ಕೃಷಿ ಸ್ವಾವಲಂಬನೆ ಕುರಿತು ಗಂಭೀರ ಚಿಂತನೆ: ನೀತಿ ಆಯೋಗ ಆಡಳಿತ ಮಂಡಳಿ ಸಭೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಭಾಗಿ

ಇಂದಿನ ಸಭೆಯಲ್ಲಿ ಬೆಳೆ ವೈವಿಧ್ಯ, ಎಣ್ಣೆಬೀಜಗಳು ಮತ್ತು ಧಾನ್ಯಗಳು, ಕೃಷಿ ಉತ್ಪನ್ನಗಳಲ್ಲಿ ಸ್ವಾವಲಂಬನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

ಕೃಷಿ ಸ್ವಾವಲಂಬನೆ ಕುರಿತು ಗಂಭೀರ ಚಿಂತನೆ: ನೀತಿ ಆಯೋಗ ಆಡಳಿತ ಮಂಡಳಿ ಸಭೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಭಾಗಿ
ಪ್ರಧಾನಿ ನರೇಂದ್ರ ಮೋದಿ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Aug 07, 2022 | 7:13 AM

ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾನುವಾರ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯಲಿರುವ ನೀತಿ ಆಯೋಗ ಆಡಳಿತ ಮಂಡಳಿಯ (NITI Aayog Governing Council Meeting) 7ನೇ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನೂ ಅವರೇ ವಹಿಸಲಿದ್ದಾರೆ. ಜುಲೈ 2019ರ ನಂತರ ಇದೇ ಮೊದಲ ಬಾರಿಗೆ ನೀತಿ ಆಯೋಗದ ಸಭೆಯು ಮುಖತಃ ನಡೆಯುತ್ತಿದೆ. ಕೊವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ವರ್ಚುವಲ್ ಮೀಟಿಂಗ್​ಗಳು ನಡೆದಿದ್ದವು.

ಇಂದಿನ ಸಭೆಯಲ್ಲಿ ಬೆಳೆ ವೈವಿಧ್ಯ, ಎಣ್ಣೆ ಬೀಜಗಳು ಮತ್ತು ಧಾನ್ಯಗಳು, ಕೃಷಿ ಉತ್ಪನ್ನಗಳಲ್ಲಿ ಸ್ವಾವಲಂಬನೆ, ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ, ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ನಗರಾಡಳಿತದ ಬಗ್ಗೆ ಚರ್ಚೆ ನಡೆಯಲಿದೆ.

ಸ್ಥಿರ, ಸುಸ್ಥಿರ ಮತ್ತು ಎಲ್ಲರನ್ನೂ ಒಳಗೊಳ್ಳುವ ಭಾರತ ನಿರ್ಮಾಣದ ಕನಸು ಸಾಕಾರಗೊಳಿಸುವ ಉದ್ದೇಶದಿಂದ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿಗಳೊಂದಿಗೆ ಸಹಯೋಗ ಸಾಧಿಸುವ ಕುರಿತು ವಿಸ್ತೃತ ಚಿಂತನೆ ನಡೆಯಲಿದೆ. ಕೇಂದ್ರ ಸರ್ಕಾರದ ಚಿಂತಕರ ಚಾವಡಿ ಎಂದೇ ಪ್ರಸಿದ್ಧವಾಗಿರುವ ನೀತಿ ಆಯೋಗದ ಸಭೆಗೆ ತನ್ನದೇ ಆದ ಪ್ರಾಮುಖ್ಯತೆಯಿದೆ. ಭಾರತವು 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಸಹಕಾರದ ಒಕ್ಕೂಟ ವ್ಯವಸ್ಥೆಯು ಈ ಕ್ಷಣದ ತುರ್ತಾಗಿದೆ. ‘ಆತ್ಮನಿರ್ಭರ್ ಭಾರತ್’ನ ಕನಸಿನ ಸಾಕಾರಕ್ಕೂ ಇದು ಅತ್ಯಗತ್ಯ ಎಂದು ನೀತಿ ಆಯೋಗದ ಹೇಳಿಕೆಯು ತಿಳಿಸಿದೆ.

ಈ ಸಭೆಯ ಪೂರ್ವ ಸಿದ್ಧತೆಯ ಭಾಗವಾಗಿ ಧರ್ಮಶಾಲಾದಲ್ಲಿ ಜೂನ್ 2022ರಲ್ಲಿ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಮಾವೇಶ ನಡೆದಿತ್ತು. ಇದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 6 ತಿಂಗಳ ಸುದೀರ್ಘ ಪ್ರಯತ್ನಗಳು ಅಂತಿಮ ಘಟ್ಟಕ್ಕೆ ತಲುಪಿದ್ದವು. ಈ ಸಮಾವೇಶವೂ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಯೆ ನಡೆದಿತ್ತು. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕೊವಿಡ್ ಪಿಡುಗು ಅಂತ್ಯಗೊಂಡಿರುವ ಈ ಹೊತ್ತಿನಲ್ಲಿ ಭಾರತವು ‘ಅಮೃತ ಕಾಲ’ದತ್ತ ಮುನ್ನಡೆಯುತ್ತಿದೆ. ಜಿ20 ಒಕ್ಕೂಟದ ಅಧ್ಯಕ್ಷತೆ ವಹಿಸಿರುವ ಭಾರತದಲ್ಲಿಯೇ ಮುಂದಿನ ವರ್ಷ ಸದಸ್ಯ ರಾಷ್ಟ್ರಗಳ ಸಭೆ ನಡೆಯಲಿದೆ. ಭಾರತದ ಅಧ್ಯಕ್ಷತೆಯ ಮಹತ್ವ ಮತ್ತು ಒಕ್ಕೂಟ ವ್ಯವಸ್ಥೆಯ ಪ್ರಾಮುಖ್ಯತೆಯನ್ನೂ ಈ ಸಭೆಯು ಸಾರಿ ಹೇಳಲಿದೆ. ಜಿ-20 ವೇದಿಕೆಯಲ್ಲಿ ಭಾರತದ ವಿವಿಧ ರಾಜ್ಯಗಳು ಸಹ ತಮ್ಮ ಪ್ರಗತಿಯನ್ನು ಸಾರಿ ಹೇಳಲು ಅವಕಾಶವಿದೆ.

ನೀತಿ ಆಯೋಗದ ಆಡಳಿತ ಮಂಡಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್​ಗಳು, ನೀತಿ ಆಯೋಗದ ಉಪಾಧ್ಯಕ್ಷರು, ಸದಸ್ಯರು ಮತ್ತು ವಿಶೇಷ ಆಹ್ವಾನಿತರು ಇರುತ್ತಾರೆ. ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಸಭೆಯನ್ನು ಬಹಿಷ್ಕರಿಸಿದ್ದು, ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada