ಅರ್ಹತೆ ಇಲ್ಲದವರೆಲ್ಲ ಇದ್ದ ಸಭೆಯಲ್ಲಿ ನಾನ್ಯಾಕೆ ಕುಳಿತುಕೊಳ್ಳಲಿ?..ಈಗ ನನ್ನ ಗೌರವಕ್ಕೆ ಧಕ್ಕೆಯಾಗಿದೆ: ಮಮತಾ ಬ್ಯಾನರ್ಜಿ

|

Updated on: May 29, 2021 | 7:41 PM

ರಾಜ್ಯದ ಜನರ ಕಲ್ಯಾಣಕ್ಕಾಗಿ ನನ್ನ ಕಾಲಿಗೆ ಬೀಳು ಎಂದು ಪ್ರಧಾನಿ ಮೋದಿ ಹೇಳಿದರೂ ಅದನ್ನೂ ಮಾಡುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಅರ್ಹತೆ ಇಲ್ಲದವರೆಲ್ಲ ಇದ್ದ ಸಭೆಯಲ್ಲಿ ನಾನ್ಯಾಕೆ ಕುಳಿತುಕೊಳ್ಳಲಿ?..ಈಗ ನನ್ನ ಗೌರವಕ್ಕೆ ಧಕ್ಕೆಯಾಗಿದೆ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us on

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಿದ್ದ, ಯಾಸ್​ ಚಂಡಮಾರುತದಿಂದ ಉಂಟಾದ ಹಾನಿಯ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳದೆ ತಪ್ಪಿಸಿಕೊಂಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇಂದು ಪ್ರಧಾನಿ ಮಂತ್ರಿ ಕಚೇರಿ ವಿರುದ್ಧ ಆರೋಪ ಮಾಡಿದ್ದಾರೆ. ಈ ಭೇಟಿಯ ಬಗ್ಗೆ ಟ್ವೀಟ್ ಮಾಡುವ ಮೂಲಕ ಪಿಎಂಒ ನನ್ನ ಗೌರವಕ್ಕೆ ಧಕ್ಕೆ ತಂದಿದೆ, ಅವಮಾನಿಸಿದೆ ಎಂದು ಹೇಳಿದ್ದಾರೆ.

ಪಶ್ಚಿಮಬಂಗಾಳದಲ್ಲಿ ಚಂಡಮಾರುತದಿಂದ ಉಂಟಾದ ಹಾನಿಯನ್ನು ಪರಿಶೀಲಿಸಲು ಪ್ರಧಾನಿ ಮಂತ್ರಿ, ಇಲ್ಲಿನ ಮುಖ್ಯಮಂತ್ರಿ, ಸರ್ಕಾರದ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದರೆ ಸಾಕು. ಈ ಸಭೆಯಲ್ಲಿ ಬಿಜೆಪಿ ಮುಖಂಡರು, ರಾಜ್ಯಪಾಲರು ಯಾಕೆ ಹಾಜರಿರಬೇಕು ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಭೆ ಕರೆದಿದ್ದರೂ ಮಮತಾ ಬ್ಯಾನರ್ಜಿ ಹಾಜರಾಗಿರಲಿಲ್ಲ. ಅದಾದ ಬಳಿಕ ಬಿಜೆಪಿ ಮುಖಂಡ ಸಂಬಿತ್ ಪಾತ್ರಾ ಟ್ವೀಟ್​ ಮಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜ್ಯಪಾಲ ಜಗದೀಪ್​ ಧಂಕರ್​ ಮತ್ತಿತರ ಕೇಂದ್ರ ಸಚಿವರು ಸಭೆಯಲ್ಲಿ ಕುಳಿತು ಸುಮಾರು ಅರ್ಧಗಂಟೆ ಮುಖ್ಯಮಂತ್ರಿಗಾಗಿ ಕಾದಿದ್ದಾರೆ ಎಂದು ಹೇಳಿದ್ದರು. ಅಲ್ಲದೆ, ಇದಕ್ಕೆ ಸಂಬಂಧಪಟ್ಟ ಒಂದು ಫೋಟೋವನ್ನೂ ಶೇರ್​ ಮಾಡಿದ್ದರು. ಈ ಟ್ವೀಟ್​ ಬಗ್ಗೆ ಮಮತಾ ಬ್ಯಾನರ್ಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜ್ಯದ ಜನರ ಕಲ್ಯಾಣಕ್ಕಾಗಿ ನನ್ನ ಕಾಲಿಗೆ ಬೀಳು ಎಂದು ಪ್ರಧಾನಿ ಮೋದಿ ಹೇಳಿದರೂ ಅದನ್ನೂ ಮಾಡುತ್ತೇನೆ. ನನಗೆ ಅದರಲ್ಲಿ ಯಾವುದೇ ಅವಮಾನ ಇರುವುದಿಲ್ಲ ಎಂದಿದ್ದಾರೆ.

ನಾನು ಸಭೆ ನಡೆಯುತ್ತಿರುವ ಸ್ಥಳಕ್ಕೆ ಹೋದೆ. ಆಗಲೇ ಸಭೆ ಶುರುವಾಗಿತ್ತು. ನಮ್ಮ ಬಳಿ ಕುಳಿತುಕೊಳ್ಳಲು ಹೇಳಿದರು. ಇಲ್ಲ, ನಮಗೆ ವರದಿ ಸಲ್ಲಿಸಬೇಕಿದೆ ಒಂದು ನಿಮಿಷ ಕಾಲಾವಕಾಶ ಕೊಡಿ ಎಂದು ಕೇಳಿದೆ. ಆದರೆ ಅಲ್ಲಿರುವ ಎಸ್​ಪಿಜಿಯವರು ಈಗಲ್ಲ, ಮೀಟಿಂಗ್​ ಇನ್ನೂ ಒಂದು ಗಂಟೆ ಬಿಟ್ಟು ಶುರುವಾಗಲಿದೆ ಎಂದು ಹೇಳಿದರು. ಅಲ್ಲಿ ಖಾಲಿ ಕುರ್ಚಿಗಳೂ ಇದ್ದವೂ. ಆದರೆ ಬಿಜೆಪಿ ನಾಯಕರು ಇದ್ದರು. ಸಿಎಂ ಮತ್ತು ಪಿಎಂ ನಡುವಿನ ಸಭೆಗೆ ಉಳಿದ ನಾಯಕರು ಯಾಕೆ? ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಅಲ್ಲಿ ಖಾಲಿ ಕುರ್ಚಿಗಳನ್ನು ಇಟ್ಟಿದ್ದು ಕೇಂದ್ರ ಸರ್ಕಾರದ ಒಂದು ಯೋಜನೆಯೇ ಆಗಿದೆ. ಸಭೆಯಲ್ಲಿ ಪಾಲ್ಗೊಳ್ಳಲು ಯೋಗ್ಯತೆ ಇಲ್ಲದವರೆಲ್ಲ ಅಲ್ಲಿ ಕುಳಿತಿದ್ದಾಗ ನಾನ್ಯಾಕೆ ಕುಳಿತುಕೊಳ್ಳಲಿ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಜತೆಗಿನ ಪರಿಶೀಲನಾ ಸಭೆಗೆ ಹಾಜರಾಗುವುದಿಲ್ಲ ಎಂದು ಅನುಮತಿ ಪಡೆದಿದ್ದೆ: ಮಮತಾ ಬ್ಯಾನರ್ಜಿ

Published On - 7:39 pm, Sat, 29 May 21