ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸಾವಿನ ಬಗ್ಗೆ ಅತೀವ ದುಖಃಪಡಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಭಾರತದ ಪ್ರಗತಿಯ ಮೇಲೆ ಅವರು ಅಳಿಸಲಾಗದ ಛಾಪನ್ನು ಬಿಟ್ಟು ಹೋಗಿದ್ದಾರೆ ಎಂದಿದಾರೆ.
‘‘ಭಾರತ ರತ್ನ ಶ್ರೀ ಪ್ರಣಬ್ ಮುಖರ್ಜಿ ಅವರ ಸಾವು ಭಾರತವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ನಮ್ಮ ರಾಷ್ಟ್ರದ ಅಭಿವೃದ್ಧಿ ಪಥದ ಮೇಲೆ ಅವರು ಎಂದೂ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅದ್ವಿತೀಯ ವಿದ್ವಾಂಸ, ಅತ್ಯುನ್ನತ ಶ್ರೇಣಿಯ ಮುತ್ಸದ್ದಿ ಆಗಿದ್ದ ಅವರನ್ನು ಎಲ್ಲ ರಾಜಕೀಯ ಪಕ್ಷಗಳು, ಮತ್ತು ಸಮಸ್ತ ವರ್ಗದ ಜನರು ಗೌರವಿಸುತ್ತಾರೆ.’’
ಮುಂದುವರಿದು ಹೇಳಿರುವ ಮೋದಿ, ರಾಷ್ಟ್ರಪತಿಯಂಥ ಸ್ಥಾನವನ್ನು ಅವರು ಅಲಂಕರಿಸಿದ್ದರೂ, ಸಾಮಾನ್ಯ ಜನರಿಗೆ ಅವರು ಹತ್ತಿರವಾಗಿದ್ದರು ಎಂದಿದ್ದಾರೆ.
‘‘ಭಾರತದ ರಾಷ್ಟ್ರಪತಿಯಾಗಿ ಶ್ರೀ ಪ್ರಣಬ್ ಮುಖರ್ಜಿ ಅವರು, ರಾಷ್ರಪತಿ ಭವನ ಜನಸಾಮಾನ್ಯರಿಗೂ ಎಟಕುವಂತೆ ಮಾಡಿದ್ದರು. ರಾಷ್ಟ್ರಪತಿಗಳ ನಿವಾಸವನ್ನು ಒಂದು ಅಧ್ಯಯನ, ಸಂಶೋಧನಾ, ಸಾಂಸ್ಕೃತಿಕ, ವಿಜ್ಞಾನ ಮತ್ತು ಸಾಹಿತ್ಯದ ಕೇಂದ್ರವನ್ನಾಗಿ ಪರಿವರ್ತಿಸಿದ್ದರು. ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಅವರು ನೀಡುತ್ತಿದ್ದ ಅಮೂಲ್ಯ ಸಲಹೆಗಳನ್ನು ನಾನ್ಯಾವತ್ತ್ತೂ ಮರೆಯಲಾರೆ. ತಮ್ಮ ದಶಕಗಳ ರಾಜಕೀಯ ಜೀವನದಲ್ಲಿ ಶ್ರೀ ಪ್ರಣಬ್ ಮುಖರ್ಜಿ ಅವರು ಆರ್ಥಿಕ ಹಾಗೂ ರಕ್ಷಣಾ ಸಚಿವಾಲಯಗಳಿಗೆ ಬಹು ಕಾಲದವರೆಗೆ ನೆರವಾಗುವ ಕಾಣಿಕೆಗಳನ್ನು ನೀಡಿದ್ದಾರೆ. ಅಸಮಾನ್ಯ ಸಂಸದರಾಗಿದ್ದ ಅವರ ಪೂರ್ವ ತಯಾರಿ ಅದ್ಭುತ, ನಿರರ್ಗಳ ಮತ್ತು ಹಾಸ್ಯಪ್ರಜ್ಞೆಯಿಂದ ತುಂಬಿರುತಿತ್ತು’’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ತಮ್ಮ ಸಂತಾಪ ಸೂಚಕ ಟ್ವೀಟ್ನಲ್ಲಿ , ಪ್ರಣಬ್ ಮುಖರ್ಜಿ ಅವರು ಅತ್ಯಂತ ಸಮರ್ಪಣಾ ಭಾವದೊಂದಿಗೆ ದೇಶಕ್ಕೆ ಸೇವೆ ಸಲ್ಲಿಸದರೆಂದು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ತಮ್ಮ ದುಖಃವನ್ನು ವ್ಯಕ್ತಪಡಿಸುತ್ತಾ, ಪ್ರಣಬ್ ಅವರು ಕಾಂಗ್ರೆಸ್ ಪಕ್ಷದ ಧೀಮಂತ ನಾಯಕರಲ್ಲೊಬ್ಬರಾಗಿದ್ದರು ಎಂದಿದ್ದಾರೆ.
‘‘ಶ್ರೀ ಪ್ರಣಬ್ ಮುಖರ್ಜಿ ಅವರ ಸಾವು ನನ್ನನ್ನು ತೀವ್ರವಾಗಿ ಘಾಸಿಗೊಳಿಸಿದೆ. ಮಾಜಿ ರಾಷ್ಟ್ರಪತಿ ಹಾಗೂ ಕಾಂಗ್ರೆಸ್ನ ಅತ್ಯಂತ ಧೀಮಂತ ನಾಯಕರಲ್ಲಿ ಒಬ್ಬರಾಗಿದ್ದ ಶ್ರೀ ಪ್ರಣಬ್ ಮುಖರ್ಜಿ ಅವರ ಪ್ರಾಮಾಣಿಕತೆ ಮತ್ತು ಕಕ್ಕುಲತೆ ಶಾಶ್ವತವಾಗಿ ನೆನಪುಳಿಯುವಂಥದ್ದು,’’ ಎಂದು ಸೋನಿಯಾ ಹೇಳಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಶ್ರೀ ಪ್ರಣಬ್ ಮುಖರ್ಜಿ ಅವರಲ್ಲಿದ್ದ ಅಪಾರ ರಾಜಕೀಯ ಜ್ಞಾನಕ್ಕಾಗಿ ಜನ ಅವರನ್ನು ನೆನಪಿಟ್ಟುಕೊಳ್ಳುತ್ತಾರೆ ಅಂತ ಹೇಳಿದ್ದಾರೆ.
‘‘ಭಾರತ ರತ್ನ ಶ್ರೀ ಪ್ರಣಬ್ ಮುಖರ್ಜಿ ಅವರ ಸಾವಿನಂದ ಅತೀವ ದುಖಃವಾಗಿದೆ. ಪ್ರಣಬ್ ದಾ ಅವರು ತಮ್ಮಲ್ಲಿದ್ದ ರಾಜಕೀಯ ಜ್ಞಾನ, ಮುತ್ಸದ್ದಿತನ, ನೀತಿ ರೂಪಿಸುವಲ್ಲಿ ತೋರುತ್ತಿದ್ದ ಕ್ಷಮತೆಯಿಂದ ನೆನಪಿನಲ್ಲುಳಿಯುತ್ತಾರೆ. ಗತಿಸಿರುವ ಅವರ ಆತ್ಮಕ್ಕೆ ನನ್ನ ಶ್ರದ್ಧಾಪೂರ್ವಕ ನಮನಗಳು, ಅವರ ಕುಟುಂಬದ ಸದಸ್ಯರು ಹಾಗೂ ಬೆಂಬಲಿಗರಿಗೆ ಸಂತಾಪ ಸೂಚಿಸುತ್ತೇನೆ, ಓಂ ಶಾಂತಿ’’ ಎಂದು ಬಿಎಸ್ವೈ ಟ್ವೀಟ್ ಮಾಡಿದ್ದಾರೆ.