ವಾಜಪೇಯಿ 96ನೇ ಜನ್ಮದಿನದಂದು 9 ಕೋಟಿ ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ ಮೋದಿ
ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳಲು ವಿವಿಧ ವೇದಿಕೆಗಳನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ. ಪಿಎಂ ಕಿಸಾನ್ ಯೋಜನೆಯ ₹ 18 ಸಾವಿರ ಕೋಟಿ ಹಣವನ್ನು ಬಿಡುಗಡೆಗೊಳಿಸಿ ನಾಳೆ (ಡಿ.25) ದೇಶದ 9 ಕೋಟಿ ರೈತರನ್ನುದ್ದೇಶಿ ವರ್ಚುವಲ್ ಗೋಷ್ಠಿ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ, ಕೃಷಿ ಕಾಯ್ದೆಗಳ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲಿದ್ದಾರೆ.
ದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳಲು ವಿವಿಧ ವೇದಿಕೆಗಳನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ. ಪಿಎಂ ಕಿಸಾನ್ ಯೋಜನೆಯ 18ಸಾವಿರ ಕೋಟಿ ಹಣವನ್ನು ಬಿಡುಗಡೆಗೊಳಿಸಿ ನಾಳೆ (ಡಿ.25) ದೇಶದ 9 ಕೋಟಿ ರೈತರನ್ನುದ್ದೇಶಿ ವರ್ಚುವಲ್ ಗೋಷ್ಠಿ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ, ಕೃಷಿ ಕಾಯ್ದೆಗಳ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 96ನೇ ಜನ್ಮದಿನದಂದು ನಡೆಯಲಿರುವ ವರ್ಚುವಲ್ ಕಾರ್ಯಕ್ರಮಕ್ಕೆ ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಕೇಂದ್ರ ಸಚಿವರು, ಬಿಜೆಪಿಯ ಸಂಸದರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಎಲ್ಲಾ ರಾಜ್ಯಗಳ ಬಿಜೆಪಿ ಘಟಕಗಳ ಅಧ್ಯಕ್ಷರಿಗೆ, ಪ್ರಮುಖ ನಾಯಕರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪತ್ರ ಬರೆಯಲಾಗಿದೆ. ಗೃಹ ಸಚಿವ ಅಮಿತ್ ಶಾ, ದೆಹಲಿ ಗೋಶಾಲೆಯೊಂದರಿಂದ ವರ್ಚುವಲ್ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಎಲ್ಲಾ ಎಪಿಎಂಸಿ, ಜಿಲ್ಲಾ ಕೇಂದ್ರ ಮತ್ತು ಪ್ರಮುಖ ನಗರಗಳಲ್ಲಿ ಬೃಹತ್ ಪರದೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಕೇಳಲು ವ್ಯವಸ್ಥೆ ಮಾಡುವಂತೆ ಬಿಜೆಪಿ ರಾಷ್ಟ್ರಾಧ್ಯಕ ಜೆ.ಪಿ.ನಡ್ಡಾ ಸೂಚಿಸಿದ್ದಾರೆ. ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲಿ ಪ್ರಧಾನಿಯವರ ಭಾಷಣದ ಒಂದು ಘಂಟೆಗೂ ಮುನ್ನ ಪ್ರತ್ಯೇಕ ಕಾರ್ಯಕ್ರಮ ಏರ್ಪಡಿಸಲು ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರ ಪ್ರಾರಂಭಿಸಿದ ಯೋಜನೆಗಳ ಕರಪತ್ರಗಳನ್ನು ಹಂಚಲು ಸಹ ಸಿದ್ಧತೆ ನಡೆಸಲಾಗಿದೆ.
ನಾಳೆಯ ಕಾರ್ಯಕ್ರಮವು ನೂತನ ಕೃಷಿ ಕಾನೂನುಗಳ ಪರ ಒಲವು ಮೂಡಿಸಲು ಬಿಜೆಪಿ ಕೈಗೊಂಡಿರುವ ಒಂದು ಭಾಗವಾಗಿದೆ. ಅಲ್ಲದೇ, ಮುಂದಿನ ಒಂದು ತಿಂಗಳಲ್ಲಿ 100 ಪತ್ರಿಕಾಗೋಷ್ಠಿ ಮತ್ತು 700 ಸಭೆಗಳನ್ನು ದೇಶಾದ್ಯಂತ ಹಮ್ಮಿಕೊಳ್ಳಲು ಬಿಜೆಪಿ ಯೋಜನೆ ರೂಪಿಸಿದೆ.