ರಾಜಕೀಯವಾಗಿ ಏಕಾಂಗಿಯಾಗುತ್ತಿದ್ದಾರೆ ಎಂದು ನಿತೀಶ್ ಕುಮಾರ್​​ಗೆ ಭಯವಾಗುತ್ತಿದೆ: ಪ್ರಶಾಂತ್​​ ಕಿಶೋರ್

ನಾನು ಬಿಜೆಪಿಯ ಅಜೆಂಡಾದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಮೊದಲು ಹೇಳಿದ್ದ ಅವರು ನಂತರ ನಾನು ಕಾಂಗ್ರೆಸ್‌ನೊಂದಿಗೆ ಪಕ್ಷವನ್ನು ವಿಲೀನಗೊಳಿಸುವಂತೆ ಒತ್ತಾಯಿಸಿದ್ದೇನೆ ಎಂದು ಹೇಳಿದರು. ಎರಡೂ ಹೇಗೆ ಸಾಧ್ಯ? ನಾನು ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದರೆ...

ರಾಜಕೀಯವಾಗಿ ಏಕಾಂಗಿಯಾಗುತ್ತಿದ್ದಾರೆ ಎಂದು ನಿತೀಶ್ ಕುಮಾರ್​​ಗೆ ಭಯವಾಗುತ್ತಿದೆ: ಪ್ರಶಾಂತ್​​ ಕಿಶೋರ್
ಪ್ರಶಾಂತ್ ಕಿಶೋರ್
Updated By: ರಶ್ಮಿ ಕಲ್ಲಕಟ್ಟ

Updated on: Oct 09, 2022 | 2:08 PM

ಒಮ್ಮೆ ಜೆಡಿಯು ಅನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಬೇಕೆಂದು ಅವರು ಬಯಸಿದ್ದರು ಎಂಬ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರ ಆರೋಪವನ್ನು ಚುನಾವಣಾ ತಂತ್ರಜ್ಞ, ರಾಜಕಾರಣಿ ಪ್ರಶಾಂತ್ ಕಿಶೋರ್ (Prashant Kishor) ಭಾನುವಾರ ತಳ್ಳಿಹಾಕಿದ್ದಾರೆ. ನಿತೀಶ್ ಕುಮಾರ್ ಅವರಿಗೆ ವಯಸ್ಸಾಗಿದೆ ಎಂಬ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದಿದ್ದಾರೆ ಪ್ರಶಾಂತ್ ಕಿಶೋರ್. ಅವರು ಏನೋ ಹೇಳಲು ಹೋಗಿ ಮತ್ತೇನನ್ನೋ ಹೇಳುತ್ತಿದ್ದಾರೆ.”ಇದನ್ನು ಇಂಗ್ಲಿಷ್‌ನಲ್ಲಿ delusional (ಭ್ರಮೆ) ಎಂದು ಕರೆಯಲಾಗುತ್ತದೆ. ನಾನು ಬಿಜೆಪಿಯ ಅಜೆಂಡಾದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಮೊದಲು ಹೇಳಿದ್ದ ಅವರು ನಂತರ ನಾನು ಕಾಂಗ್ರೆಸ್‌ನೊಂದಿಗೆ ಪಕ್ಷವನ್ನು ವಿಲೀನಗೊಳಿಸುವಂತೆ ಒತ್ತಾಯಿಸಿದ್ದೇನೆ ಎಂದು ಹೇಳಿದರು. ಎರಡೂ ಹೇಗೆ ಸಾಧ್ಯ? ನಾನು ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದರೆ, ನಾನು ಕಾಂಗ್ರೆಸ್ ಬಲಪಡಿಸುವ ಬಗ್ಗೆ ಏಕೆ ಮಾತನಾಡುತ್ತೇನೆ. ಅದು ನಿಜವಾಗಿದ್ದರೆ, ಮೊದಲ ಹೇಳಿಕೆಯೇ ತಪ್ಪಾಗಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು. ಎಲ್ಲೋ ರಾಜಕೀಯವಾಗಿ ಅವರು ಏಕಾಂಗಿಯಾಗುತ್ತಿದ್ದಾರೆ ಎಂದು ನಿತೀಶ್ ಕುಮಾರ್ ಚಿಂತಿತರಾಗಿದ್ದಾರೆ. ನಂಬಿಕೆ ಇಲ್ಲದಿರುವ ಜನರು ಅವರೊಂದಿಗೆ ಇದ್ದಾರೆ. ಒಂದೆಡೆ ವಯಸ್ಸು ಮತ್ತು ಇನ್ನೊಂದೆಡೆ ಈ ಪ್ರತ್ಯೇಕತೆ ಇದೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು.

3,500 ಕಿಲೋಮೀಟರ್ ಉದ್ದದ ಜನ್ ಸುರಾಜ್ ಪಾದಯಾತ್ರೆಯಲ್ಲಿರುವ ಪ್ರಶಾಂತ್ ಕಿಶೋರ್ ಅವರು ಇತ್ತೀಚೆಗೆ ಜೆಡಿಯು ಅನ್ನು ಮುನ್ನಡೆಸಲು ನಿತೀಶ್ ಕುಮಾರ್ ನನ್ನನ್ನು ಆಹ್ವಾನಿಸಿದ್ದಾರೆ ಎಂದು ಹೇಳಿದರು. ನಿತೀಶ್ ಕುಮಾರ್ ಎನ್‌ಡಿಎ ಮೈತ್ರಿಯನ್ನು ಮುರಿದು ಮಹಾಘಟಬಂಧನ್ ಸರ್ಕಾರದ ಮುಖ್ಯಮಂತ್ರಿಯಾದ ನಂತರ ಇದು ಇತ್ತೀಚಿನ ಸಭೆಯಲ್ಲಿ ಸಂಭವಿಸಿದೆ ಎಂದಿದ್ದಾರೆ ಪಿ.ಕೆ.

ಸಭೆಯಲ್ಲಿ ನಿತೀಶ್ ಕುಮಾರ್ ಅವರು ಪಿಕೆ ಅವರನ್ನು ತಮ್ಮ ‘ರಾಜಕೀಯ ವಾರಸುದಾರ’ ಎಂದು ಕರೆದರು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. “ಅವರು (ನಿತೀಶ್ ಕುಮಾರ್) ನನ್ನನ್ನು ಅವರ ರಾಜಕೀಯ ವಾರಸುದಾರನನ್ನಾಗಿ ಮಾಡಿದರೂ ಅಥವಾ ನನನಗೆ ಸಿಎಂ ಕುರ್ಚಿ ಖಾಲಿ ಮಾಡಿದರೂ ನಾನು ಅವರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ನಾನು ಸಿಎಂಗೆ ಖಡಾಖಂಡಿತವಾಗಿ ಹೇಳಿದ್ದೇನೆ. ನಾನು ಇಲ್ಲ ಎಂದು ಹೇಳಿದೆ. ನಾನು ಜನರಿಗೆ ಭರವಸೆ ನೀಡಿದ್ದೇನೆ.ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ ಪ್ರಶಾಂತ್ ಕಿಶೋರ್.


ಪ್ರಶಾಂತ್ ಕಿಶೋರ್ ಅವರ ಹೇಳಿಕೆಯ ಬಗ್ಗೆ ಪ್ರಶ್ನಿಸಿದಾಗ, ನಾನು ಪ್ರಶಾಂತ್ ಕಿಶೋರ್ ಅವರನ್ನು ಆಹ್ವಾನಿಸಿಲ್ಲ ಎಂದಿದ್ದಾರೆ ನಿತೀಶ್ ಕುಮಾರ್. ಪಿಕೆ ನನ್ನನ್ನು ಸ್ವತಃ ಭೇಟಿಯಾಗಲು ಬಂದಿದ್ದರು. ಅವರು ತುಂಬಾ ಮಾತನಾಡುತ್ತಾರೆ. ಆದರೆ ಒಮ್ಮೆ ಅವರು ನನ್ನ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವಂತೆ ಕೇಳಿದ್ದರು ಎಂಬ ಅಂಶವನ್ನು ಮರೆಮಾಚುತ್ತಾರೆ ಎಂದು ನಿತೀಶ್ ಕುಮಾರ್ ಹೇಳಿದರು.

ಅವರು ಏನು ಬೇಕಾದರೂ ಮಾತನಾಡಲಿ. ಅವರು ಏನು ಹೇಳಿದರೂ ಏನೂ ಅನಿಸಲ್ಲ. ನಾಲ್ಕೈದು ವರ್ಷಗಳ ಹಿಂದೆಯೇ ಕಾಂಗ್ರೆಸ್‌ನಲ್ಲಿ ವಿಲೀನ ಮಾಡುವುದಾಗಿ ಹೇಳಿದ್ದರು. ಈಗ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ಹೇಳಿದ್ದಾರೆ.

ಪ್ರಶಾಂತ್ ಕಿಶೋರ್ 2018 ರಲ್ಲಿ ಜೆಡಿಯು ಸೇರಿದರು ಮತ್ತು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ಬಡ್ತಿ ಪಡೆದರು. ಎರಡು ವರ್ಷಗಳ ನಂತರ, ಪೌರತ್ವ (ತಿದ್ದುಪಡಿ) ಕಾಯ್ದೆಗೆ ನಿತೀಶ್ ಕುಮಾರ್ ಅವರ ಬೆಂಬಲವನ್ನು ಟೀಕಿಸಿದ ನಂತರ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷದಿಂದ ತೆಗೆದುಹಾಕಲಾಯಿತು.