ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಗುಜರಾತ್ನ ಮೋರ್ಬಿ ಜಿಲ್ಲೆಯಲ್ಲಿ 108 ಅಡಿ ಎತ್ತರದ ಆಂಜನೇಯನ ಮೂರ್ತಿಯನ್ನು ವರ್ಚ್ಯುವಲ್ ಆಗಿ ಉದ್ಘಾಟನೆ ಮಾಡಿದ್ದಾರೆ. ಹನುಮ ಜಯಂತಿ ಹಿನ್ನೆಲೆಯಲ್ಲಿ ಈ ಪ್ರತಿಮೆ ಅನಾವರಣಗೊಂಡಿದ್ದು, ಅದಕ್ಕೂ ಪೂರ್ವ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಇಂದು ಹನುಮಾನ್ ಜಯಂತಿ. ಬೆಳಗ್ಗೆ 11ಗಂಟೆಗೆ ಹನುಮಾನ್ ವಿಗ್ರಹವನ್ನು ಲೋಕಾರ್ಪಣೆಗೊಳಿಸುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಆಂಜನೇಯನ ವಿಗ್ರಹವನ್ನು ಅನಾವರಣಗೊಳಿಸುತ್ತಿರುವುದು ನನಗೆ ಸಂದ ಗೌರವ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು. ನಂತರ ಉದ್ಘಾಟನಾ ಸಮಾರಂಭದ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
Inaugurating a 108 feet statue of Hanuman ji in Morbi, Gujarat. https://t.co/6M0VOXXPmk
— Narendra Modi (@narendramodi) April 16, 2022
ಹನುಮಂತನ ಈ ವಿಗ್ರಹವನ್ನು ಗುಜರಾತ್ನ ಪಶ್ಚಿಮದ ಮೋರ್ಬಿ ಜಿಲ್ಲೆಯಲ್ಲಿನ ಪರಮಪೂಜ್ಯ ಬಾಪು ಕೇಶವಾನಂದ ಆಶ್ರಮದಲ್ಲಿ ನಿರ್ಮಿಸಲಾಗಿದೆ. ದೇಶದ ನಾಲ್ಕು ದಿಕ್ಕುಗಳಿಗೆ ನಾಲ್ಕು ಹನುಮಂತನ ಪ್ರತಿಮೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಅದಕ್ಕೆ ಹನುಮಾನ್ ಜಿ ಚಾರ್ ಧಾಮ್ ಎಂದು ಹೆಸರಿಸಲಾಗಿದೆ. ಈ ನಾಲ್ಕು ಹನುಮಾನ್ ಪ್ರತಿಮೆಗಳಲ್ಲಿ ಗುಜರಾತ್ನ ಮೋರ್ಬಿಯಲ್ಲಿ ಅನಾವರಣಗೊಂಡಿದ್ದು ಎರಡನೇಯದು. ಅಂದಹಾಗೇ, ಮೊದಲನೇಯದ್ದು ಶಿಮ್ಲಾದಲ್ಲಿ (ಉತ್ತರ) 2010ರಲ್ಲಿ ನಿರ್ಮಾಣಗೊಂಡಿದೆ. ಇನ್ನು ದಕ್ಷಿಣ ದಿಕ್ಕಿನಲ್ಲಿ ರಾಮೇಶ್ವರಂನಲ್ಲಿ ಒಂದು ಹನುಮಾನ್ ವಿಗ್ರಹ ನಿರ್ಮಾಣಗೊಳ್ಳಲಿದ್ದು, ಅದರ ಕಾರ್ಯವೂ ಶುರುವಾಗಿದೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.
ಹಾಗೇ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನರಿಗೆ ಹನುಮಾನ್ ಜಯಂತಿ ಶುಭಾಶಯ ಕೋರಿದ್ದಾರೆ. ಆಂಜನೇಯನ ಜಯಂತಿಯಾದ ಇಂದು ದೇಶದ ಎಲ್ಲರಿಗೂ ಶುಭಾಶಯಗಳು. ಆಂಜನೇಯನೆಂದರೆ ಶಕ್ತಿ, ಧೈರ್ಯ, ಸಂಯಮದ ಪ್ರತೀಕ. ಆ ಪವನಪುತ್ರನ ಕೃಪೆಯಿಂದ ಪ್ರತಿಯೊಬ್ಬರೂ ಶಕ್ತಿ, ಧೈರ್ಯ, ಅರಿವು, ಸದ್ಬುದ್ದಿ ಪಡೆಯುವಂತಾಗಲಿ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಹಲವು ಗಣ್ಯರು ಇಂದು ಹನುಮಾನ್ ಜಯಂತಿ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ: RCB Playing XI: ಡೆಲ್ಲಿ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್ಸಿಬಿಗೆ ಆಘಾತ: ಆ ಪ್ಲೇಯರ್ ಆಡುವುದು ಅನುಮಾನ
Published On - 12:30 pm, Sat, 16 April 22