Video: ಗಾಜಿಯಾಬಾದ್‌ನಲ್ಲಿ ಹಿಜಾಬ್ ಪ್ರತಿಭಟನೆ ವೇಳೆ ಮುಸ್ಲಿಂ ಮಹಿಳೆಯರ ಮೇಲೆ ಪೊಲೀಸ್ ಲಾಠಿ ಪ್ರಹಾರ

| Updated By: Lakshmi Hegde

Updated on: Feb 17, 2022 | 10:24 AM

ಎಫ್‌ಐಆರ್‌ನಲ್ಲಿ ಗಾಜಿಯಾಬಾದ್‌ನ ಸಾನಿ ಬಜಾರ್ ರಸ್ತೆಯಲ್ಲಿ ಅನುಮತಿ ಪಡೆಯದೆ ಸುಮಾರು 15 ಮುಸ್ಲಿಂ ಮಹಿಳೆಯರು ಸರ್ಕಾರಿ ವಿರೋಧಿ ಪೋಸ್ಟರ್‌ಗಳೊಂದಿಗೆ ಜಮಾಯಿಸಿರುವುದು ತಮಗೆ ತಿಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Video: ಗಾಜಿಯಾಬಾದ್‌ನಲ್ಲಿ ಹಿಜಾಬ್ ಪ್ರತಿಭಟನೆ ವೇಳೆ ಮುಸ್ಲಿಂ ಮಹಿಳೆಯರ ಮೇಲೆ ಪೊಲೀಸ್ ಲಾಠಿ ಪ್ರಹಾರ
ಗಾಜಿಯಾಬಾದ್ ನಲ್ಲಿ ಹಿಜಾಬ್ ಪ್ರತಿಭಟನೆ
Follow us on

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ (Ghaziabad) ಹಿಜಾಬ್ ನಿಷೇಧದ (hijab ban)ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ಬುರ್ಖಾ ಧರಿಸಿರುವ ಮುಸ್ಲಿಂ ಮಹಿಳೆಯರಿಗೆ (Muslim women) ಹೊಡೆಯುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕರ್ನಾಟಕದ ಕಾಲೇಜುಗಳಲ್ಲಿ ಪ್ರಾರಂಭವಾದ ಹಿಜಾಬ್ ನಿಷೇಧ ಪ್ರಕರಣ ಬಗ್ಗೆ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದು, ಹಿಜಾಬ್ ನಿಷೇಧ ಖಂಡಿಸಿ ಇತರ ರಾಜ್ಯಗಳಲ್ಲಿಯೂ ಪ್ರತಿಭಟನೆ ನಡೆದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಹಲವಾರು ನೆಟ್ಟಿಗರು ಪೊಲೀಸರ ಈ ಕ್ರಮದ ಬಗ್ಗೆ ಟೀಕಿಸಿದ್ದಾರೆ. ಅದೇ ವೇಳೆ ವಿಡಿಯೊವನ್ನು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಭಾನುವಾರ ನಡೆದ ಘಟನೆಯ ಕುರಿತು ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಗಾಜಿಯಾಬಾದ್‌ನ ಸಾನಿ ಬಜಾರ್ ರಸ್ತೆಯಲ್ಲಿ ಅನುಮತಿ ಪಡೆಯದೆ ಸುಮಾರು 15 ಮುಸ್ಲಿಂ ಮಹಿಳೆಯರು ಸರ್ಕಾರಿ ವಿರೋಧಿ ಪೋಸ್ಟರ್‌ಗಳೊಂದಿಗೆ ಜಮಾಯಿಸಿರುವುದು ತಮಗೆ ತಿಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ತಂಡವು ಅಲ್ಲಿಗೆ ತಲುಪಿದಾಗ, ಮಹಿಳೆಯರು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು ಎಂದು ಎಫ್‌ಐಆರ್‌ನಲ್ಲಿದೆ. 

ಪ್ರತಿಭಟನಾಕಾರರನ್ನು ಮನೆಗೆ ಮರಳಲು ಮನವೊಲಿಸಲು ಪ್ರಯತ್ನಿಸಿದ ಮಹಿಳಾ ಕಾನ್‌ಸ್ಟೆಬಲ್‌ಗಳು ಹಲ್ಲೆಗೊಳಗಾದರು ಮತ್ತು ಪ್ರತಿಭಟನಾಕಾರರೊಂದಿಗಿದ್ದ ಕೆಲವು ಪುರುಷರು ಸಹ ಕಾನ್‌ಸ್ಟೆಬಲ್‌ಗಳನ್ನು ನಿಂದಿಸಲು ಪ್ರಾರಂಭಿಸಿದರು ಎಂದು ಎಫ್‌ಐಆರ್ ತಿಳಿಸಿದೆ. ಆರೋಪಿಗಳಲ್ಲಿ ಒಬ್ಬನನ್ನು ರಯೀಸ್ ಎಂದು ಗುರುತಿಸಲಾಗಿದೆ. ಪೊಲೀಸ್ ದೂರಿನ ಪ್ರಕಾರ, ಪುರುಷರು ಸಹ ಕಾನ್‌ಸ್ಟೆಬಲ್‌ಗಳಿಗೆ ಬೆದರಿಕೆ ಹಾಕಿದ್ದಾರೆ.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ . ಬುರ್ಖಾ ಧರಿಸಿದ ಮಹಿಳೆಯೊಬ್ಬರು ಪೊಲೀಸರ ಏಟು ತಡೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
“ಭಾನುವಾರ ಈ ಘಟನೆ ನಡೆದಿದೆ. ನಮ್ಮ ತಂಡ ಗಸ್ತು ತಿರುಗುತ್ತಿದ್ದಾಗ 10-15 ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಅವರಿಗೆ ತಿಳಿಯಿತು. ಪ್ರತಿಭಟನಾಕಾರರನ್ನು ಚದುರಿಸಲಾಗಿದೆ” ಎಂದು ಗಾಜಿಯಾಬಾದ್‌ನ ಇಂದಿರಾಪುರಂನ ಪೊಲೀಸ್ ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದ್ದು, ಈ ವಿಷಯವನ್ನು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು ಪ್ರವೇಶ ನಿರಾಕರಿಸಿದಾಗ ಪ್ರತಿಭಟನೆಗೆ ಕೂತರು!

Published On - 7:09 pm, Wed, 16 February 22