೇಕಾದ ವಿಷಯ. ನಮ್ಮ ಮೀನುಗಾರರ ಜೀವನೋಪಾಯವನ್ನು ನಾವು ರಕ್ಷಿಸಬೇಕಾಗಿದೆ. ಆದರೆ ಅದು ಸೂಕ್ಷ್ಮ ವಿಷಯ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ" ಎಂದು ಹೇಳಿದ್ದಾರೆ. ಇಂದು ದೆಹಲಿಯಲ್ಲಿ ಅವರು ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದಾರೆ.

ದೆಹಲಿಯಲ್ಲಿ ಶ್ರೀಲಂಕಾ ಪ್ರಧಾನಿಯನ್ನು ಭೇಟಿಯಾದ ಪ್ರಧಾನಿ ಮೋದಿ
Pm Modi With Srilankan Pm

Updated on: Oct 17, 2025 | 9:58 PM

ನವದೆಹಲಿ, ಅಕ್ಟೋಬರ್ 17: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ದೆಹಲಿಯಲ್ಲಿ ಶ್ರೀಲಂಕಾ ಪ್ರಧಾನಿ ಹರಿಣಿ ಅಮರಸೂರ್ಯ ಅವರನ್ನು ಭೇಟಿ ಮಾಡಿ ಶಿಕ್ಷಣ, ಮಹಿಳಾ ಸಬಲೀಕರಣ, ಅಭಿವೃದ್ಧಿ ಮತ್ತು ಮೀನುಗಾರರ ಕಲ್ಯಾಣದ ಬಗ್ಗೆ ಚರ್ಚಿಸಿದರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್​ನಲ್ಲಿ ಮಾಹಿತಿ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

“ಶ್ರೀಲಂಕಾ ಪ್ರಧಾನಿ ಹರಿಣಿ ಅಮರಸೂರ್ಯ ಅವರನ್ನು ಸ್ವಾಗತಿಸಲು ಸಂತೋಷವಾಗುತ್ತಿದೆ. ನಮ್ಮ ಚರ್ಚೆಗಳು ಶಿಕ್ಷಣ, ಮಹಿಳಾ ಸಬಲೀಕರಣ, ನಾವೀನ್ಯತೆ, ಅಭಿವೃದ್ಧಿ ಸಹಕಾರ ಮತ್ತು ನಮ್ಮ ಮೀನುಗಾರರ ಕಲ್ಯಾಣ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳನ್ನು ಒಳಗೊಂಡಿತ್ತು. ನೆರೆಹೊರೆಯ ದೇಶದವರಾಗಿ ನಮ್ಮ ಸಹಕಾರವು ಎರಡೂ ದೇಶದ ಜನರ ಸಮೃದ್ಧಿ ದೃಷ್ಟಿಯಿಂದ ಅಪಾರ ಮಹತ್ವವನ್ನು ಹೊಂದಿದೆ” ಎಂದು ಎಕ್ಸ್​ನಲ್ಲಿ ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ: ನಿನ್ನೆ ಪ್ರಧಾನಿ ಮೋದಿ- ಟ್ರಂಪ್ ನಡುವೆ ಫೋನ್ ಮಾತುಕತೆ ನಡೆದಿಲ್ಲ; ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಭಾರತ ಸ್ಪಷ್ಟನೆ

ಪ್ರಧಾನಿ ಮೋದಿ ಅವರನ್ನು ಭೇಟಿಯಾದ ನಂತರ ಮಾತನಾಡಿದ ಶ್ರೀಲಂಕಾ ಪ್ರಧಾನಿ ಹರಿಣಿ ಅಮರಸೂರ್ಯ”ಮೋದಿಯವರೊಂದಿಗಿನ ಭೇಟಿ ತುಂಬಾ ಚೆನ್ನಾಗಿತ್ತು. ನಾವು ನಮ್ಮೆರಡು ದೇಶಗಳ ನಡುವೆ ಇನ್ನಷ್ಟು ಉತ್ತಮ ಸಂಬಂಧಗಳನ್ನು ಹೇಗೆ ಮುಂದುವರಿಸಬಹುದು ಎಂದು ಚರ್ಚಿಸಿದ್ದೇವೆ. ಅವರು ನನ್ನ ಭಾರತ ಭೇಟಿಯ ಬಗ್ಗೆ ಮತ್ತು ನಾನು ಎಲ್ಲೆಲ್ಲ ಹೋಗಿದ್ದೇನೆ ಎಂದು ಕೇಳಿದರು. ನಾವು ಇಂದು ಸಂಜೆ ಮತ್ತೆ ಭೇಟಿಯಾಗಲಿದ್ದೇವೆ. ಆದ್ದರಿಂದ ಇದು ಉತ್ತಮ ಸಂಭಾಷಣೆಯಾಗಿತ್ತು. ನಾವು ಈಗಾಗಲೇ ಅನೇಕ ಸಹಯೋಗಗಳಲ್ಲಿ ತೊಡಗಿದ್ದೇವೆ. ಶಿಕ್ಷಣದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಭಾರತದಿಂದ ಬೆಂಬಲ ದೊರೆತಿದೆ” ಎಂದಿದ್ದಾರೆ.

ಇದನ್ನೂ ಓದಿ: ಐ ಹೇಟ್ ಇಂಡಿಯಾ ಪ್ರವಾಸ ಮುಂದುವರೆಸಿ; ಪ್ರಧಾನಿ ಮೋದಿ ಕುರಿತ ಹೇಳಿಕೆಗೆ ರಾಹುಲ್ ಗಾಂಧಿಯನ್ನು ಟ್ರೋಲ್ ಮಾಡಿದ ಯುಎಸ್ ಗಾಯಕಿ

ಗುರುವಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ಶ್ರೀಲಂಕಾ ಪ್ರಧಾನಿ ಹರಿಣಿ ಅಮರಸೂರ್ಯ ಅವರೊಂದಿಗೆ ಮಾತುಕತೆ ನಡೆಸಿದ್ದರು. ಎರಡೂ ದೇಶಗಳ ನಡುವೆ ಸಹಕಾರವನ್ನು ಬಲಪಡಿಸುವ ಮಾರ್ಗಗಳನ್ನು ಅವರು ಚರ್ಚಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ