ಕರ್ನಾಟಕದ ಜನರಿಗೆ ಕನ್ನಡದಲ್ಲೇ ಸಂಕ್ರಾಂತಿಯ ಶುಭಾಶಯ ಕೋರಿದ ಪ್ರಧಾನಿ ಮೋದಿ

ಇಂದು ಮಕರ ಸಂಕ್ರಾಂತಿ. ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಈ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲೇ ಹಲವು ರಾಜ್ಯಗಳಲ್ಲಿ ಹಲವು ಹೆಸರುಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹೀಗಾಗಿ, ಆಯಾ ರಾಜ್ಯದ ಜನರಿಗೆ ಆಯಾ ಭಾಷೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ಸಂಕ್ರಾಂತಿ ಹಾಗೂ ಪೊಂಗಲ್ ಶುಭಾಶಯ ಕೋರಿದ್ದಾರೆ. ಇಂದು ದೆಹಲಿಯಲ್ಲಿರುವ ದಕ್ಷಿಣ ಭಾರತದ ಸಂಸದರ ನಿವಾಸದಲ್ಲಿ ಪ್ರಧಾನಿ ಮೋದಿ ಪೊಂಗಲ್ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.

ಕರ್ನಾಟಕದ ಜನರಿಗೆ ಕನ್ನಡದಲ್ಲೇ ಸಂಕ್ರಾಂತಿಯ ಶುಭಾಶಯ ಕೋರಿದ ಪ್ರಧಾನಿ ಮೋದಿ
Pm Modi

Updated on: Jan 14, 2026 | 3:41 PM

ನವದೆಹಲಿ, ಜನವರಿ 14: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಕರ್ನಾಟಕದ ಸಮಸ್ತ ಜನರಿಗೆ ಮಕರ ಸಂಕ್ರಾಂತಿಯ (Makar Sankranti) ಶುಭ ಹಾರೈಸಿದ್ದಾರೆ. ಕನ್ನಡದಲ್ಲೇ ಪತ್ರ ಬರೆದು ಅವರು ಶುಭಾಶಯ ಕೋರಿರುವುದು ವಿಶೇಷ. ಈ ಪತ್ರವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮಿಳು, ತೆಲುಗು, ಹಿಂದಿ, ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಪತ್ರ ಬರೆದು ಆಯಾ ರಾಜ್ಯದ ಜನರಿಗೆ ಸಂಕ್ರಾಂತಿ/ ಪೊಂಗಲ್ ಶುಭಾಶಯ ಕೋರಿದ್ದಾರೆ.

ಪತ್ರದ ಮೂಲಕ ಪ್ರಧಾನಿ ಮೋದಿ ಸಂಕ್ರಾಂತಿಯ ಶುಭಾಶಯ ತಿಳಿಸಿದ್ದಾರೆ. ಆತ್ಮೀಯ ಸಹ ನಾಗರಿಕರೇ, ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಸೂರ್ಯನ ಪಥ ಬದಲಾವಣೆಯ ಹೊಸ ಆರಂಭವನ್ನು ಸೂಚಿಸುವ ಸಂಕ್ರಾಂತಿಯು ಭರವಸೆ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ. ದೇಶಾದ್ಯಂತ ವಿವಿಧ ರೂಪಗಳಲ್ಲಿ, ಆದರೆ ಅಷ್ಟೇ ಉತ್ಸಾಹದಿಂದ ಆಚರಿಸಲಾಗುವ ಈ ಹಬ್ಬವು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಈ ಹಬ್ಬ ನಮ್ಮನ್ನೆಲ್ಲ ಒಟ್ಟಾಗಿ ಬೆಸೆಯುವ ಒಗ್ಗಟ್ಟಿನ ಭಾವನೆಯನ್ನು ನೆನಪಿಸುತ್ತದೆ ಎಂದು ಪ್ರಧಾನಿ ಮೋದಿ ಪತ್ರದಲ್ಲಿ ಬರೆದಿದ್ದಾರೆ.


ಇದನ್ನೂ ಓದಿ: Makar Sankranti 2026: ಸಂಕ್ರಾಂತಿಯಂದು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ; ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಸಂಕ್ರಾಂತಿ ಹಬ್ಬವು ನಮ್ಮ ರೈತರು ಮತ್ತು ಅವರ ಕುಟುಂಬಗಳ ಜೀವನದಲ್ಲಿ ವಿಶೇಷ ಸ್ಥಾನಮಾನ ಹೊಂದಿದೆ. ಇದು ನಮ್ಮ ಅನ್ನದಾತರಿಗೆ ಕೃತಜ್ಞತೆಯನ್ನು ಸಲ್ಲಿಸುವ ಮತ್ತು ಆ ಮೂಲಕ ನಮ್ಮ ಸಮಾಜವನ್ನು ಬಲಪಡಿಸುವ ಸಂದರ್ಭವಾಗಿದೆ. ಸಂಕ್ರಾಂತಿಯು ನಮ್ಮನ್ನು ಆತ್ಮವಿಶ್ವಾಸ ಮತ್ತು ಆಶಾವಾದದೊಂದಿಗೆ ಮುನ್ನಡೆಯಲು ಪ್ರೋತ್ಸಾಹಿಸುತ್ತದೆ. ನಿಮ್ಮ ಮುಂದಿನ ದಿನಗಳು ಯಾವಾಗಲೂ ಸಮೃದ್ಧಿ, ಸಕಾರಾತ್ಮಕತೆ ಮತ್ತು ಉತ್ತಮ ಆರೋಗ್ಯದಿಂದ ಕೂಡಿರಲಿ. ನಿಮ್ಮ ಮನೆಯಲ್ಲಿ ಸಂತೋಷ ನೆಲೆಸಲಿ, ನಿಮ್ಮೆಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿ ಮತ್ತು ಸಮಾಜದಲ್ಲಿ ಸಾಮರಸ್ಯ ಮೂಡಲಿ ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.


ಮಕರ ಸಂಕ್ರಾಂತಿ ಭಾರತೀಯ ಪರಂಪರೆಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಸಂತೋಷ, ಏಕತೆ ಮತ್ತು ಕೃತಜ್ಞತೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಎಳ್ಳು ಮತ್ತು ಬೆಲ್ಲದ ಮಾಧುರ್ಯದಿಂದ ತುಂಬಿರುವ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನಕ್ಕೂ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿ. ಸೂರ್ಯ ದೇವರು ಎಲ್ಲರನ್ನೂ ಆಶೀರ್ವದಿಸಲಿ’ ಎಂದು ಪ್ರಧಾನಿ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:40 pm, Wed, 14 January 26