ಕೊಚ್ಚಿ: ರಾಜ್ಯದಲ್ಲಿ ಅರ್ಪಣೆಗೊಂಡ ಐದು ಯೋಜನೆಗಳು ದೇಶದ ಬೆಳವಣಿಗೆಗೆ ಶಕ್ತಿ ತುಂಬಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ (ಫೆ. 14) ಕೇರಳದ ಕೊಚ್ಚಿಯಲ್ಲಿ ತಿಳಿಸಿದರು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ (BPCL) ಪ್ರೊಪಿಲಿನ್ ಡೆರಿವೇಟಿವ್ ಪೆಟ್ರೋಕೆಮಿಕಲ್ ಯೋಜನೆ ಅರ್ಪಣೆ, ಬೊಲ್ಘಟ್ಟಿ ಮತ್ತು ವಿಲ್ಲಿಂಗ್ಡನ್ ದ್ವೀಪ ನಡುವೆ ಕಾರ್ಯನಿರ್ವಹಿಸಲಿರುಯವ Ro-Ro vessels ಹಾಗೂ ಸಾಗರಿಕಾ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಉದ್ಘಾಟನೆ ನೆರವೇರಿಸಿದ ಬಳಿಕ ಪ್ರಧಾನಿ ಮಾತನಾಡಿದರು.
ಕೊಚ್ಚಿ ಬಂದರು ಪ್ರದೇಶದಲ್ಲಿ ಮರೈನ್ ಇಂಜಿನಿಯರಿಂಗ್ ತರಬೇತಿ ಕೇಂದ್ರ ರಚನೆಗೆ ಹಾಗೂ ಸೌತ್ ಕೋಲ್ ಬರ್ತ್ ಮರುನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು. ಈ ಮೂಲಕ, ಬಂದರಿನ ಒಳಭಾಗದಲ್ಲಿ ಕಾರ್ಯನಿರ್ವಹಿಸಲಿರುವ ದೇಶದ ಏಕೈಕ ತರಬೇತಿ ಸಂಸ್ಥೆ ಮರೈನ್ ಇಂಜಿನಿಯರಿಂಗ್ ತರಬೇತಿ ಕೇಂದ್ರಕ್ಕೆ ಪ್ರಧಾನಿ ಶಂಕುಸ್ಥಾಪನೆ ಮಾಡಿದರು.
ಈ ಎಲ್ಲಾ ಯೋಜನೆಗಳು ಆತ್ಮನಿರ್ಭರ್ ಭಾರತ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಮೋದಿ ಅಭಿಪ್ರಾಯಪಟ್ಟರು. ಸ್ಥಳೀಯ ಪ್ರದೇಶಗಳಿಗೆ ಭೇಟಿ ನೀಡಿ, ಹೊಸ ಸ್ಥಳಗಳನ್ನು ಆವಿಷ್ಕರಿಸುವಂತೆ ಜನರಿಗೆ ಕರೆ ನೀಡಿದ ಪ್ರಧಾನಿ, ಅಭಿವೃದ್ಧಿ ಯೋಜನೆಗಳನ್ನು ಪ್ರವಾಸಿ ತಾಣಗಳಾಗಿ ಪರಿಗಣಿಸುವಂತೆ ನವೋದ್ಯಮಗಳಿಗೆ ಕರೆ ನೀಡಿದರು.
ಕೊವಿಡ್-19 ಕಾರಣದಿಂದ ವಿದೇಶ ಪ್ರಯಾಣ ಬೆಳೆಸಲಾಗದ ದೊಡ್ಡ ಸಂಖ್ಯೆಯ ಜನರು, ಸ್ಥಳೀಯ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿನ ಫೊಟೊಗಳನ್ನು ಹಂಚಿಕೊಂಡು, ಅವುಗಳ ಬಗ್ಗೆ ಬರೆಯುತ್ತಿದ್ದಾರೆ. ಇದರಿಂದ ದೇಶಕ್ಕೆ ಆರ್ಥಿಕ ಲಾಭವಾಗುವುದರ ಜೊತೆಗೆ, ಯುವಜನತೆಯನ್ನು ದೇಶದ ಸಂಸ್ಕೃತಿಗೆ ಹತ್ತಿರವಾಗಿಸುತ್ತಿದೆ. ವಿಶ್ವ ಪ್ರವಾಸೋದ್ಯಮ ಪಟ್ಟಿಯಲ್ಲಿ ಈ ಮೊದಲು 65ನೇ ಸ್ಥಾನದಲ್ಲಿದ್ದ ಭಾರತ ಈಗ 34ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಗಲ್ಫ್ ರಾಷ್ಟ್ರಗಳಲ್ಲಿ ಬಂಧಿತರಾಗಿದ್ದ ಅನಿವಾಸಿ ಭಾರತೀಯರನ್ನು ಬಿಡುಗಡೆಗೊಳಿಸುವಲ್ಲಿ ಬಹುತೇಕ ದೇಶಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿವೆ. ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಕಲ್ಯಾಣಕ್ಕೆ ಸರ್ಕಾರ ಕಟಿಬದ್ಧವಾಗಿದೆ. ಕತಾರ್, UAE ಹಾಗೂ ಬಹರೈನ್ಗೆ ಭೇಟಿ ನೀಡಿದ್ದಾಗ ಅಲ್ಲಿನ ಅನಿವಾಸಿ ಭಾರತೀಯರ ಜೊತೆ ಸಂವಾದ ನಡೆಸುವ ಅವಕಾಶವೂ ಸಿಕ್ಕಿತ್ತು ಎಂದು ಸ್ಮರಿಸಿಕೊಂಡರು.
ಕೊವಿಡ್ ಲಾಕ್ಡೌನ್ ವೇಳೆ, ವಂದೇ ಭಾರತ್ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 50 ಲಕ್ಷ ಭಾರತೀಯರನ್ನು ದೇಶಕ್ಕೆ ಮರಳಿ ಕರೆತರಲಾಯಿತು. ಅದರಲ್ಲಿ ಬಹುತೇಕರು ಕೇರಳಿಗರಾಗಿದ್ದರು ಎಂದು ಪ್ರಧಾನಿ ತಿಳಿಸಿದರು. ಕೇರಳ ರಾಜ್ಯ ಅಭಿವೃದ್ಧಿ ಯೋಜನೆಗಳಿಗಾಗಿ ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಅನುದಾನ ನೀಡಲಾಗಿದೆ. ಎರಡನೇ ಹಂತದ ಕೊಚ್ಚಿ-ಮೆಟ್ರೋ ರೈಲು ಯೋಜನೆಗೂ ಬಜೆಟ್ನಲ್ಲಿ ಹಣ ಘೋಷಿಸಲಾಗಿದೆ ಎಂದು ಹೇಳಿದರು.
ಕೇರಳದ ಕೈಗಾರಿಕೆ, ಮೂಲಸೌಕರ್ಯ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸದಾ ಕೈಜೋಡಿಸುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ವಿ. ಮುರಳೀಧರನ್ ಮತ್ತು ಮನ್ಸುಖ್ ಮಾಂಡವ್ಯ ಸಮಾರಂಭದಲ್ಲಿ ಪಾಲ್ಗೊಂಡರು.
ಇದನ್ನೂ ಓದಿ: PM Modi in Tamil Nadu: ಅರ್ಜುನ್ ಟ್ಯಾಂಕ್ ಸೇನೆಗೆ ಹಸ್ತಾಂತರ; ತಮಿಳುನಾಡು ರೈತರ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ
Published On - 8:55 pm, Sun, 14 February 21