ಸರ್ಕಾರ ರಚಿಸಿ 1 ತಿಂಗಳು ಪೂರ್ಣ; ಪಂಜಾಬ್ ಜನರಿಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟ ಮುಖ್ಯಮಂತ್ರಿ ಭಗವಂತ್ ಮಾನ್
ಪಂಜಾಬ್ ಅಭಿವೃದ್ಧಿಯೇ ನಮ್ಮ ಗುರಿ ಎಂದು ಹೇಳಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಈಗಾಗಲೇ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ.
ಪಂಜಾಬ್ ಜನರಿಗೆ ಆಪ್ ಸರ್ಕಾರ ಗುಡ್ ನ್ಯೂಸ್ವೊಂದನ್ನು ನೀಡಿದೆ. ಜುಲೈ 1ರಿಂದ 300 ಯೂನಿಟ್ ವಿದ್ಯುತ್ನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದೆ. ಆಪ್ ಅಧಿಕಾರ ಹಿಡಿದು ಒಂದು ತಿಂಗಳು ಪೂರ್ಣಗೊಂಡ ಬೆನ್ನಲ್ಲೇ ಈ ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ. ಗುರುವಾರ ಜಲಂಧರ್ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ್ದ ಪಂಜಾಬ್ ಸಿಎಂ ಭಗವಂತ್ ಮಾನ್, ನಾವು ಏಪ್ರಿಲ್ 16ರಂದು ಇಲ್ಲಿನ ಜನರಿಗೆ ಒಂದು ಬಹುದೊಡ್ಡ ಸುದ್ದಿ ಕೊಡಲಿದ್ದೇವೆ ಎಂದಿದ್ದರು. ಅದರಂತೆ ಜುಲೈ 1ರಿಂದ 300 ಯೂನಿಟ್ ವಿದ್ಯುತ್ನ್ನು ಉಚಿತವಾಗಿ ಕೊಡುವ ಘೋಷಣೆ ಮಾಡಿದ್ದಾರೆ.
ಭಗವಂತ್ ಮಾನ್ ಅವರು ಮಂಗಳವಾರ (ಏಪ್ರಿಲ್ 12) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರನ್ನು ಭೇಟಿಯಾಗಿ ಉಚಿತ ವಿದ್ಯುತ್ ನೀಡುವ ಬಗ್ಗೆ ಚರ್ಚಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಗೂ ಪೂರ್ವ ಆಪ್ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ಇದೂ ಇತ್ತು. ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಇಲ್ಲಿನ ಪ್ರತಿ ಮನೆಗೂ 300 ಯೂನಿಟ್ವರೆಗಿನ ವಿದ್ಯುತ್ನ್ನು ಉಚಿತವಾಗಿ ನೀಡಲಾಗುತ್ತದೆ ಎಂಬ ಭರವಸೆ ಕೊಟ್ಟಿದ್ದರು. ಆ ಭರವಸೆಯನ್ನೀಗ ಸರ್ಕಾರ ಉಳಿಸಿಕೊಂಡಿದೆ.
ದೆಹಲಿಯಲ್ಲಿ ಮಾತ್ರ ಆಡಳಿತ ಹಿಡಿದಿದ್ದ ಆಮ್ ಆದ್ಮಿ ಪಕ್ಷ ಈ ಬಾರಿ ಪಂಜಾಬ್ನಲ್ಲೂ ಸರ್ಕಾರ ರಚನೆ ಮಾಡುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಪಂಜಾಬ್ ಅಭಿವೃದ್ಧಿಯೇ ನಮ್ಮ ಗುರಿ ಎಂದು ಹೇಳಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಈಗಾಗಲೇ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಮನೆ ಬಾಗಿಲಿಗೆ ಪಡಿತರ ಡಿಲೆವರಿ ಕೊಡುವ ಯೋಜನೆಯನ್ನು ಕಳೆದ ತಿಂಗಳು ಜಾರಿಗೆ ತರಲಾಗಿದೆ. ಇದೂ ಕೂಡ ಆಪ್ ಚುನಾವಣಾ ಪ್ರಣಾಳಿಕೆಯಲ್ಲಿದ್ದ ಪ್ರಮುಖ ಯೋಜನೆಯಾಗಿತ್ತು. ಪಂಜಾಬ್ನಲ್ಲಿ ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತೊಗೆಯುವುದಾಗಿ ಹೇಳಿರುವ ಮಾನ್, ಈಗಾಗಲೇ ಅದಕ್ಕಾಗಿ ಸಹಾಯವಾಣಿಯನ್ನೂ ಪ್ರಾರಂಭಿಸಿದ್ದಾರೆ. ಯಾರೇ ಹಣ ಕೇಳಿದರೂ, ಕೊಡುವುದಿಲ್ಲ ಎನ್ನಬೇಡಿ, ಬದಲಿಗೆ ಈ ನಂಬರ್ಗೆ ಕರೆ ಮಾಡಿ ಎಂದು ಒಂದು ಹೆಲ್ಪ್ಲೈನ್ ನಂಬರ್ನ್ನು ಅಲ್ಲಿನ ಸಾರ್ವಜನಿಕರಿಗೆ ನೀಡಲಾಗಿದೆ.
ಆಗಲೇ ಹೇಳಿದಂತೆ ಪಂಜಾಬ್ನಲ್ಲಿ ಆಪ್ ಪಕ್ಷ ಅಧಿಕಾರಕ್ಕೆ ಬಂದಿದ್ದು ಇತಿಹಾಸ. ಆಡಳಿತದಲ್ಲಿದ್ದ ಕಾಂಗ್ರೆಸ್ ಅತ್ಯಂತ ಹೀನಾಯವಾಗಿ ಸೋತಿದೆ. ದೆಹಲಿಯಲ್ಲೂ ಕೂಡ ಅರವಿಂದ್ ಕೇಜ್ರಿವಾಲ್ ತಮ್ಮ ಜನಪರ ಯೋಜನೆಗಳ ಮೂಲಕವೇ ಎರಡನೇ ಅವಧಿಗೆ ಅಧಿಕಾರ ಹಿಡಿದಿದ್ದಾರೆ. ಮುಂದಿನ ಗುರಿ ಗುಜರಾತ್, ಹಿಮಾಚಲಯ ಪ್ರದೇಶಗಳು ಎಂದು ಹೇಳಿಕೊಂಡಿದ ಆಮ್ ಆದ್ಮಿ ಪಾರ್ಟಿ ಅಲ್ಲಿ ಪಕ್ಷ ಸಂಘಟನೆಗಾಗಿ ಸಿದ್ಧತೆ ನಡೆಸಿದೆ. ಈ ವರ್ಷಾಂತ್ಯದಲ್ಲಿ ಅದೆರಡೂ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: David Warner: ವಾರ್ನರ್ ಮೈಮೇಲೆ ವೈಲೆನ್ಸ್ ರಾಕಿ ಭಾಯ್: ಆರ್ಸಿಬಿ ತಂಡಕ್ಕೆ ದೊಡ್ಡ ಸಿಗ್ನಲ್ ಕೊಟ್ಟ ಡೇವಿಡ್
Published On - 9:58 am, Sat, 16 April 22