Pariksha Pe Charcha: ಟೀಕೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ
Prime Minister Narendra Modi Interaction With Students- ನೀವು ಪ್ರಾಮಾಣಿಕವಾಗಿದ್ದು ಕಷ್ಟಪಡುವವರಾಗಿದ್ದರೆ ಟೀಕೆಗಳ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಈ ಟೀಕೆಗಳೇ ನಿಮಗೆ ಶಕ್ತಿಯಾಗಬಹುದು. ನಿಮ್ಮ ಗುರಿಗಳತ್ತ ಗಮನ ನೆಟ್ಟಿರಲಿ ಎಂದು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳಿದರು.
ನವದೆಹಲಿ: ನರೇಂದ್ರ ಮೋದಿ (PM Narendra Modi) ಟೀಕೆಗಳನ್ನು ಸಹಿಸಲ್ಲ ಎಂಬ ಟೀಕಾಕಾರರ ಟೀಕೆಗಳಿಗೆ ಪ್ರಧಾನಿಗಳು ಇಂದು ಶುಕ್ರವಾರ ತಮ್ಮದೇ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಇಂದು ವಿದ್ಯಾರ್ಥಿಗಳೊಂದಿಗೆ ಅವರು ಆನ್ಲೈನ್ನಲ್ಲಿ ನಡೆಸಿದ ಪರೀಕ್ಷಾ ಪೇ ಚರ್ಚಾ (Pariksha Pe Charcha) ಕಾರ್ಯಕ್ರಮದಲ್ಲಿ ಟೀಕೆಗಳನ್ನು ಹೇಗೆ ಸ್ವೀಕರಿಸಬೇಕು ಎಂದು ಕೆಲ ಸಲಹೆಗಳನ್ನು ನೀಡಿದರು. ಟೀಕೆಯು (Criticism) ಪ್ರಜಾತಂತ್ರದ ಶುದ್ಧೀಕರಣ ಎಂಬುದು ಅವರ ಅನಿಸಿಕೆ.
ಟೀಕೆಗಳನ್ನು ಹೇಗೆ ಎದುರಿಸಬೇಕು ಎಂದು ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯೊಬ್ಬರು ಪ್ರಶ್ನೆ ಕೇಳಿದಾಗ ಪ್ರಧಾನಿಗಳು, “ಈ ಪ್ರಶ್ನೆ ಸಿಲಾಬಸ್ ಹೊರಗಿನದ್ದು. ಟೀಕೆ ಒಂದು ಅಸೀಮ ಶಕ್ತಿ. ಆರೋಗ್ಯಯುತ ಪ್ರಜಾತಂತ್ರಕ್ಕೆ ಅದು ಶುದ್ಧಿ ಯಜ್ಞದಂತೆ” ಎಂದು ಅವರು ಉತ್ತರಿಸಿದರು.
ಸಕಾರಾತ್ಮಕ ಟೀಕೆ ಮತ್ತು ಅನಗತ್ಯ ತಡೆ ಮಧ್ಯೆ ಇರುವ ವ್ಯತ್ಯಾಸವನ್ನು ಒತ್ತಿಹೇಳಿದ ಅವರು, ಅಂಕಗಳ ವಿಚಾರದಲ್ಲಿ ವಿದ್ಯಾರ್ಥಿಗಳ ಮೇಲೆ ಪೋಷಕರು ಅನವಶ್ಯಕವಾಗಿ ಒತ್ತಡ ಹಾಕಬಾರದು ಎಂದು ಸಲಹೆ ನೀಡಿದರು.
“ನೀವು ಪ್ರಾಮಾಣಿಕವಾಗಿದ್ದು ಕಷ್ಟಪಡುವವರಾಗಿದ್ದರೆ ಟೀಕೆಗಳ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಈ ಟೀಕೆಗಳೇ ನಿಮಗೆ ಶಕ್ತಿಯಾಗಬಹುದು. ನಿಮ್ಮ ಗುರಿಗಳತ್ತ ಗಮನ ನೆಟ್ಟಿರಲಿ” ಎಂದರು.
“ಕುಟುಂಬದಿಂದ ಒಂದಷ್ಟು ನಿರೀಕ್ಷೆಗಳು ಇರುವುದು ಸಹಜ. ಆದರೆ, ಸಾಮಾಜಿಕ ಸ್ಥಾನಮಾನದ ದೃಷ್ಟಿಯಿಂದ ಕುಟುಂಬವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರೆ ಅದು ಸರಿಯಲ್ಲ. ಒತ್ತಡಗಳಿಂದ ಕುಗ್ಗಿಹೋಗಬಾರದು. ಗಮನದಿಂದ ವಿಚಲಿತರಾಗದಿರಿ. ಆಲೋಚಿಸಿ, ವಿಶ್ಲೇಷಿಸಿ ಮುಂದುವರಿಯಿರಿ. ನಿಮ್ಮ ಗುರಿ ಸಾಧನೆಗೆ ಪೂರ್ಣ ಪ್ರಯತ್ನ ಹಾಕಿ” ಎಂದು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಧಾನಿಗಳು ತಿಳಿಸಿದರು.
ಪ್ರಧಾನಿಗಳ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಲಕ್ಷದಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಳೆದ ಆರು ವರ್ಷಗಳಿಂದ ಪ್ರತೀ ವರ್ಷವೂ ಸಾರ್ವತ್ರಿಕ ಪರೀಕ್ಷೆಗಳಿಗೆ ಮುನ್ನ ಪ್ರಧಾನಿಗಳು ಈ ಕಾರ್ಯಕ್ರಮ ನಡೆಸಿ ಮಕ್ಕಳೊಂದಿಗೆ ಸಂವಾದ ನಡೆಸುತ್ತಾರೆ. ಈ ವರ್ಷದ ಕಾರ್ಯಕ್ರಮಕ್ಕೆ 38 ಲಕ್ಷ ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದು ಗಮನಾರ್ಹ. ಪರೀಕ್ಷೆಗಳನ್ನು ಹೇಗೆ ಎದುರಿಸುವುದು ಇತ್ಯಾದಿ ಸಂಗತಿಗಳನ್ನು ಅವರು ಈ ಸಂದರ್ಭದಲ್ಲಿ ತಿಳಿಸಿಕೊಡುತ್ತಾರೆ.
ಕಾಪಿ ಚೀಟಿ ಹೊಡೆಯುವವರ ಕಾಲೆಳೆದ ಪ್ರಧಾನಿ
ಈ ಬಾರಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪರೀಕ್ಷೆಗಳನ್ನು ಪ್ರಾಮಾಣಿಕವಾಗಿ ಎದುರಿಸುವುದು ಎಷ್ಟು ಮಹತ್ವದ್ದು ಎಂದು ತಿಳಿಸಿಕೊಟ್ಟರು.
“ಕೆಲ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಚೀಟಿಂಗ್ ಮಾಡಲು ನಾನಾ ತಂತ್ರಗಳನ್ನು ಅನುಸರಿಸುತ್ತಾರೆ. ಅಂಥ ಮಕ್ಕಳು ತಮ್ಮ ಬುದ್ಧಿವಂತಿಕೆಯನ್ನು ಒಳ್ಳೆಯ ರೀತಿಯಲ್ಲಿ ಬಳಸಿದರೆ ಯಶಸ್ಸು ಸಾಧಿಸಬಹುದು. ನಾವು ಜೀವನದಲ್ಲಿ ಶಾರ್ಟ್ಕಟ್ ಮಾರ್ಗ ಬಳಸಬಾರದು” ಎಂದೂ ಪ್ರಧಾನಿ ನರೇಂದ್ರ ಮೋದಿ ಹೇಳಿದರು.