PPE Kit: ಕೊರೊನಾ ಯೋಧರಿಗಾಗಿ ಹೊಸ ಮಾದರಿಯ ತಂಪಾದ ಪಿಪಿಇ ಕಿಟ್; ವಿದ್ಯಾರ್ಥಿಯೊಬ್ಬನ ವಿನೂತನ ಸಂಶೋಧನೆ!

ಅಂತಿಮ ವಿನ್ಯಾಸದಂತೆ, ಸಾಂಪ್ರದಾಯಿಕ ಪಿಪಿಇ ಕಿಟ್ ಅಳವಡಿಸಿದ ಈ ಉತ್ಪನ್ನವನ್ನು ಸೊಂಟದಲ್ಲಿ ಬೆಲ್ಟ್​ನಂತೆ ಧರಿಸಬಹುದು. ಈ ವಿನ್ಯಾಸ ಎರಡು ಉದ್ದೇಶ ಈಡೇರಿಸುತ್ತದೆ.

PPE Kit: ಕೊರೊನಾ ಯೋಧರಿಗಾಗಿ ಹೊಸ ಮಾದರಿಯ ತಂಪಾದ ಪಿಪಿಇ ಕಿಟ್; ವಿದ್ಯಾರ್ಥಿಯೊಬ್ಬನ ವಿನೂತನ ಸಂಶೋಧನೆ!
ಹೊಸ ಮಾದರಿಯ ಪಿಪಿಇ ಕಿಟ್
Follow us
TV9 Web
| Updated By: ganapathi bhat

Updated on:Aug 21, 2021 | 9:59 AM

ಮುಂಬೈ: ಅವಶ್ಯಕತೆಯೇ ಸಂಶೋಧನೆಗೆ ಮೂಲ ಎಂದು ಹೇಳಲಾಗುತ್ತದೆ. ಮುಂಬೈನ ವಿದ್ಯಾರ್ಥಿ ಸಂಶೋಧಕ ನಿಹಾಲ್ ಸಿಂಗ್ ಆದರ್ಶ್​ಗೆ, ಆತನ ವೈದ್ಯ ತಾಯಿಯ ಅವಶ್ಯಕತೆಯೇ ಸಂಶೋಧನೆಗೆ ಸ್ಫೂರ್ತಿಯಾಯಿತು. ಕೋವ್-ಟೆಕ್ ಎಂದು ಹೆಸರಿಡಲಾದ ಸಾಂಧ್ರ ಮತ್ತು ಮಿತವ್ಯಯದ ಈ ಹೊಸ ಸಂಶೋಧನೆ, ಪಿಪಿಇ ಕಿಟ್​ಗಳಿಗೆ ಗಾಳಿ ನೀಡುವ ವ್ಯವಸ್ಥೆ ಒದಗಿಸುತ್ತದೆ, ಪಿಪಿಇ ಕಿಟ್ ಧರಿಸಿ ಕೊವಿಡ್-19 ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಮ್ಮ ಆರೋಗ್ಯ ಕಾರ್ಯಕರ್ತರಿಗೆ ಅತ್ಯಗತ್ಯವಾದ ಪರಿಹಾರವನ್ನು ಇದು ನೀಡುತ್ತದೆ.

ಕೋವ್ ಟೆಕ್: ಸಂಪೂರ್ಣ ವಿಭಿನ್ನವಾದ ಮತ್ತು ತಂಪಾದ ಪಿಪಿಇ ಅನುಭವದ ಭರವಸೆ ಕೆ.ಜೆ. ಸೋಮಯ್ಯ ಎಂಜಿನಿಯರಿಂಗ್ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿಯಾದ ನಿಹಾಲ್, ಈ ಬಗ್ಗೆ ಪಿಐಬಿಯೊಂದಿಗೆ ಮಾತನಾಡಿದ್ದಾರೆ. ಪಿಪಿಇ ಧರಿಸಿದ ಕೊರೊನಾ ಯೋಧರಿಗೆ ಕೋವ್-ಟೆಕ್ ನೀಡುವ ಪ್ರಾಯೋಗಿಕ ವ್ಯತ್ಯಾಸವನ್ನು ವಿವರಿಸಿದ್ದಾರೆ. ಕೋವ್-ಟೆಕ್ ವೆಂಟಿಲೇಷನ್ ಸಿಸ್ಟಮ್ ಪಿಪಿಇ ನಿಲುವಂಗಿಯೊಳಗೆ ಧರಿಸಬಹುದು. ಇದರಿಂದ ಫ್ಯಾನ್‌ ಕೆಳಗೆ ಕುಳಿತ ಅನುಭವ ಸಿಗುತ್ತದೆ. ಇದು ಸುತ್ತಮುತ್ತಲಿನ ಗಾಳಿಯನ್ನು ಎಳೆದುಕೊಂಡು ಅದನ್ನು ಪಿಪಿಇ ನಿಲುವಂಗಿಯೊಳಗೆ ತಳ್ಳುತ್ತದೆ. ಸಾಮಾನ್ಯವಾಗಿ, ಪಿಪಿಇ ಕಿಟ್ ಒಳಗೆ ಬಿಸಿ ಮತ್ತು ಆರ್ದ್ರತೆ ಇರುತ್ತದೆ. ಆ ಸಮಸ್ಯೆಗೆ ಈ ವ್ಯವಸ್ಥೆ ಪರಿಹಾರ ನೀಡುತ್ತದೆ ಎಂದಿದ್ದಾರೆ. ಇದರಿಂದ ಕೇವಲ 100 ಸೆಕೆಂಡುಗಳ ಅಂತರದಲ್ಲಿ ಬಳಕೆದಾರರಿಗೆ ತಾಜಾ ತಂಗಾಳಿಯನ್ನು ಒದಗಿಸುತ್ತದೆ ಎಂದು ತಿಳಿಸಿದ್ದಾರೆ.

ಕೋವ್ ಟೆಕ್ ಜನ್ಮ ತಳೆದಿದ್ದು ಹೇಗೆ? ನಿಹಾಲ್ ತಾಯಿ, ಡಾ. ಪೂನಮ್ ಕೌರ್ ಆದರ್ಶ್, ಪುಣೆಯಲ್ಲಿ ತಾವು ನಡೆಸುತ್ತಿರುವ ಆದರ್ಶ್ ಚಿಕಿತ್ಸಾಲಯದಲ್ಲಿ ಕೊವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರತಿ ದಿನ ಮನೆಗೆ ಮರಳಿದಾಗ, ಪಿಪಿಇ ಕಿಟ್ ಧರಿಸಿ ಕಾರ್ಯ ನಿರ್ವಹಿಸಬೇಕಾದ ತಾವು ಮತ್ತು ತಮ್ಮಂತಹ ಇತರರು ಬೆವರು ತುಂಬಿದ ಪಿಪಿಇಯಲ್ಲಿ ಹೇಗೆ ಕಷ್ಟ ಅನುಭವಿಸುತ್ತಿದ್ದೇವೆ ಎಂಬುದನ್ನು ವಿವರಿಸುತ್ತಿದ್ದರು. 19 ವರ್ಷದ ನಿಹಾಲ್ ತಾವು ಹೇಗೆ ತಮ್ಮ ತಾಯಿ ಮತ್ತು ಇತರರಿಗೆ ಸಹಾಯ ಮಾಡಬಹುದು ಎಂದು ಯೋಚಿಸಿ ಈ ಕಾರ್ಯದಲ್ಲಿ ತೊಡಗಿ ಸಾಧನೆ ಮಾಡಿದ್ದಾರೆ.

ಈ ಸಮಸ್ಯೆಯ ಗುರುತಿಸುವಿಕೆ ಅವರನ್ನು ಟೆಕ್ನಾಲಜಿಕಲ್ ಬ್ಯುಸಿನೆಸ್ ಇನ್ಕ್ಯುಬೇಟರ್, ರಿಸರ್ಚ್ ಇನ್ನೋವೇಶನ್ ಇನ್ಕ್ಯುಬೇಷನ್ ಡಿಸೈನ್ ಲ್ಯಾಬೊರೇಟರಿ ಆಯೋಜಿಸಿದ್ದ ಕೊವಿಡ್ -19 ಸಂಬಂಧಿತ ಸಾಧನಗಳ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಲು ಕಾರಣವಾಯಿತು.

ಪುಣೆಯ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದ ಡಾ. ಉಲ್ಲಾಸ್ ಖರುಲ್ ಅವರ ಮಾರ್ಗದರ್ಶನದೊಂದಿಗೆ ನಿಹಾಲ್ 20 ದಿನಗಳಲ್ಲಿ ಮೊದಲ ಮಾದರಿಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು. ಡಾ. ಉಲ್ಲಾಸ್ ಕೊವಿಡ್-19 ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಗಾಳಿಯನ್ನು ಶೋಧಿಸುವ ಹೊರ ಕವಚದ ಮೇಲೆ ಸಂಶೋಧನೆ ನಡೆಸುವ ನವೋದ್ಯಮ ನಡೆಸುತ್ತಿದ್ದರು. ಇಲ್ಲಿಂದ, ನಿಹಾಲ್ ಗಾಳಿಯ ಹರಿವಿನ ಗುಣಮಟ್ಟದ ನಡುವೆ ಗರಿಷ್ಠ ಸಮತೋಲನವನ್ನು ಸಾಧಿಸಲು ಯಾವ ರೀತಿಯ ಫಿಲ್ಟರ್ ಬಳಸಬೇಕು ಎಂಬ ಕಲ್ಪನೆಯನ್ನು ಪಡೆದರು.

ಇದು ಅವರಿಗೆ ಸೋಮಯ್ಯ ವಿದ್ಯಾ ವಿಹಾರ್ ವಿಶ್ವವಿದ್ಯಾಲಯದ ಆರ್.ಐ.ಐ.ಡಿ.ಎಲ್. (ಸಂಶೋಧನೆ, ನಾವಿನ್ಯ ಹಾಗು ಇನ್ಕ್ಯುಬೇಷನ್ ವಿನ್ಯಾಸ ಪ್ರಯೋಗಾಲಯ)ದ ಬೆಂಬಲ ದೊರೆಕಿಸಿತು. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಶೀಲತಾ ಅಭಿವೃದ್ಧಿ ಮಂಡಳಿ (ಎನ್.ಎಸ್.ಟಿ.ಇ.ಡಿ.ಬಿ.) ಬೆಂಬಲವೂ ಸಿಕ್ಕಿತು.

ಆರು ತಿಂಗಳ ಕಾಲ ಪರಿಶ್ರಮದ ತರುವಾಯ ಪ್ರಾಥಮಿಕ ಮಾದರಿ ಹೊರಹೊಮ್ಮಿತು. ಅದು ಕುತ್ತಿಗೆಯವರೆಗೆ ಇದ್ದು, ಯು-ಆಕಾರದ ಗಾಳಿಯ ಒಳಹರಿವಿನ ಕೊಳವೆ ಮೂಲಕ ಗಾಳಿಯನ್ನು ಹೀರಿಕೊಳ್ಳುತ್ತದೆ ಮತ್ತು ಕುತ್ತಿಗೆವರೆಗೆ ಧರಿಸಬಹುದಾದ ದಿಂಬಿನಂತಹ ರಚನೆಗಳನ್ನು ಹೊಂದಿದೆ. ನಿಹಾಲ್ ಇದನ್ನು ಪುಣೆಯ ಡಾ. ವಿನಾಯಕ ಮಾನೆ ಅವರಿಗೆ ಪರೀಕ್ಷೆಗಾಗಿ ನೀಡಿದರು.

ಈ ಮೂಲಮಾದರಿಯನ್ನು ಕೆಲವು ವೈದ್ಯರು ಪರೀಕ್ಷಿಸಬೇಕೆಂದು ನಾವು ಬಯಸಿದ್ದೇವು ಹೀಗಾಗಿ ಡಾ. ವಿನಾಯಕ ಮಾನೆ ಅವರನ್ನು ಸಂಪರ್ಕಿಸಿದೆವು. ಸಾಧನವು ಹೊರಸೂಸುವ ನಿರಂತರ ಧ್ವನಿ ಮತ್ತು ಕಂಪನದಿಂದಾಗಿ ಇದನ್ನು ಕುತ್ತಿಗೆವರೆಗೆ ಧರಿಸುವುದರಿಂದ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ದೊಡ್ಡ ಅಸ್ವಸ್ಥತೆ ಉಂಟಾಗುತ್ತದೆ ಎಂದು ಅವರು ತಿಳಿಸಿದರು. ಹೀಗಾಗಿ, ನಾವು ಮೂಲಮಾದರಿಯನ್ನು ಕೈಬಿಟ್ಟೆವು ಮತ್ತು ಹೆಚ್ಚಿನ ವಿನ್ಯಾಸಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆವು.

ಆರೋಗ್ಯ ಕಾರ್ಯಕರ್ತರ ಕೆಲಸಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದಂತಹ ಮೂಲಮಾದರಿಯನ್ನು ರಚಿಸುವ ಉದ್ದೇಶದಿಂದ ಹೊಸ ವಿನ್ಯಾಸಗಳನ್ನು ಪ್ರಯತ್ನಿಸುತ್ತಲೇ ಇದ್ದೆವು. ಪರಿಪೂರ್ಣತೆಯಿಂದ ಕೂಡಿದ ಈ ಆಕಾಂಕ್ಷಿತ ಅಂತಿಮ ಉತ್ಪನ್ನ ಹೊರಹೊಮ್ಮುವವರೆಗೆ ಸುಮಾರು 20 ಮೂಲಮಾದರಿಗಳನ್ನು ಮತ್ತು 11 ದಕ್ಷತೆಯ ಮೂಲಮಾದರಿಗಳ ಅಭಿವೃದ್ಧಿ ಮಾಡಿದೆವು. ಇದಕ್ಕಾಗಿ ಆರ್‌.ಐ.ಐ.ಡಿ.ಎಲ್‌.ನಲ್ಲಿನ ಮುಖ್ಯ ನಾವೀನ್ಯ ವೇಗವರ್ಧಕ ಮತ್ತು ಪುಣೆಯ ಡಸಾಲ್ಟ್ ಸಿಸ್ಟಮ್ಸ್ ಸಿಇಒ ಗೌರಂಗ್ ಶೆಟ್ಟಿ ಅವರಿಂದ ಸಹಾಯ ಪಡೆದೆವು. ಡಸಾಲ್ಟ್ ಸಿಸ್ಟಮ್ಸ್ ನಲ್ಲಿನ ಅತ್ಯಾಧುನಿಕ ಮೂಲಮಾದರಿ ಸೌಲಭ್ಯವು ನಿಹಾಲ್ ಮೂಲಮಾದರಿಗಳನ್ನು ಪರಿಣಾಮಕಾರಿಯಾಗಿ ಮತ್ತು ಸುಲಭವಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡಿತು.

ಅಂತಿಮ ಮಾದರಿ: ಬೆಲ್ಟ್​ನಷ್ಟೇ ಸರಳ ಅಂತಿಮ ವಿನ್ಯಾಸದಂತೆ, ಸಾಂಪ್ರದಾಯಿಕ ಪಿಪಿಇ ಕಿಟ್ ಅಳವಡಿಸಿದ ಈ ಉತ್ಪನ್ನವನ್ನು ಸೊಂಟದಲ್ಲಿ ಬೆಲ್ಟ್​ನಂತೆ ಧರಿಸಬಹುದು. ಈ ವಿನ್ಯಾಸ ಎರಡು ಉದ್ದೇಶ ಈಡೇರಿಸುತ್ತದೆ. ಮೊದಲನೆಯದು, ಆರೋಗ್ಯ ಕಾರ್ಯಕರ್ತರಿಗೆ ಉತ್ತಮ ವಾತಾಯನ ಒದಗಿಸುತ್ತದೆ, ಜೊತೆಗೆ ಅನಾನುಕೂಲತೆಯನ್ನು ತಪ್ಪಿಸುತ್ತದೆ. ಎರಡನೆಯದು, ಅವರನ್ನು ವಿವಿಧ ಶಿಲೀಂಧ್ರ ಸೋಂಕಿನಿಂದ ರಕ್ಷಿಸುತ್ತದೆ.

ವಾತಾಯನವನ್ನು ದೇಹಕ್ಕೆ ಹತ್ತಿರದಲ್ಲಿ ಧರಿಸುವ ಕಾರಣ, ಉನ್ನತ ಗುಣಮಟ್ಟದ ಬಿಡಿ ಭಾಗಗಳನ್ನು ಬಳಸಲಾಗಿದೆ ಮತ್ತು ಸುರಕ್ಷತೆಯ ಕ್ರಮಗಳನ್ನು ಕೂಡ ಎಚ್ಚರಿಕೆಯಿಂದ ತೆಗೆದುಕೊಳ್ಳಲಾಗಿದೆ ಎಂದು ನಿಹಾಲ್ ತಿಳಿಸುತ್ತಾರೆ. ನಾನು ಈ ಉತ್ಪನ್ನಕ್ಕೆ ಪೇಟೆಂಟ್​ಗೆ ಅರ್ಜಿ ಸಲ್ಲಿಸುತ್ತೇನೆ ಎಂದು ನನ್ನ ತಾಯಿಗೆ ಹೇಳಿದಾಗ, ಅವರು ತುಂಬಾ ಸಂತೋಷ ಪಟ್ಟರು. ತಜ್ಞ ವೈದ್ಯರಾಗಿ, ನನ್ನ ತಾಯಿ ಯಾವಾಗ ಕೆಲಸಕ್ಕೆ ಹೊರಗೆ ಹೋಗುತ್ತಾರೋ ಆಗ ಅದನ್ನು ಬಳಸುತ್ತಾರೆ. ಈ ವ್ಯವಸ್ಥೆಯು ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಬರುತ್ತದೆ, ಇದು 6 ರಿಂದ 8 ಗಂಟೆಗಳವರೆಗೆ ಕೆಲಸ ಮಾಡುತ್ತದೆ.

ಕೋವ್-ಟೆಕ್ ವಾತಾಯನ ವ್ಯವಸ್ಥೆ ಸಾಕಾರವಾಗಿದೆ, ನಿಹಾಲ್ ಅವರು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ‘ನಿಧಿ’ಯ ಪ್ರೊಮೆಟಿಂಗ್ ಅಂಡ್ ಎಕ್ಸಲರೇಟಿಂಗ್ ಯಂಗ್ ಅಂಡ್ ಆಸ್ಪೈರಿಂಗ್ ಟೆಕ್ನಾಲಜಿ ಎಂಟರ್ ಪ್ರೈಸಸ್ (ಪಿ.ಆರ್.ಎ.ವೈ.ಎ.ಎಸ್.) ಉತ್ತೇಜಿಸುವ ಮತ್ತು ವೇಗಗೊಳಿಸುವಿಕೆಯಿಂದ ಮೂಲಮಾದರಿ ಅಭಿವೃದ್ಧಿ ಮತ್ತು ಉತ್ಪನ್ನ ವಿನೂತನ ಶೋಧಕ್ಕಾಗಿ 10,00,000 / – ರೂ. ಅನುದಾನಕ್ಕೆ ಪಾತ್ರರಾಗಿದ್ದಾರೆ.

ಯುವ ಉದಯೋನ್ಮುಖ ಉದ್ಯಮಿ, ವ್ಯಾಟ್ ಟೆಕ್ನೋವೇಶನ್ಸ್ ಎಂಬ ನವೋದ್ಯಮವನ್ನು ಸ್ಥಾಪಿಸಿದ್ದಾರೆ, ಇದರ ಅಡಿಯಲ್ಲಿ ವಾತಾಯನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಪಿ.ಆರ್.ಎ.ವೈ.ಎ.ಎಸ್. ಅನುದಾನದ ಹೊರತಾಗಿ, ನವೋದ್ಯಮ ಸಹ ಆರ್.ಐ.ಐ.ಡಿ.ಎಲ್. ಮತ್ತು ಕೆ ಜೆ ಸೋಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಜಂಟಿಯಾಗಿ ಆಯೋಜಿಸಿರುವ ನ್ಯೂ ವೆಂಚರ್ ಇನ್ವೆಸ್ಟ್ಮೆಂಟ್ ಪ್ರೋಗ್ರಾಂನಿಂದ 5,00,000 ರೂ. ಬೆಂಬಲ ಪಡೆದಿದ್ದಾರೆ.

New PPE Kit Fan Technology

ನಿಹಾಲ್ ಸಿಂಗ್ ಆದರ್ಶ್ ತಮ್ಮ ತಾಯಿ ಡಾ. ಪೂನಂ ಕೌರ್ ಆದರ್ಶ್ ಅವರೊಂದಿಗೆ

ಆರ್ಥಿಕ ಮತ್ತು ವೆಚ್ಚ-ಸ್ಪರ್ಧಾತ್ಮಕ ಆಯ್ಕೆ ಋತ್ವಿಕ್ ಮರಥೆ, ಡಿಸೈನ್ ಎಂಜಿನಿಯರಿಂಗ್​ನ ಎರಡನೇ ವರ್ಷದ ವಿದ್ಯಾರ್ಥಿ ಮತ್ತು ಅವನ ಸಹಪಾಠಿ ಸೈಲಿ ಭಾವಸಾರ್ ಅವರೂ ನಿಹಾಲ್​ನ ಈ ಯೋಜನೆಗೆ ನೆರವಾದರು. ಸೈಲಿ ಅವರ ಅಂತರ್ಜಾಲ ತಾಣ https://www.watttechnovations.com ವಿನ್ಯಾಸ ಮತ್ತು ನವೋದ್ಯಮದ ಡಿಜಿಟಲ್ ವಸ್ತು ವಿಷಯವನ್ನು ನಿರ್ವಹಿಸಿದರು.

ತನ್ನ ಆರಂಭಿಕ ಮಹತ್ವಾಕಾಂಕ್ಷೆ ತಾಯಿಯ ನೋವನ್ನು ನಿವಾರಿಸುವುದಕ್ಕಿಂತ ಹೆಚ್ಚಿನದೇನೂ ಇರಲಿಲ್ಲ ಎಂದು ನಿಹಾಲ್ ಪಿಐಬಿಗೆ ಹೇಳುತ್ತಾರೆ. ನಾನು ಆರಂಭದಲ್ಲಿ ವಾಣಿಜ್ಯಾತ್ಮಕವಾಗಿ ಹೋಗುವ ಬಗ್ಗೆ ಯೋಚಿಸಿರಲಿಲ್ಲ. ನಾನು ಇದನ್ನು ಸಣ್ಣ ಪ್ರಮಾಣದಲ್ಲಿ ಮಾತ್ರ ತಯಾರಿಸಲು ಮತ್ತು ವೈಯಕ್ತಿಕವಾಗಿ ನನಗೆ ತಿಳಿದಿರುವ ವೈದ್ಯರಿಗೆ ನೀಡಲು ಯೋಚಿಸಿದ್ದೆ. ಆದರೆ ನಂತರ, ನಾವು ಅದನ್ನು ಕಾರ್ಯಸಾಧ್ಯಗೊಳಿಸಿದಾಗ, ನಮ್ಮ ಆರೋಗ್ಯ ಕಾರ್ಯಕರ್ತರು ಪ್ರತಿದಿನವೂ ಎದುರಿಸುತ್ತಿರುವ ಸಮಸ್ಯೆ ಇಷ್ಟು ದೊಡ್ಡದಾಗಿದೆ ಎಂದು ನಾನು ಅರಿತುಕೊಂಡೆ. ನಾವು ವಾಣಿಜ್ಯ ಯೋಜನೆಯನ್ನು ರೂಪಿಸಲು ಯೋಚಿಸಿದಾಗ ಅದು ಅಗತ್ಯವಿರುವ ಎಲ್ಲರಿಗೂ ಲಭ್ಯವಾಗುತ್ತದೆ.

ರೂಪು ತಳೆದ ಅಂತಿಮ ಉತ್ಪನ್ನವನ್ನು ಪುಣೆಯ ಸಾಯಿ ಸ್ನೇಹ್ ಆಸ್ಪತ್ರೆ ಮತ್ತು ಪುಣೆಯ ಲೋಟಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಳಸಲಾಗುತ್ತಿದೆ. ಕಂಪನಿಯು ತನ್ನ ಉತ್ಪಾದನೆಯನ್ನು ಮೇ / ಜೂನ್ 2021ರಲ್ಲಿ ಹೆಚ್ಚಿಸಲು ಯೋಜಿಸಿದೆ. ಉತ್ಪನ್ನದ ಬೆಲೆ ಪ್ರತಿಯೊಂದಕ್ಕೆ 5,499 ರೂ. ಆಗುತ್ತದೆ ಮತ್ತು ಇದೇ ರೀತಿಯ ಸ್ಪರ್ಧೆಯಲ್ಲಿನ ಉತ್ಪನ್ನಗಳಿಗಿಂತ ಅಗ್ಗವಾಗಿದೆ, ಅದು ಪ್ರತಿ ಸಾಧನಕ್ಕೆ ಒಂದು ಲಕ್ಷ ರೂಪಾಯಿಗಳಷ್ಟು ಆಗುತ್ತದೆ. ತಂಡವು ಮತ್ತಷ್ಟು ಬೆಲೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ.

ಈ ಉತ್ಪನ್ನದ ಪ್ರಥಮ ಕಂತು 30-40 ಸಂಖ್ಯೆಯಲ್ಲಿ ಈಗಾಗಲೆ ಹೊರಬಂದಿದೆ, ಇದನ್ನು ದೇಶಾದ್ಯಂತ ವೈದ್ಯರು/ಎನ್.ಜಿ.ಓ.ಗಳಿಗೆ ಪ್ರಾಯೋಗಿಕವಾಗಿ ನೀಡಲಾಗಿದೆ. ಮುಂದಿನ ಬ್ಯಾಚ್ ನಲ್ಲಿ 100 ಸಂಖ್ಯೆಯಲ್ಲಿ ಉತ್ಪನ್ನ ಉತ್ಪಾದನಾ ಹಂತದಲ್ಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Karnataka Covid Update: ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ; ಕರ್ನಾಟಕದಲ್ಲಿ ಇಂದು 25,979 ಜನರಿಗೆ ಸೋಂಕು

Covid-19: ಕೊರೊನಾ ಸೋಂಕು ಗಂಭೀರ ಹಂತಕ್ಕೆ ಹೋಗದಂತೆ ತಡೆಯಲು ಈ ಸೂಚನೆಗಳನ್ನು ಪಾಲಿಸಿ

Published On - 10:04 pm, Sun, 23 May 21