ದೆಹಲಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತ ದೇಶದ ಜನತೆಗೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್, 72ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿದರು. ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ರಾಮನಾಥ್ ಕೋವಿಂದ್ ಮಾತನಾಡಿದರು.
ಭಾರತವು ವೈವಿಧ್ಯಮಯ ಹಬ್ಬ-ಹರಿದಿನಗಳನ್ನು ಹೊಂದಿರುವ ದೇಶ. ಆದರೆ, ರಾಷ್ಟ್ರೀಯ ಉತ್ಸವಗಳನ್ನು ನಾವು ದೇಶಭಕ್ತಿಯಿಂದ ಒಟ್ಟಾಗಿ ಆಚರಿಸುತ್ತೇವೆ ಎಂದು ರಾಷ್ಟ್ರಪತಿ ತಿಳಿಸಿದರು. ನ್ಯಾಯ, ಸ್ವಾತಂತ್ರ್ಯ, ಸಮತೆ, ಭ್ರಾತೃತ್ವ ನಮ್ಮ ಪ್ರಜಾಪ್ರಭುತ್ವದ ಪೀಠಿಕೆಯಲ್ಲಿ ಬರೆಯಲಾಗಿರುವ ಪವಿತ್ರ ಅಂಶಗಳು. ಎಲ್ಲಾ ಭಾರತೀಯರಿಗೂ ಗಣರಾಜ್ಯೋತ್ಸವ ಮಹತ್ವದ್ದಾಗಿದೆ ಎಂದು ಹೇಳಿದರು.
ನಾವು ಭಾರತೀಯರು, ಕೊವಿಡ್ ವಿರುದ್ಧ ಯಶಸ್ವಿ ಹೋರಾಟ ನಡೆಸಿದ್ದೇವೆ. ಕೊರೊನಾ ವಿರುದ್ಧ ಲಸಿಕೆ ಕಂಡು ಹಿಡಿದು ವಿಜ್ಞಾನಿಗಳು ಹೆಮ್ಮೆಯ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಲಸಿಕೆ ಕಂಡುಹಿಡಿದ ವಿಜ್ಞಾನಿಗಳಿಗೆ ಅಭಿನಂದನೆ ತಿಳಿಸಿದರು. ಕೊವಿಡ್ ನಿಯಂತ್ರಣಕ್ಕೆ ಮುಂದೆಯೂ ಸಹಕಾರ ಅಗತ್ಯವಿದೆ ಎಂದ ಕೋವಿಂದ್, ಆರೋಗ್ಯ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸಿದರು.
ಕೊವಿಡ್ ಪರಿಸ್ಥಿತಿಯ ಸಂದರ್ಭದಲ್ಲೂ ಭಾರತೀಯರು ಕೃಷಿ ಉತ್ಪಾದನೆಯಲ್ಲಿ ಹಿಂದೆ ಉಳಿಯಲಿಲ್ಲ. ತರಕಾರಿ, ದವಸ-ಧಾನ್ಯ, ಹಾಲು, ಮುಂತಾದ ಆಹಾರ ಪದಾರ್ಥಗಳ ಪೂರೈಕೆಗೆ ತೊಡಕುಂಟಾಗಲಿಲ್ಲ. ಪ್ರಾಕೃತಿಕ ವೈಪರಿತ್ಯದ ನಡುವೆಯೂ ಕೆಲಸ ಮಾಡಿದ ರೈತ ಸಮುದಾಯಕ್ಕೆ ರಾಷ್ಟ್ರಪತಿಗಳು ಗೌರವ ಸಲ್ಲಿಸಿದರು.
ಸಿಯಾಚಿನ್, ಗಾಲ್ವಾನ್ನಂಥ ಅತಿ ಕಡಿಮೆ ತಾಪಮಾನ ಹೊಂದಿರುವ ಪ್ರದೇಶದಲ್ಲಿ ಹಾಗೂ ಜೈಸಲ್ಮೇರ್ನಂಥಾ ಅತಿ ಹೆಚ್ಚು ತಾಪಮಾನ ಹೊಂದಿರುವ ಪ್ರದೇಶದಲ್ಲಿ ಮತ್ತು ದೊಡ್ಡ ಸಮುದ್ರ ತೀರ ಭೂಭಾಗದಲ್ಲಿ ನಮ್ಮ ಯೋಧರು ಪ್ರತಿ ಕ್ಷಣದಲ್ಲೂ ಕಟ್ಟೆಚ್ಚರದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೂ ರಾಷ್ಟ್ರಪತಿಗಳು ನಮನ ಸಲ್ಲಿಸಿದರು.
ಹವಾಮಾನ ಬದಲಾವಣೆಗೆ ಜಾಗತಿಕ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ರಾಮನಾಥ್ ಕೋವಿಂದ್ ಅಭಿಪ್ರಾಯಪಟ್ಟರು. ಕಾರ್ಮಿಕ ಹಾಗೂ ಕೃಷಿ ವಿಭಾಗದ ಆರ್ಥಿಕ ಅಭಿವೃದ್ಧಿಗೆ ಶಾಸಕಾಂಗದ ಶ್ರಮ ಮುಂದುವರಿಯಲಿದೆ ಎಂದು ತಿಳಿಸಿದರು.
ಕಳೆದ ವರ್ಷ ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇತ್ತು. ನಮ್ಮ ವೀರ ಯೋಧರು ಅದನ್ನು ಸಮರ್ಥವಾಗಿ ಎದುರಿಸಿದರು. ಗಾಲ್ವಾನ್ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿದ್ದಾರೆ. ಆ ಧೈರ್ಯಶಾಲಿ ಸೈನಿಕರಿಗೆ ಇಡೀ ದೇಶ ಕೃತಜ್ಞರಾಗಿರುತ್ತದೆ ಎಂದು ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಭಾಷಣ ಮಾಡಿದರು.
ಗಣರಾಜ್ಯೋತ್ಸವ ಸ್ತಬ್ಧಚಿತ್ರದಲ್ಲಿ ಶಿವಮೊಗ್ಗ ರಂಗಾಯಣ ರೆಪರ್ಟರಿ ಕಲಾವಿದರು
Published On - 9:05 pm, Mon, 25 January 21