ದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ನಡುವೆ ಮಾತುಕತೆ ನಡೆಯುವುದಾದರೆ ಮಧ್ಯಸ್ಥಿಕೆ ವಹಿಸಲು ತಾನು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ. ಎರಡೂ ದೇಶಗಳ ನಡುವೆ ವ್ಯಾಪಾರ, ವ್ಯವಹಾರ, ಸಾಂಸ್ಕೃತಿಕ ಮತ್ತು ರಾಜತಾಂತ್ರಿಕ ಸಂಬಂಧ ಹೊಂದಿರುವ ಭಾರತ ಎರಡೂ ದೇಶಗಳ ವಿಶ್ವಾಸಕ್ಕೆ ಪಾತ್ರವಾಗಿರುವ ದೇಶವೂ ಹೌದು. ಈ ವಿಷಯವನ್ನೇ ಎರಡೂ ದೇಶಗಳಿಗೆ ಮನದಟ್ಟು ಮಾಡಿಕೊಡಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಎರಡೂ ದೇಶಗಳ ನಡುವೆ ಉದ್ಭವಿಸಿರುವ ಸಂಘರ್ಷ ಪರಿಸ್ಥಿತಿ ತಿಳಿಗೊಳಿಸಿ, ಫಲಪ್ರದ ಮಾತುಕತೆಗೆ ವೇದಿಕೆ ನಿರ್ಮಿಸಲು ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ. ಸಂಘರ್ಷ ಆರಂಭವಾದ ದಿನದಿಂದಲೂ ಭಾರತವು ಯಾವುದೇ ಒಂದು ದೇಶದ ಪರ, ಇನ್ನೊಂದು ದೇಶದ ವಿರುದ್ಧ ಎಂದು ಗುರುತಿಸಿಕೊಂಡಿಲ್ಲ. ಆದರೆ ಎರಡೂ ದೇಶಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಎರಡೂ ದೇಶಗಳ ಅಧ್ಯಕ್ಷರೊಂದಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ನಿಯಮಿತವಾಗಿ ಮಾತುಕತೆ ನಡೆಸುತ್ತಿದ್ದಾರೆ. ಈ ಅಂಶವನ್ನೇ ಮಧ್ಯಸ್ಥಿಕೆಗೆ ಬಳಸಿಕೊಳ್ಳಲು ಭಾರತ ಯತ್ನಿಸುತ್ತಿದೆ. ಈ ವಿಷಯದ ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಿ ದಿ ಪ್ರಿಂಟ್ ಜಾಲತಾಣ ವರದಿ ಪ್ರಕಟಿಸಿದೆ.
ಉಕ್ರೇನ್ ಸಂಘರ್ಷ ಆರಂಭವಾದ ಈ 12 ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಮೂರು ಬಾರಿ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಎರಡು ಬಾರಿ ಮಾತನಾಡಿದ್ದಾರೆ. ನಿನ್ನೆ (ಮಾರ್ಚ್ 7) ಕೂಡಾ ಇಬ್ಬರೊಂದಿಗೂ ಮೋದಿ ಪ್ರತ್ಯೇಕವಾಗಿ ಮಾತನಾಡಿದರು. ಈ ವೇಳೆ ಮಾತುಕತೆ ಪ್ರಗತಿ ಕುರಿತು ಮೋದಿ ಅವರಿಗೆ ಪುಟಿನ್ ಮಾಹಿತಿ ನೀಡಿದರು. ಅಷ್ಟೇ ಅಲ್ಲದೇ, ಉಕ್ರೇನ್ನಿಂದ ರಷ್ಯಾ ಸೇನೆ ಹಿಂದಕ್ಕೆ ಕರೆಸಿಕೊಳ್ಳಬೇಕಿದ್ದರೆ ಆಗಲೇಬೇಕಾದ ಅನಿವಾರ್ಯ ಬೆಳವಣಿಗೆಯನ್ನೂ ವಿವರಿಸಿದರು.
ಎರಡೂ ದೇಶಗಳು ಮಾತುಕತೆ ಮತ್ತು ರಾಜತಾಂತ್ರಿಕ ಕ್ರಮಗಳಿಂದಲೇ ಬಿಕ್ಕಟ್ಟು ಪರಿಹರಿಸಿಕೊಳ್ಳಬೇಕು. ಸಂಘರ್ಷದಿಂದ ಹಿಂದೆ ಸರಿಯಬೇಕು ಎಂಬ ಭಾರತದ ನಿಲುವನ್ನೂ ಮೋದಿ ಮಾತುಕತೆ ವೇಳೆ ರಷ್ಯಾ ಮತ್ತು ಉಕ್ರೇನ್ಗೆ ಮನವರಿಕೆ ಮಾಡಿಕೊಟ್ಟರು. ಬೆಲರೂಸ್ನಲ್ಲಿ ರಷ್ಯಾ ಮತ್ತು ಉಕ್ರೇನ್ ದೇಶಗಳ ನಿಯೋಗಗಳ ಮಾತುಕತೆ ನಡೆಯುತ್ತಿರುವುದು ಸರಿ, ಅದರೊಂದಿಗೆ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಪರಸ್ಪರ ನೇರ ಮಾತುಕತೆಗೆ ಮುಂದಾಗಬೇಕು. ಬಿಕ್ಕಟ್ಟು ಶಮನಗೊಳ್ಳಲು ಇದು ಪೂರಕ ಎಂಬ ತಮ್ಮ ನಿಲುವನ್ನೂ ಮೋದಿ ಈ ವೇಳೆ ಮನವರಿಕೆ ಮಾಡಿಕೊಟ್ಟರು.
ಪುಟಿನ್ ಜೊತೆಗಿನ ಮಾತುಕತೆ ಸಂದರ್ಭ ರಷ್ಯಾ ಗಡಿಯಲ್ಲಿರುವ ಉಕ್ರೇನ್ ನಗರ ಸುಮಿಯಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಮೋದಿ ಆತಂಕ ವ್ಯಕ್ತಪಡಿಸಿದರು. ಈ ವೇಳೆ ಪುಟಿನ್ ಅವರು ಪ್ರಮುಖ ನಗರಗಳಲ್ಲಿ ಸಿಲುಕಿರುವ ನಾಗರಿಕರು ಹೊರ ನಡೆಯಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ರೂಪಿಸಿರುವ ಕದನ ವಿರಾಮದ ಶಿಷ್ಟಾಚಾರಗಳು ಮತ್ತು ಸುರಕ್ಷಿತ ಕಾರಿಡಾರ್ಗಳ ಬಗ್ಗೆ ವಿವರಿಸಿದರು. ಭಾರತೀಯ ವಿದ್ಯಾರ್ಥಿಗಳು ಮತ್ತು ಯಾವುದೇ ದೇಶದ ನಾಗರಿಕರಿಗೆ ರಷ್ಯಾ ಸೇನೆ ತೊಂದರೆ ಕೊಡುವುದಿಲ್ಲ ಎಂದು ಭರವಸೆ ನೀಡಿದರು.
‘ಭಾರತ ಎರಡೂ ದೇಶಗಳ ಜನರನ್ನು ಪ್ರೀತಿಸುತ್ತದೆ, ಗೌರವಿಸುತ್ತದೆ’ ಎಂಬ ನಿಲುವಿಗೆ ಭಾರತ ಸರ್ಕಾರ ಬದ್ಧವಾಗಿದೆ. ಈ ಅಂಶವನ್ನು ಸಂದರ್ಭ ಸಿಕ್ಕಾಗಲೆಲ್ಲಾ ಹಲವು ರೀತಿಯಲ್ಲಿ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದೆ. ಉಕ್ರೇನ್ಗೆ ಮಾನವೀಯ ನೆಲೆಗಟ್ಟಿಯಲ್ಲಿ ಪರಿಹಾರ ಸಾಮಗ್ರಿಗಳನ್ನು ಕಳಿಸಿಕೊಟ್ಟರೂ ರಷ್ಯಾ ನಡೆಯನ್ನು ಕಟುವಾಗಿ ಖಂಡಿಸದಿರುವುದೂ ಸಹ ಭಾರತ ಸರ್ಕಾರದ ನಿಲುವಿನ ಒಂದು ಭಾಗ. ತನ್ನ ಈ ನಿಲುವಿವಾಗಿ ಅಮೆರಿಕದ ಕೆಂಗಣ್ಣಿಗೂ ಗುರಿಯಾಗಿದೆ. ಎರಡೂ ದೇಶಗಳ ವಿಶ್ವಾಸ ಗಳಿಸಿರುವ ಭಾರತ ಸರ್ಕಾರವು ಈ ಅಂಶಗಳನ್ನೇ ಆಧಾರವಾಗಿ ಇರಿಸಿಕೊಂಡು ಮಧ್ಯಸ್ಥಿಕೆ ವಹಿಸುವ ಸಾಧ್ಯತೆಗಳ ಬಗ್ಗೆ ಪ್ರಸ್ತಾವ ಮಂಡಿಸಿದೆ. ವೈಯಕ್ತಿಕ ನೆಲೆಗಟ್ಟಿನಲ್ಲಿಯೂ ಝೆಲೆನ್ಸ್ಕಿ ಮತ್ತು ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಗೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಭಾರತ ಮಧ್ಯಸ್ಥಿಕೆ ವಹಿಸಿದರೆ ಫಲಪ್ರದ ಫಲಿತಾಂಶ ಬಂದು, ಸಮಯ ನಿಲ್ಲಬಹುದು ಎಂಬ ಆಶಯವನ್ನೂ ಹಲವು ದೇಶಗಳು ವ್ಯಕ್ತಪಡಿಸಿದೆ.
ಮಧ್ಯಸ್ಥಿಕೆಗೆ ಆಸಕ್ತಿ ತೋರಿದ ಇಸ್ರೇಲ್
ರಷ್ಯಾ-ಉಕ್ರೇನ್ ಸಂಘರ್ಷ ಶಮನಕ್ಕಾಗಿ ಭಾರತದಂತೆ ಇಸ್ರೇಲ್ ಸಹ ಉತ್ಸಾಹ ತೋರಿದೆ. ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಶನಿವಾರ ಮಾಸ್ಕೊಗೆ ಅಚ್ಚರಿಯ ಭೇಟಿ ನೀಡಿದ್ದರು. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸ್ವತಃ ಯಹೂದಿ ಆಗಿರುವುದು ಈ ಸಂಧಾನದ ಬಗ್ಗೆ ಆಶಯಗಳನ್ನು ಹುಟ್ಟುಹಾಕಿದೆ. ಇಸ್ರೇಲ್ ಪ್ರಧಾನಿಯ ಪ್ರಯತ್ನಗಳನ್ನು ಝೆಲೆನ್ಸ್ಕಿ ಸಹ ಹೊಗಳಿದ್ದರು.
ಇದನ್ನೂ ಓದಿ: ಉಕ್ರೇನ್ನಲ್ಲಿ ಫಲಕೊಡುತ್ತಿದೆ ಎಂಜಿಆರ್ ತಂತ್ರ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಬದುಕಿನ ಮೇಲೆ ತಮಿಳುನಾಡಿನ ಎಂಜಿಆರ್ ಛಾಯೆ