ಲಡಾಖ್​ ತಲುಪಿದ ರಾಷ್ಟ್ರಪತಿ ರಾಮನಾಥ ಕೋವಿಂದ್​; ನಾಳೆ ಯೋಧರೊಟ್ಟಿಗೆ ವಿಜಯದಶಮಿ ಆಚರಣೆ

TV9 Digital Desk

| Edited By: Lakshmi Hegde

Updated on: Oct 14, 2021 | 11:18 AM

ಅಕ್ಟೋಬರ್​ 15ರಂದು ಅಂದರೆ ವಿಜಯದಶಮಿ ದಿನದಂದು ರಾಷ್ಟ್ರಪತಿಗಳು ಲಡಾಖ್​​ನ ದ್ರಾಸ್​ನಲ್ಲಿರಲಿದ್ದಾರೆ. 1999ರ ಕಾರ್ಗಿಲ್​ ಯುದ್ಧದಲ್ಲಿ ಮಡಿದ ಯೋಧರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸುವರು.

ಲಡಾಖ್​ ತಲುಪಿದ ರಾಷ್ಟ್ರಪತಿ ರಾಮನಾಥ ಕೋವಿಂದ್​; ನಾಳೆ ಯೋಧರೊಟ್ಟಿಗೆ ವಿಜಯದಶಮಿ ಆಚರಣೆ
ರಾಮನಾಥ ಕೋವಿಂದ್​

ರಾಷ್ಟ್ರಪತಿ ರಾಮನಾಥ ಕೋವಿಂದ್​ (President Ram Nath Kovind) ಅವರು ಇಂದಿನಿಂದ ಎರಡು ದಿನಗಳ ಕಾಲ ಲಡಾಖ್​ ಮತ್ತು ಜಮ್ಮು-ಕಾಶ್ಮೀರ (Jammu-Kahsmir) ಪ್ರವಾಸ ಹಮ್ಮಿಕೊಂಡಿದ್ದಾರೆ. ಅವರು ಈಗಾಗಲೇ ಲಡಾಖ್​ ತಲುಪಲಿದ್ದಾರೆ. ಈ ಬಾರಿಯ ದಸರಾ ಹಬ್ಬವನ್ನು ಅವರು ಲಡಾಖ್​ನ ದ್ರಾಸ್​​​ ಪ್ರದೇಶದಲ್ಲಿ, ಭಾರತೀಯ ಸೇನೆ ಜತೆ ಆಚರಿಸಲು ನಿರ್ಧರಿಸಿದ್ದು, ತನ್ನಿಮಿತ್ತ ಇಂದೇ ಅಲ್ಲಿಗೆ ತೆರಳಲಿದ್ದಾರೆ.  ವಿಶ್ವದಲ್ಲಿ ತಾಪಮಾನ ಅತ್ಯಂತ ಕೆಳಮಟ್ಟಕ್ಕೆ ಇಳಿಯುವ ಪ್ರದೇಶಗಳಲ್ಲಿ ಈ  ದ್ರಾಸ್​​ ಪ್ರದೇಶವೂ ಒಂದು. ಇಲ್ಲಿ ಕೆಲವೊಮ್ಮೆ ತಾಪಮಾನ -40 ಡಿಗ್ರಿ ಸೆಲ್ಸಿಯಸ್​​ಗಿಂತಲೂ ಕೆಳಗೆ ಇಳಿಯುತ್ತದೆ. ರಾಷ್ಟ್ರಪತಿಗಳು ಸಾಮಾನ್ಯವಾಗಿ ದಸರಾ ಹಬ್ಬವನ್ನು ದೆಹಲಿಯಲ್ಲಿಯೇ ಆಚರಿಸುವುದು ಸಂಪ್ರದಾಯ. ಆದರೆ ರಾಮನಾಥ ಕೋವಿಂದ್​ ಈ ಬಾರಿ ಸಂಪ್ರದಾಯ ಮೀರಲಿದ್ದು, ಭಾರತೀಯ ಸೇನೆಯೊಂದಿಗೆ, ದ್ರಾಸ್​​ನಲ್ಲಿ ನವರಾತ್ರಿ ವಿಜಯದಶಮಿ ಆಚರಣೆ ನಡೆಸಲಿದ್ದಾರೆ.  

ರಾಷ್ಟ್ರಪತಿ ರಾಮನಾಥ ಕೋವಿಂದ್​​ರ ಲಡಾಖ್​ ಮತ್ತು ಜಮ್ಮು-ಕಾಶ್ಮೀರ ಭೇಟಿ ಬಗ್ಗೆ ರಾಷ್ಟ್ರಪತಿ ಭವನ ಪ್ರಕಟಣೆ ಬಿಡುಗಡೆ ಮಾಡಿದೆ. ರಾಮನಾಥ ಕೋವಿಂದ್​ ಅವರು ಅಕ್ಟೋಬರ್​ 14 ಮತ್ತು 15ರಂದು ಲಡಾಖ್​, ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ. ಕಾರ್ಗಿಲ್​ ಯುದ್ಧದಲ್ಲಿ ಮಡಿದ ಹುತಾತ್ಮರಿಗೆ ಅಕ್ಟೋಬರ್​ 15ರಂದು ರಾಮನಾಥ ಕೋವಿಂದ್​ ಶ್ರದ್ಧಾಂಜಲಿ ಸಲ್ಲಿಸುವರು. ಅದಾದ ಬಳಿಕ ಅಲ್ಲಿನ ಸೇನಾ ಅಧಿಕಾರಿಗಳು ಮತ್ತು ಸೈನಿಕರೊಟ್ಟಿಗೆ ಸಂವಾದ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದೆ.

ಮೊದಲ ದಿನ ಅಂದರೆ ಇಂದು ರಾಮನಾಥ ಕೋವಿಂದ್ ಅವರು, ಲಡಾಖ್​ಗೆ ತೆರಳಲಿದ್ದಾರೆ. ಅಲ್ಲಿ ಲೇಹ್​​ನ ಸಿಂಧು ಘಾಟ್​​ನಲ್ಲಿ ಸಿಂಧು ದರ್ಶನ ಪೂಜೆ ನೆರವೇರಿಸಲಿದ್ದಾರೆ. ಈ ಪ್ರದೇಶ ಶೇಯ್​ ಎಂಬ ಗ್ರಾಮದ ಬಳಿಯಿದ್ದು, ನೈಸರ್ಗಿಕವಾಗಿ ಅತ್ಯಂತ ಸುಂದರವಾದ ಪ್ರದೇಶವಾಗಿದೆ.  ಇಂದು ಸಂಜೆ ರಾಮನಾಥ ಕೋವಿಂದ್​ ಜಮ್ಮು-ಕಾಶ್ಮಿರಕ್ಕೆ ತೆರಳಿ ಅಲ್ಲಿ ಭಾರತೀಯ ಸೇನೆಯ ಉತ್ತರ ಕಮಾಂಡ್​​​ನ ಪ್ರಧಾನ ಕಚೇರಿಯಿರುವ ಉಧಾಂಪುರ ಸ್ಟೇಶನ್​​​ನಲ್ಲಿ ಯೋಧರೊಟ್ಟಿಗೆ ಸಂವಾದ ನಡೆಸುವರು.

ಅಕ್ಟೋಬರ್​ 15ರಂದು ಅಂದರೆ ವಿಜಯದಶಮಿ ದಿನದಂದು ರಾಷ್ಟ್ರಪತಿಗಳು ಲಡಾಖ್​​ನ ದ್ರಾಸ್​ನಲ್ಲಿರಲಿದ್ದಾರೆ. 1999ರ ಕಾರ್ಗಿಲ್​ ಯುದ್ಧದಲ್ಲಿ ಮಡಿದ ಯೋಧರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸುವರು. ಈ ದ್ರಾಸ್​​​ನ್ನು ಲಡಾಖ್​​ನ ಗೇಟ್​ವೇ ಎಂದೇ ಕರೆಯಲಾಗುತ್ತದೆ. ಸಮುದ್ರಮಟ್ಟದಿಂದ ಎತ್ತರವಾಗಿರುವ ಈ ಗುಡ್ಡ ಪ್ರದೇಶ ಟ್ರೆಕ್ಕಿಂಗ್​​ಗೆ ಹೆಸರಾದ ತಾಣ. ಪ್ರವಾಸಿಗರ ಅಚ್ಚುಮೆಚ್ಚಿನ ಪ್ರದೇಶವಾಗಿದೆ. ಹಾಗೇ, ಅತ್ಯಂತ ಮಹತ್ವವಾದ ಸೇನಾ ತಾಣವೂ ಹೌದು. ತುಂಬ ಚಳಿಯಿರುವ ಈ ಜಾಗದಲ್ಲಿ ಭಾರತೀಯ ಯೋಧರು ನಿಂತು ದೇಶ ರಕ್ಷಣೆ ಮಾಡುತ್ತಿದ್ದಾರೆ. ಅಂಥ ಸೈನಿಕರೊಟ್ಟಿಗೆ ರಾಮನಾಥ ಕೋವಿಂದ್​ ವಿಜಯದಶಮಿ ಆಚರಿಸಲಿದ್ದಾರೆ.

ಇದನ್ನೂ ಓದಿ: Coronavirus cases in India ಭಾರತದಲ್ಲಿ 18,987 ಹೊಸ ಕೊವಿಡ್ ಪ್ರಕರಣ ಪತ್ತೆ, 246 ಮಂದಿ ಸಾವು

Mysore Palace Ayudha Puja: ಮೈಸೂರಿನಲ್ಲಿ ಆಯುಧ ಪೂಜೆ ಸಂಭ್ರಮ, ರಾಜ ವಂಶಸ್ಥರಿಂದ ಪಟ್ಟದ ಕತ್ತಿ, ಪಲ್ಲಕ್ಕಿ ಪೂಜೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada