ಯುವ ಬರಹಗಾರರಿಗೆ ಕೇಂದ್ರ ಸರ್ಕಾರದಿಂದ ವಿಶೇಷ ಯೋಜನೆ; 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ವಿನೂತನ ಪ್ರಯೋಗ
ಶಿಕ್ಷಣ ಇಲಾಖೆಯ ಅಡಿಯಲ್ಲಿ ಭಾರತದ ನೇಷನಲ್ ಬುಕ್ ಟ್ರಸ್ಟ್ ಈ ಯೋಜನೆಯನ್ನು ಹಂತಹಂತವಾಗಿ ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಲಿದೆ. ಈ ಯೋಜನೆಯ ಅಡಿಯಲ್ಲಿ ಸಿದ್ಧವಾದ ಪುಸ್ತಕಗಳನ್ನು ನೇಷನಲ್ ಬುಕ್ ಟ್ರಸ್ಟ್ ಪ್ರಕಟಿಸಲಿದೆ.
ದೆಹಲಿ: ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ’ಯುವ’ (YUVA- Young, Upcoming and Versatile Authors) ಎಂಬ ಹೆಸರಿನ ಯೋಜನೆಯೊಂದನ್ನು ಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಇಂದು (ಮೇ 29) ಘೋಷಿಸಿದೆ. 30 ವರ್ಷ ವಯಸ್ಸಿನೊಳಗಿನ ಯುವ ಬರಹಗಾರರಿಗೆ ತರಬೇತಿ, ಓದಲು ಮತ್ತು ಬರೆಯಲು ಪ್ರೋತ್ಸಾಹ ನೀಡಿಕೆ, ಪುಸ್ತಕ ಅಥವಾ ಸಾಹಿತ್ಯ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಯುವ ಯೋಜನೆಯು ಭಾರತೀಯ ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೊಸ ತಲೆಮಾರಿನ ಸಾಹಿತ್ಯ ಆಸಕ್ತರು ಬರೆಯಬೇಕು ಎಂಬ ಉದ್ದೇಶದಿಂದ ಜಾರಿಗೊಳಿಸಿರುವ ಪ್ರಧಾನ ಮಂತ್ರಿಯವರ ಪರಿಕಲ್ಪನೆಯಾಗಿದೆ. 2021 ಜನವರಿ 31ರಂದು ನಡೆದ ಮನ್ ಕೀ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಯುವ ಬರಹಗಾರರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಸ್ವಾತಂತ್ರ್ಯ ಹೋರಾಟದ ಬಗ್ಗೆ ಬರೆಯಬೇಕು ಎಂದು ಕರೆನೀಡಿದ್ದರು. ಭಾರತವು ಈ ಬಾರಿ 75ನೇ ಸ್ವಾತಂತ್ರ್ರೋತ್ಸವವನ್ನು ಆಚರಿಸಲಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ನಡೆದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಬರೆಯಬೇಕು ಎಂದು ಮೋದಿ ತಿಳಿಸಿದ್ದರು.
ಯುವ ಯೋಜನೆಯು ಭಾರತೀಯ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಯೋಜನೆಯಾಗಿದೆ. ಸ್ವಾತಂತ್ರ್ಯ ಹೋರಾಟಗಾರರು, ಎಲೆಮರೆಯ ಸ್ವಾತಂತ್ರ್ಯ ಸೇನಾನಿಗಳು, ಮರೆತು ಹೋಗಿರುವ ಅಥವಾ ಬಹುಜನರಿಗೆ ತಿಳಿದಿರದ ಸ್ವಾತಂತ್ರ್ಯ ಚಳುವಳಿಗಾರರು, ದೇಶಕ್ಕಾಗಿ ನಡೆದ ಹೋರಾಟದಲ್ಲಿ ನಡೆದ ಅವರ ಪಾತ್ರ ಇತ್ಯಾದಿ ವಿಚಾರಗಳ ಬಗ್ಗೆ ಬರೆಯಲು ಸೂಚಿಸಲಾಗಿತ್ತು. ಇದರಿಂದ ಒಂದು ವರ್ಗದ ಬರಹಗಾರರು ಭಾರತೀಯ ಸಂಸ್ಕೃತಿ, ಜ್ಞಾನವನ್ನು ವಿಸ್ತರಿಸಬಹುದು ಎಂಬ ಕಲ್ಪನೆ ಇರಿಸಿಕೊಳ್ಳಲಾಗಿದೆ.
ಶಿಕ್ಷಣ ಇಲಾಖೆಯ ಅಡಿಯಲ್ಲಿ ಭಾರತದ ನೇಷನಲ್ ಬುಕ್ ಟ್ರಸ್ಟ್ ಈ ಯೋಜನೆಯನ್ನು ಹಂತಹಂತವಾಗಿ ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಲಿದೆ. ಈ ಯೋಜನೆಯ ಅಡಿಯಲ್ಲಿ ಸಿದ್ಧವಾದ ಪುಸ್ತಕಗಳನ್ನು ನೇಷನಲ್ ಬುಕ್ ಟ್ರಸ್ಟ್ ಪ್ರಕಟಿಸಲಿದೆ. ಅಷ್ಟೇ ಅಲ್ಲದೆ, ಒಂದು ಭಾರತ, ಶ್ರೇಷ್ಠ ಭಾರತ ಎಂಬ ನೆಲೆಯಲ್ಲಿ ಪುಸ್ತಕದ ಭಾಷಾಂತರ ಕಾರ್ಯವನ್ನೂ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಆಯ್ದ ಲೇಖಕರು ವಿಶ್ವದ ಕೆಲ ಶ್ರೇಷ್ಠ ಬರಹಗಾರರೊಂದಿಗೆ ಸಂವಾದವನ್ನು ಕೂಡ ನಡೆಸುವ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಲಾಗಿದೆ.
ಯುವ ಯೋಜನೆಯ ಪ್ರಮುಖ ಅಂಶಗಳು – https://www.mygov.in/ ನಲ್ಲಿ ನಡೆಯುವ ಆಲ್ ಇಂಡಿಯಾ ಕಂಟೆಸ್ಟ್ ಮೂಲಕ ಒಟ್ಟು 75 ಲೇಖಕರನ್ನು ಆಯ್ಕೆ ಮಾಡಲಾಗುವುದು – ಜೂನ್ 1, 2021 ರಿಂದ ಜುಲೈ 31, 2021ರ ವರೆಗೆ ಈ ಪ್ರಕ್ರಿಯೆ ನಡೆಯಲಿದೆ – ಯುವ ಬರಹಗಾರರಿಗೆ ತರಬೇತಿ ನೀಡಲು ಹಿರಿಯ ಲೇಖಕರು ಇರುತ್ತಾರೆ – ಹಿರಿಯರ ಮಾರ್ಗದರ್ಶನದ ಮೂಲಕ ಹಸ್ತಪ್ರತಿಯನ್ನು ಡಿಸೆಂಬರ್ 15ರ ಒಳಗಾಗಿ ಸಿದ್ಧಪಡಿಸಲಾಗುವುದು – ಹೀಗೆ ಪ್ರಕಟಣೆಗೊಂಡ ಪುಸ್ತಕವನ್ನು ಜನವರಿ 12, 2022ರ ರಾಷ್ಟ್ರೀಯ ಯುವಜನ ದಿನಾಚರಣೆಯಂದು ಬಿಡುಗಡೆಗೊಳಿಸಲಾಗುವುದು – ಈ ಯೋಜನೆಯ ಅನುಸಾರ ರೂ. 50,000 ಸ್ಕಾಲರ್ಶಿಪ್ನ್ನು 6 ತಿಂಗಳವರೆಗೆ, ಪ್ರತೀ ತಿಂಗಳು, ಪ್ರತಿಯೊಬ್ಬ ಲೇಖಕನಿಗೆ ನೀಡಲಾಗುವುದು
ಇದನ್ನೂ ಓದಿ: PPE Kit: ಕೊರೊನಾ ಯೋಧರಿಗಾಗಿ ಹೊಸ ಮಾದರಿಯ ತಂಪಾದ ಪಿಪಿಇ ಕಿಟ್; ವಿದ್ಯಾರ್ಥಿಯೊಬ್ಬನ ವಿನೂತನ ಸಂಶೋಧನೆ!
Published On - 5:10 pm, Sat, 29 May 21