ದೆಹಲಿ: ಇಂದು ನಮ್ಮ ದೇಶವು ಮಹತ್ವದ ನಿರ್ಣಯ ತೆಗೆದುಕೊಂಡಿದೆ. 15ರಿಂದ 18 ವರ್ಷದ ಮಕ್ಕಳಿಗೆ ದೇಶದಲ್ಲಿ ಲಸಿಕೆ ನೀಡುತ್ತೇವೆ. 3ನೇ ಜನವರಿ ಸೋಮವಾರದಿಂದ ಮಕ್ಕಳಿಗೆ ಲಸಿಕೆ ವಿತರಣೆ ಆರಂಭವಾಗಲಿದೆ. ಆರೋಗ್ಯ ಕಾರ್ಯಕರ್ತರಿಗೆ ಜನವರಿ 10ರಿಂದ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೇಶವನ್ನು ಉದ್ದೇಶಿಸಿ ತುರ್ತು ಭಾಷಣ ಮಾಡಿದ ಪ್ರಧಾನಿ, ಒಮಿಕ್ರಾನ್ ಬಗ್ಗೆ ಆತಂಕಿತರಾಗಬೇಡಿ, ಆದರೆ ಎಚ್ಚರ ವಹಿಸಿ ಎಂದು ಕಿವಿಮಾತು ಹೇಳಿದರು.
ಶಾಲಾ, ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ವ್ಯಾಕ್ಸಿನ್ ನೀಡುತ್ತೇವೆ. ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಪ್ರಿಕಾಶನ್ ಡೋಸ್ (ಮುಂಜಾಗರೂಕತೆ ಲಸಿಕೆ) ನೀಡುತ್ತೇವೆ. ದೇಶದಲ್ಲಿ ಲಸಿಕಾಕರಣ ಪ್ರಕ್ರಿಯೆ ಆರಂಭವಾಗಿ 11 ತಿಂಗಳಾಗಿದೆ. ಸಾಮೂಹಿಕ ಇಚ್ಛಾಶಕ್ತಿಯಿಂದ ಕೊರೊನಾ ವಿರುದ್ಧ ನಾವು ಹೋರಾಟ ಮುಂದುವರಿಸಬೇಕಿದೆ. ಕೊವಿಡ್, ಒಮಿಕ್ರಾನ್ ಬಗ್ಗೆ ಆತಂಕಬೇಡ, ಎಚ್ಚರಿಕೆ ಇರಲಿ. ದೇಶದಲ್ಲಿ ಈವರೆಗೆ 141 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಶೇ 61ರಷ್ಟು ಯುವಕರಿಗೆ ಲಸಿಕೆ ನೀಡಲಾಗಿದೆ. ಜನರನ್ನು ಆರೋಗ್ಯವಾಗಿ ಇರಿಸಲು ನಿರಂತರ ಶ್ರಮಿಸುತ್ತಿದ್ದೇವೆ. ಲಸಿಕಾ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.
ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು, ಹೊಸವರ್ಷ 2022 ಸ್ವಾಗತಿಸೋಣ ಎಂದು ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ದೇಶದಲ್ಲಿ ಒಮಿಕ್ರಾನ್ ಸೋಂಕು ನಮ್ಮನ್ನು ಕಾಡುತ್ತಿದೆ. ಕೊರೊನಾ ರೂಪಾಂತರಿಯಾಗಿ ಪರಿವರ್ತನೆ ಹೊಂದುತ್ತಿದೆ. ಹೆಚ್ಚುವರಿ ಐಸಿಯು, ಆಕ್ಸಿಜನ್ ಬೆಡ್‌ಗಳನ್ನು ಸಿದ್ಧಪಡಿಸಿದ್ದೇವೆ. ವಿಶ್ವದಾದ್ಯಂತ ಒಮಿಕ್ರಾನ್ ಸೋಂಕು ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ದೇಶದ ಎಲ್ಲ ನಾಗರಿಕರ ಸಾಮಾಹಿಕ ಪರಿಶ್ರಮ ಮತ್ತು ಇಚ್ಛಾಶಕ್ತಿಯಿಂದಾಗಿ 100 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲು ಸಾಧ್ಯವಾಗಿದೆ. ಭಾರತದ ದೊಡ್ಡ ಜನಸಂಖ್ಯೆಯಲ್ಲಿ ಬಹುತೇಕರಿಗೆ ಎರಡು ಡೋಸ್ ಲಸಿಕೆಗಳು ಸಿಕ್ಕಿವೆ. ಲಸಿಕೆ ವಿತರಣೆಗೆ ಸಂಬಂಧಿಸಿದ ಐಟಿ ಮತ್ತು ಇತರ ಪೂರಕ ಕ್ರಮಗಳಿಗೂ ಸರ್ಕಾರ ಆದ್ಯತೆ ನೀಡಿದೆ. ವಿಶ್ವದಲ್ಲಿ ಅತಿಹೆಚ್ಚು ಜನರಿಗೆ ನಾವು ಲಸಿಕೆ ನೀಡಿದ್ದೇವೆ ಎಂದರು.
ಉತ್ತರಖಂಡ, ಗೋವಾ, ಹಿಮಾಚಲ ಪ್ರದೇಶದಲ್ಲಿ ಶೇ 100ರಷ್ಟು ಲಸಿಕಾಕರಣವಾಗಿದೆ. ದೇಶದ ದೂರದೂರದ ಹಳ್ಳಿಗಳಲ್ಲಿಯೂ ಸಂಪೂರ್ಣ ಲಸಿಕಾಕರಣ ಆಗಿರುವ ಸುದ್ದಿ ಬಂದಾಗ ಮನಸ್ಸಿಗೆ ಸಂತೋಷವಾಗುತ್ತದೆ. ಒಂದು ತಂಡವಾಗಿ ನಾವು ಕೆಲಸ ಮಾಡಿದ್ದೇವೆ. ನಮ್ಮ ಅರೋಗ್ಯ ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ನಮ್ಮ ದೇಶದಲ್ಲಿ ಬೇಗನೇ ಮೂಗಿನಿಂದ ಕೊಡುವ ಲಸಿಕೆ ಮತ್ತು ಡಿಎನ್ಎ ಲಸಿಕಾಕರಣವೂ ಆರಂಭವಾಗಲಿದೆ ಎಂದರು.
ಇದನ್ನೂ ಓದಿ: ಕುಶಾಲನಗರ ಖಾಸಗಿ ಶಾಲೆಯ 26 ವಿದ್ಯಾರ್ಥಿಗಳಿಗೆ ಕೊರೊನಾ ದೃಢ; ಒಮಿಕ್ರಾನ್ ಆತಂಕ ಹಿನ್ನೆಲೆ ಭಾನುವಾರ ಸಿಎಂ ಸಭೆ
Published On - 9:47 pm, Sat, 25 December 21