ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಶತಾಯುಷಿ ತಾಯಿ ಹೀರಾಬೆನ್ ದಾಮೋದರ ಮೋದಿ ಅವರನ್ನು ಭೇಟಿ ಮಾಡಲು ಗುಜರಾತ್‌ಗೆ ತೆರಳಲಿದ್ದಾರೆ. ಪ್ರಧಾನ ಮೋದಿ ಅವರು (Prime Minister Narendra Modi) ಜೂನ್ 17 ಮತ್ತು 18 ರಂದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಜೂನ್ 18 ರಂದು ಬೆಳಿಗ್ಗೆ 9:15 ಕ್ಕೆ, ಪಾವಗಡ ಬೆಟ್ಟದಲ್ಲಿರುವ ಶ್ರೀ ಕಾಳಿಕಾ ಮಾತೆಯ ಪುನರಾಭಿವೃದ್ಧಿ ದೇವಸ್ಥಾನಕ್ಕೆ (Shree Kalika Mata at Pavagadh Hill) ಭೇಟಿ ನೀಡಿ ಉದ್ಘಾಟನೆ ಮಾಡಲಿದ್ದಾರೆ. ನಂತರ 11:30 ಕ್ಕೆ ವಿರಾಸತ್ ವನಕ್ಕೆ ಭೇಟಿ ನೀಡಲಿದ್ದಾರೆ. ನಂತರ, ಮಧ್ಯಾಹ್ನ 12:30 ರ ಸುಮಾರಿಗೆ, ಅವರು ವಡೋದರಾದಲ್ಲಿ ಗುಜರಾತ್ ಗೌರವ್ ಅಭಿಯಾನದಲ್ಲಿ ಭಾಗವಹಿಸುತ್ತಾರೆ. ಅಲ್ಲಿ 21,000 ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.
ಗುಜರಾತ್ ಗೌರವ್ ಅಭಿಯಾನ
ವಡೋದರಾದಲ್ಲಿ ಗುಜರಾತ್ ಗೌರವ್ ಅಭಿಯಾನದಲ್ಲಿ (Gujarat Gaurav Abhiyan) ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಭಾಗವಹಿಸಲಿದ್ದಾರೆ. 16,000 ಕೋಟಿ ರೂ. ಗಳ ವಿವಿಧ ರೈಲ್ವೆ ಯೋಜನೆಗಳಿಗೆ ಪ್ರಧಾನ ಮಂತ್ರಿ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವುಗಳಲ್ಲಿ 357 ಕಿಮೀ ಉದ್ದದ ಹೊಸ ಪಾಲನ್‌ಪುರ್-ಮಾದಾರ್ ಸೆಕ್ಷನ್ ಗೇಜ್ ಪರಿವರ್ತನೆಯನ್ನು ದೇಶಕ್ಕೆ ಸಮರ್ಪಣೆ ಸೇರಿದೆ. 166 ಕಿಮೀ ಉದ್ದದ ಅಹಮದಾಬಾದ್-ಬೋಟಾಡ್ ವಿಭಾಗದ ಗೇಜ್ ಪರಿವರ್ತನೆ; 81 ಕಿಮೀ ಉದ್ದದ ಪಾಲನ್‌ಪುರ- ಮಿಠಾ ವಿಭಾಗದ ವಿದ್ಯುದೀಕರಣ ಯೋಜನೆಗಳು. ರೈಲ್ವೇ ವಲಯದಲ್ಲಿಈ ಯೋಜನೆಗಳ ಶಿಲಾನ್ಯಾಸದ ಜೊತೆಗೆ ಸೂರತ್, ಉದ್ನಾ, ಸೋಮನಾಥ್ ಮತ್ತು ಸಬರಮತಿ ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ಮೋದಿ ಅಡಿಪಾಯ ಹಾಕಲಿದ್ದಾರೆ. ಈ ಯೋಜನೆಗಳು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಈ ಪ್ರದೇಶದಲ್ಲಿ ಉದ್ಯಮ ಮತ್ತು ಕೃಷಿ ವಲಯ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಜೊತೆಗೆ ಈ ಭಾಗದಲ್ಲಿ ಸಂಪರ್ಕವನ್ನು ಸುಧಾರಿಸುವುದು ಮತ್ತು ಪ್ರಯಾಣಿಕರ ಸೌಕರ್ಯಗಳನ್ನು ಹೆಚ್ಚಿಸುವುದೂ ಸಹ ಅಡಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ( Pradhan Mantri Awas Yojana), ನಗರ ಪ್ರದೇಶದಲ್ಲಿ ಸುಮಾರು 1,800 ಕೋಟಿ ರೂಪಾಯಿ ಮೌಲ್ಯದ ಮನೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ 1,530 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಮನೆಗಳು ಸೇರಿದಂತೆ ಒಟ್ಟು 1.38 ಲಕ್ಷ ಮನೆಗಳನ್ನು ಪ್ರಧಾನ ಮಂತ್ರಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಇದರೊಂದಿಗೆ ಸುಮಾರು 310 ಕೋಟಿ ರೂಪಾಯಿ ಮೌಲ್ಯದ ಸುಮಾರು 3000 ಮನೆಗಳ ಖಾತಾ ವಿತರಣೆ ಮುಹೂರ್ತ (Khat Muhurat) ಕೂಡ ನಡೆಯಲಿದೆ.
ಪ್ರಧಾನಿ ಮೋದಿ ಭೇಟಿ ಕಾರ್ಯಕ್ರಮದ ಸಮಯದಲ್ಲಿ ಖೇಡಾ, ಆನಂದ್, ವಡೋದರಾ, ಛೋಟಾ ಉದೇಪುರ್ ಮತ್ತು ಪಂಚಮಹಲ್‌ನಲ್ಲಿ 680 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಇದೆಲ್ಲಾ ಈ ಪ್ರದೇಶದಲ್ಲಿ ವಾಸಿಸುವವರಿಗೆ ಹೆಚ್ಚು ಸೌಕರ್ಯ ಕಲ್ಪಿಸುವ ಗುರಿಯನ್ನು ಹೊಂದಿದೆ.
ಗುಜರಾತ್‌ನ ದಭೋಯ್ ತಾಲೂಕಿನ ಕುಂಧೇಲಾ ಗ್ರಾಮದಲ್ಲಿ ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯದ ಶಂಕುಸ್ಥಾಪನೆಯನ್ನು ಪ್ರಧಾನಿ ನೆರವೇರಿಸಲಿದ್ದಾರೆ. ವಡೋದರಾ ನಗರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ವಿಶ್ವವಿದ್ಯಾನಿಲಯವನ್ನು ಸುಮಾರು 425 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಮತ್ತು 2500 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಅಗತ್ಯಗಳನ್ನು ಪೂರೈಸುತ್ತದೆ.
ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಮೋದಿ ‘ಮುಖ್ಯಮಂತ್ರಿ ಮಾತೃಶಕ್ತಿ ಯೋಜನೆ’ಯನ್ನು (Mukhyamantri Matrushakti Yojana) ಪ್ರಾರಂಭಿಸಲಿದ್ದು, ಇದು 800 ಕೋಟಿ ರೂ. ಯೋಜನೆಯಡಿ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳಿಂದ 2 ಕೆಜಿ ಕಡಲೆ, 1 ಕೆಜಿ ತೊಗರಿಬೇಳೆ ಮತ್ತು 1 ಕೆಜಿ ಖಾದ್ಯ ಎಣ್ಣೆಯನ್ನು ಉಚಿತವಾಗಿ ನೀಡಲಾಗುತ್ತದೆ. ಪ್ರಧಾನ ಮಂತ್ರಿ ಮೋದಿ ಇದೇ ವೇಳೆ ಸುಮಾರು 120 ಕೋಟಿ ರೂಪಾಯಿಗಳನ್ನು ‘ಪೋಷನ್ ಸುಧಾ ಯೋಜನೆ’ಗಾಗಿ ವಿತರಿಸಲಿದ್ದಾರೆ. ಇದನ್ನು ಈಗ ರಾಜ್ಯದ ಎಲ್ಲಾ ಬುಡಕಟ್ಟು ಫಲಾನುಭವಿಗಳಿಗೂ ವಿಸ್ತರಿಸಲಾಗಿದೆ. ಬುಡಕಟ್ಟು ಜಿಲ್ಲೆಗಳ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ನೀಡುವ ಮತ್ತು ಪೌಷ್ಟಿಕಾಂಶದ ಬಗ್ಗೆ ಶಿಕ್ಷಣ ನೀಡುವ ಪ್ರಯೋಗ ಯಶಸ್ವಿಯಾದ ನಂತರ ಈ ಹೆಜ್ಜೆ ಇಡಲಾಗಿದೆ.
ಪಾವಗಡ ಬೆಟ್ಟದಲ್ಲಿ ಕಾಳಿಕಾ ಮಾತೆಯ ಪುನರುತ್ಥಾನ ದೇವಾಲಯ ಉದ್ಘಾಟನೆ
ಪಾವಗಡ ಬೆಟ್ಟದಲ್ಲಿ ಶ್ರೀ ಕಾಳಿಕಾ ಮಾತೆಯ ಪುನರಾಭಿವೃದ್ಧಿ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಇದು ಈ ಭಾಗದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತಿದೆ. ದೇವಾಲಯದ ಪುನರಾಭಿವೃದ್ಧಿಯನ್ನು 2 ಹಂತಗಳಲ್ಲಿ ಮಾಡಲಾಗಿದೆ. ಮೊದಲ ಹಂತದ ಪುನರಾಭಿವೃದ್ಧಿಯ ಉದ್ಘಾಟನೆಯನ್ನು ಈ ವರ್ಷದ ಆರಂಭದಲ್ಲಿ ಏಪ್ರಿಲ್‌ನಲ್ಲಿ ಪ್ರಧಾನ ಮಂತ್ರಿ ನೆರವೇರಿಸಿದ್ದರು. ಕಾರ್ಯಕ್ರಮದಲ್ಲಿ ಉದ್ಘಾಟನೆಗೊಳ್ಳಲಿರುವ ಎರಡನೇ ಹಂತದ ಪುನರಾಭಿವೃದ್ಧಿಯ ಶಂಕುಸ್ಥಾಪನೆಯನ್ನು 2017 ರಲ್ಲಿ ಪ್ರಧಾನ ಮಂತ್ರಿ ಮೋದಿ ಹಾಕಿದ್ದರು.
Published On - 5:01 pm, Thu, 16 June 22