Porsche Crash Case: ಪುಣೆ ಪೋರ್ಷೆ ಅಪಘಾತ ಪ್ರಕರಣ; ಪ್ರೋಟೋಕಾಲ್ ಉಲ್ಲಂಘಿಸಿದ ಇಬ್ಬರು ಪೊಲೀಸರ ಅಮಾನತು

|

Updated on: May 24, 2024 | 8:36 PM

ಪುಣೆಯಲ್ಲಿ ಕಳೆದ ಭಾನುವಾರ ಕುಡಿತದ ಅಮಲಿನಲ್ಲಿ ಪೋರ್ಷೆ ಕಾರು ಚಲಾಯಿಸಿದ್ದ ಅಪ್ರಾಪ್ತ ಯುವಕ ಇಬ್ಬರು ಸಾಫ್ಟ್​ವೇರ್ ಇಂಜಿನಿಯರ್​ಗಳ ಸಾವಿಗೆ ಕಾರಣನಾಗಿದ್ದ. ಆತ ಉದ್ಯಮಿಯ ಮಗನಾಗಿದ್ದರಿಂದ ಆತನಿಗೆ ಪೊಲೀಸ್ ಠಾಣೆಯಲ್ಲೂ ದೊಡ್ಡ ಆತಿಥ್ಯ ನೀಡಿ, ಶೀಘ್ರದಲ್ಲೇ ಜಾಮೀನು ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಪೊಲೀಸರು ಕರ್ತವ್ಯಲೋಪ ಎಸಗಿದ್ದಾರೆ ಎಂಬ ದೂರು ಕೂಡ ಕೇಳಿಬಂದಿತ್ತು.

Porsche Crash Case: ಪುಣೆ ಪೋರ್ಷೆ ಅಪಘಾತ ಪ್ರಕರಣ; ಪ್ರೋಟೋಕಾಲ್ ಉಲ್ಲಂಘಿಸಿದ ಇಬ್ಬರು ಪೊಲೀಸರ ಅಮಾನತು
ಪೋರ್ಷೆ ಅಪಘಾತ
Follow us on

ಪುಣೆ: ಪೋರ್ಷೆ ಕಾರಿನಿಂದ ಬೈಕ್​ಗೆ ಡಿಕ್ಕಿ ಹೊಡೆದು ಮಧ್ಯಪ್ರದೇಶ ಮೂಲದ ಇಬ್ಬರು ಟೆಕ್ಕಿಗಳ ಪ್ರಾಣ ಬಲಿ ತೆಗೆದುಕೊಂಡ ಘಟನೆಗೆ ಇಡೀ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪುಣೆಯಲ್ಲಿ ನಡೆದ ಪೋರ್ಷೆ ಅಪಘಾತದ (Porsche Car Accident) ಬಗ್ಗೆ ದಿನದಿಂದ ದಿನಕ್ಕೆ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ಪೊಲೀಸರು ಮಾಡಿದ ಲೋಪಗಳ ವಿರುದ್ಧ ಜನರಿಂದ ಆಕ್ರೋಶ ವ್ಯಕ್ತವಾದ ನಂತರ ಇನ್ಸ್‌ಪೆಕ್ಟರ್ ಮತ್ತು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಅನ್ನು ಅಮಾನತುಗೊಳಿಸಲಾಗಿದೆ. ಈ ಅಪಘಾತ ಪ್ರಕರಣವನ್ನು ಪುಣೆ ಕ್ರೈಂ ಬ್ರಾಂಚ್ ಪೊಲೀಸರಿಗೆ (Pune Crime Branch Police) ವರ್ಗಾಯಿಸಲಾಗಿದೆ.

ಅಪಘಾತದ ನಂತರ ಕಾರಿನಡಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದರು. ಈ ವೇಳೆ ಕಾರು ಚಲಾಯಿಸುತ್ತಿದ್ದ ಅಪ್ರಾಪ್ತ ಬಾಲಕನನ್ನು ಪೊಲೀಸ್ ಠಾಣೆಗೆ ಕರೆತಂದಾಗ ಪ್ರೋಟೋಕಾಲ್ ಅನುಸರಿಸಿಲ್ಲ ಎಂಬ ಕಾರಣಕ್ಕಾಗಿ ಈ ಅಮಾನತಿನ ಕ್ರಮ ತೆಗೆದುಕೊಳ್ಳಲಾಗಿದೆ. ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನೂ ತೆಗೆದುಕೊಂಡು ಕ್ರೈಂ ಬ್ರಾಂಚ್‌ಗೆ ವಹಿಸಲಾಗಿದೆ.

ಇದನ್ನೂ ಓದಿ: ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ; ಅಪ್ರಾಪ್ತ ಚಾಲಕನ ಜಾಮೀನು ರದ್ದು

ಏನಿದು ಪ್ರಕರಣ?:

ಭಾನುವಾರ ಮಧ್ಯರಾತ್ರಿ 2.15ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಪಿಯುಸಿಯ ಫಲಿತಾಂಶವನ್ನು ಆಚರಿಸಲು ಪುಣೆಯ ಎರಡು ಪಬ್‌ಗಳಲ್ಲಿ ತನ್ನ ಸ್ನೇಹಿತರೊಂದಿಗೆ ಮದ್ಯ ಸೇವಿಸಿದ್ದ 17 ವರ್ಷದ ಯುವಕ ಪೋರ್ಷೆ ಕಾರಿನಲ್ಲಿ ಹೋಗುವಾಗ ಇಬ್ಬರು 24 ವರ್ಷದ ಐಟಿ ಉದ್ಯೋಗಿಗಳಿದ್ದ ಬೈಕ್​ಗೆ ಡಿಕ್ಕಿ ಹೊಡೆದಿದ್ದ. ಪುಣೆಯ ಕಲ್ಯಾಣಿ ನಗರ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ಬೈಕ್ ಚಲಾಯಿಸುತ್ತಿದ್ದ ಅನೀಶ್  ಎಂಬಾತ ಹಾರಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದರೆ, ಹಿಂದೆ ಕುಳಿತಿದ್ದ ಅಶ್ವಿನಿ ಕೋಷ್ಟ 20 ಅಡಿ ಎತ್ತರಕ್ಕೆ ಹಾರಿಬಿದ್ದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಪೋರ್ಷೆ ಕಾರು ಅಪಘಾತ; ಅಪ್ರಾಪ್ತನ ತಂದೆ ವಿಶಾಲ್ ಅಗರ್​ವಾಲ್ 3 ದಿನ ಪೊಲೀಸ್ ವಶಕ್ಕೆ

ಆರೋಪಿ ಬಾಲಾಪರಾಧಿಯಾಗಿದ್ದು, ತನ್ನ ಸ್ನೇಹಿತರೊಂದಿಗೆ ರಾತ್ರಿ 9.30ರಿಂದ 1 ಗಂಟೆಯ ನಡುವೆ ಬಾರ್​ಗೆ ಹೋಗಿ ಮದ್ಯ ಸೇವಿಸಿದ್ದ. ಅಪಘಾತ ಮಾಡಿದ ಬಾಲಕ ಆ ದಿನ ಪಬ್​ನಲ್ಲಿ 90 ನಿಮಿಷದಲ್ಲಿ 48,000 ರೂ. ಖರ್ಚು ಮಾಡಿದ್ದ. ಆತನ ತಂದೆ ವಿಶಾಲ್ ಅಗರ್​ವಾಲ್ ತನ್ನ ಮಗನಿಗೆ 2.5 ಕೋಟಿ ರೂ. ಮೌಲ್ಯದ ಪೋರ್ಷೆ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ, ಅವರು 1,758 ನೋಂದಣಿ ಶುಲ್ಕವನ್ನು ಪಾವತಿಸದೆ ಬಿಟ್ಟಿದ್ದಾರೆ.

ಪುಣೆಯ ಬಾರ್‌ನಲ್ಲಿ ಮದ್ಯ ಸೇವಿಸಿ ಇಬ್ಬರನ್ನು ಪೋರ್ಷೆ ಕಾರಿಗೆ ಡಿಕ್ಕಿ ಹೊಡೆದು ಇಬ್ಬರನ್ನು ಕೊಂದ 17 ವರ್ಷದ ಬಾಲಕನಿಗೆ ನೀಡಲಾಗಿದ್ದ ಜಾಮೀನನ್ನು ನ್ಯಾಯಮೂರ್ತಿ ಜುವೆನೈಲ್ ಬೋರ್ಡ್ ಇಂದು ರದ್ದುಗೊಳಿಸಿತ್ತು. ಅಲ್ಲದೆ, ಆತನ ತಂದೆ ವಿಶಾಲ್ ಅಗರ್​ವಾಲ್​ನನ್ನು ಬಂಧಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ