MSP ಇತ್ತು, MSP ಇದೆ ಮತ್ತು MSP ಮುಂದೆಯೂ ಇರಲಿದೆ: ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ

| Updated By: ganapathi bhat

Updated on: Apr 06, 2022 | 8:11 PM

ಇಡೀ ವಿಶ್ವ ಈಗ ಸವಾಲುಗಳನ್ನು ಎದುರಿಸುತ್ತಿದೆ. ರಾಷ್ಟ್ರಪತಿ ಭಾಷಣ ಆತ್ಮವಿಶ್ವಾಸ ಹುಟ್ಟಿಸುವ ದಿಶೆಯಲ್ಲಿತ್ತು. ಆ ವೇಳೆ ಎಲ್ಲರೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.

MSP ಇತ್ತು, MSP ಇದೆ ಮತ್ತು MSP ಮುಂದೆಯೂ ಇರಲಿದೆ: ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ
ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತು
Follow us on

ದೆಹಲಿ: ಇಡೀ ವಿಶ್ವ ಈಗ ಸವಾಲುಗಳನ್ನು ಎದುರಿಸುತ್ತಿದೆ. ರಾಷ್ಟ್ರಪತಿ ಭಾಷಣ ಆತ್ಮವಿಶ್ವಾಸ ಹುಟ್ಟಿಸುವ ದಿಶೆಯಲ್ಲಿತ್ತು. ಆ ವೇಳೆ ಎಲ್ಲರೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಸದನದಲ್ಲಿ ಎಲ್ಲಾ ಪಕ್ಷಗಳ ಸದಸ್ಯರು ಇರಬೇಕಿತ್ತು ಎಂದು ರಾಜ್ಯಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ್ದಾರೆ.

ಭಾರತದ ಬಗ್ಗೆ ಎಲ್ಲರಿಗೂ ನಂಬಿಕೆ, ವಿಶ್ವಾಸ ಹೆಚ್ಚಾಗಿದೆ. ದೇಶದಿಂದ ಉತ್ತಮ ಅವಕಾಶಗಳು ಕೈತಪ್ಪಲು ಬಿಡುವುದಿಲ್ಲ. ಇಡೀ ವಿಶ್ವ ಭಾರತದ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಕೊವಿಡ್ ವಿರುದ್ಧದ ಹೋರಾಟದ ಶ್ರೇಯ ಪಕ್ಷಕ್ಕೆ ಸೇರಿದ್ದಲ್ಲ. ಅದರ ಯಶಸ್ಸು ಯಾವುದೇ ಪಕ್ಷ ಅಥವಾ ಓರ್ವ ವ್ಯಕ್ತಿಗೆ ಸೇರಿದ್ದಲ್ಲ. ಇದು ಭಾರತ ದೇಶಕ್ಕೆ ಸೇರಿದ ಶ್ರೇಯವಾಗಿದೆ. ಕೊರೊನಾ ಎಂಬ ಅಪರಿಚಿತ ಶತ್ರುವಿನ ವಿರುದ್ಧ ಯಶಸ್ವಿಯಾಗಿ ಹೋರಾಡಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ದೀಪ ಹಚ್ಚಲು ನೀಡಿದ್ದ ಕರೆಯನ್ನು ಕೆಲವರು ಗೇಲಿ ಮಾಡಿದ್ದರು. ಕೊವಿಡ್ ವಿರುದ್ಧ ಕೈಗೊಂಡ ಕೆಲಸಗಳ ಬಗ್ಗೆ ವ್ಯಂಗ್ಯವಾಡಿದ್ದರು. ಸರ್ಕಾರವನ್ನು ವಿರೋಧಿಸಲು ಹಲವು ವಿಷಯಗಳಿವೆ. ಆದರೆ, ಮನೋಬಲ ಕುಂದಿಸುವ ಕೆಲಸವನ್ನು ಮಾಡಬೇಡಿ ಎಂದು ರಾಜ್ಯಸಭೆಯಲ್ಲಿ ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಕೊವಿಡ್‌ಗೆ ಭಾರತೀಯರು ಲಸಿಕೆಯನ್ನು ಕಂಡುಹಿಡಿದಿದ್ದೇವೆ. ಮಾನವನ ಇತಿಹಾಸದಲ್ಲಿಯೇ ಭಾರತದ ಸಾಧನೆ ಅನನ್ಯ. ಇಡೀ ದೇಶದ ಜನರು ಈ ಬಗ್ಗೆ ಗರ್ವ ಪಡಬೇಕು. ವಿಶ್ವಕ್ಕೆ ಅತಿ ಹೆಚ್ಚು ಲಸಿಕೆ ನೀಡಿದ ದೇಶ ಭಾರತ. ವೈದ್ಯಕೀಯ ಕ್ಷೇತ್ರದಲ್ಲಿ ಭಾರತ ಬಹಳಷ್ಟು ಸಾಧನೆ ಮಾಡುತ್ತಿದೆ. ದೇಶದಲ್ಲಿ ಅತಿ ದೊಡ್ಡ ಕೊವಿಡ್ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊವಿಡ್ ಲಸಿಕೆ ವಿತರಣೆಯಿಂದ ಇತರ ದೇಶಗಳ ಜೊತೆ ಭಾರತ ಉತ್ತಮ ಬಾಂಧವ್ಯ ಹೊಂದಿದೆ ಎಂದು ಪ್ರಧಾನಿ ದೇಶದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: India Pharmacy Hub ಮಾನವನ ಇತಿಹಾಸದಲ್ಲೇ ಭಾರತದ ಸಾಧನೆ ಅನನ್ಯ; ಈ ಗೆಲವು ಯಾವುದೇ ಒಂದು ವ್ಯಕ್ತಿಗೆ ಸಲ್ಲುವುದಿಲ್ಲ- ಪ್ರಧಾನಿ ಮೋದಿ ಭಾಷಣ

ನಮ್ಮ ಸರ್ಕಾರ ಬಡವರಿಗೆ ಸಮರ್ಪಿತವಾಗಿದೆ
ಭಾರತದ ರಾಷ್ಟ್ರೀಯವಾದ ಸಂಕೀರ್ಣವಾಗಿಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠವಾಗಿದೆ. ಪ್ರಜಾಪ್ರಭುತ್ವದ ಬಗ್ಗೆ ಹಲವರು ಉಪದೇಶಗಳನ್ನು ನೀಡಿದರು. ಆದರೆ, ನಾವು ಭಾರತದ ಮೂಲಭೂತ ಶಕ್ತಿಗಳ ಬಗ್ಗೆ ತಿಳಿಯುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ನೇತಾಜಿ ಸುಭಾಷ್‌ಚಂದ್ರ ಬೋಸ್ ದೇಶದ ಮೊದಲ ಪ್ರಧಾನಿ. ಸುಭಾಷ್‌ಚಂದ್ರ ಬೋಸ್‌ರ ಆದರ್ಶವನ್ನು ಮರೆಯಲಾಗುವುದಿಲ್ಲ. ದೇಶದ ರಾಷ್ಟ್ರವಾದ ಸತ್ಯಂ ಶಿವಂ ಸುಂದರಂನಿಂದ ಪ್ರೇರಿತವಾಗಿದೆ. ದೇಶದ ಪ್ರಜಾಪ್ರಭುತ್ವ ಆಕ್ರಮಣಕಾರಿಯಲ್ಲ ಎಂದು ಮೋದಿ ವಿವರಿಸಿದರು.

ಆತ್ಮನಿರ್ಭರ್ ಭಾರತ್ ಬಗ್ಗೆಯೂ ಸಾಕಷ್ಟು ಚರ್ಚೆಗಳಾದವು. ಭಾರತದಲ್ಲಿ ಈಗ ದಾಖಲೆ ಪ್ರಮಾಣದಲ್ಲಿ ವಿದೇಶಿ ಹೂಡಿಕೆ ಆಗುತ್ತಿದೆ. ಪ್ರತಿ ತಿಂಗಳು ಡಿಜಿಟಲ್ ವೇದಿಕೆ ಮೂಲಕ 4 ಲಕ್ಷ ಕೋಟಿ ರೂ. ವ್ಯವಹಾರ ನಡೆಯುತ್ತಿದೆ. ಮೊಬೈಲ್ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಭಾರತ ಅವಕಾಶಗಳ ಆಗರವಾಗಿದೆ. ಎಲ್ಲ ದೇಶಗಳ ಗಮನ ಈಗ ಭಾರತ ದೇಶದತ್ತ ಇದೆ. ಎಲ್ಲ ಕ್ಷೇತ್ರಗಳಲ್ಲೂ ತನ್ನ ರಕ್ಷಣೆಗೆ ಭಾರತ ಸಮರ್ಥವಾಗಿದೆ ಎಂದು ಮೋದಿ ಮಾತನಾಡಿದರು.

ನಮ್ಮ ಸರ್ಕಾರ ಬಡವರಿಗೆ ಸಮರ್ಪಿತವಾಗಿದೆ. ವಿಶ್ವದಲ್ಲಿ ನಿರಾಸೆ ಇದ್ದರೆ ಭಾರತದಲ್ಲಿ ಅವಕಾಶಗಳು ತುಂಬಿವೆ. ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತಿದ್ದೇವೆ. 10 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಬಡವರಿಗಾಗಿ 2 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದೇವೆ. 8 ಕೋಟಿಗೂ ಹೆಚ್ಚು ಅಡುಗೆ ಅನಿಲ ಸಂಪರ್ಕ ನೀಡಿದ್ದೇವೆ. ಬಡವರಿಗೆ ವೈದ್ಯಕೀಯ ಸೌಲಭ್ಯವನ್ನು ಸರಳಗೊಳಿಸಿದ್ದೇವೆ. ದೇಶವನ್ನು ಬಡತನದಿಂದ ಮುಕ್ತಗೊಳಿಸಲೇಬೇಕು ಎಂದು ಮೋದಿ ತಿಳಿಸಿದರು.

ಇದನ್ನೂ ಓದಿ: ಮಾತುಕತೆ ಮೂಲಕ ರೈತ ಸಮಸ್ಯೆ ಬಗೆಹರಿಸಿಕೊಳ್ಳೋಣ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿಯಿಂದ ಮತ್ತೊಮ್ಮೆ ಚರ್ಚೆಗೆ ಆಹ್ವಾನ!

ರೈತರ ಬಗ್ಗೆ ಮೋದಿ ಮಾತು, ದೀದಿ ವಿರುದ್ಧ ವಾಗ್ದಾಳಿ
ರೈತರ ಆಂದೋಲನದ ಬಗ್ಗೆ ಸದನದಲ್ಲಿ ಚರ್ಚೆ ನಡೆಯಿತು. ಆದರೆ, ಹೋರಾಟ ಏಕೆ ನಡೆಯುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಮಾಜಿ ಪ್ರಧಾನಿ ದೇವೇಗೌಡರಿಗೆ ನಾನು ಆಭಾರಿಯಾಗಿದ್ದೇನೆ. ಅವರ ಜೀವನ ರೈತರಿಗೆ ಅರ್ಪಿತವಾಗಿದೆ. ದೇವೇಗೌಡರು ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಶೇ.86ರಷ್ಟು ರೈತರ ಬಳಿ 2 ಹೆಕ್ಟೇರ್‌ಗಿಂತ ಕಡಿಮೆ ಜಮೀನಿದೆ ಎಂದು ನರೇಂದ್ರ ಮೋದಿ ಹೆಚ್.ಡಿ. ದೇವೇಗೌಡರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಮಾಜಿ ಪ್ರಧಾನಿ ಚೌಧರಿ ಚರಣ್‌ಸಿಂಗ್‌ರ ಮಾತುಗಳನ್ನು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಸಣ್ಣ ರೈತರು ಬ್ಯಾಂಕ್‌ನಲ್ಲಿ ಖಾತೆಯನ್ನೇ ತೆರೆದಿರುವುದಿಲ್ಲ. ಹೀಗಾಗಿ ಸಾಲಮನ್ನಾದಿಂದ ಸಣ್ಣ ರೈತರು ವಂಚಿತರಾಗಿದ್ದರು. ಹನಿ ನೀರಾವರಿಯ ಸೌಲಭ್ಯವೂ ಸಣ್ಣ ರೈತರಿಗೆ ಸಿಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಈಗ ಫಸಲ್ ಭಿಮಾ ಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ. ರೈತ ಸಮುದಾಯಕ್ಕೆ 90 ಸಾವಿರ ಕೋಟಿ ರೂಪಾಯಿಯನ್ನು ನೀಡಲಾಗಿದೆ. ಕಿಸಾನ್ ಸಮ್ಮಾನ್ ನಿಧಿಯ ಮೂಲಕವೂ ಹಣ ನೇರವಾಗಿ ರೈತರ ಖಾತೆಗೆ ಜಮೆ ಆಗುತ್ತಿದೆ. 1.15 ಲಕ್ಷ ಕೋಟಿ ರೂ. ರೈತರ ಖಾತೆಗೆ ಜಮೆ ಮಾಡಲಾಗಿದೆ. ಈವರೆಗೆ 10 ಕೋಟಿ ರೈತರಿಗೆ ಹಣವನ್ನು ನೀಡಲಾಗಿದೆ ಎಂದು ಪ್ರಧಾನಿ ತಿಳಿಸಿದರು.

ಕಿಸಾನ್ ಸಮ್ಮಾನ್ ಯೋಜನೆಯ ಹಣ ಕೆಲವೆಡೆ ಸಿಗುತ್ತಿಲ್ಲ. ಪಶ್ಚಿಮ ಬಂಗಾಳ ರೈತರಿಗೆ ಈ ಯೋಜನೆಯ ಲಾಭ ಲಭ್ಯವಾಗುತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಯೋಜನೆಗಳಿಗೆ ಅಡ್ಡಿ ಮಾಡುವುದರಿಂದ ಅಭಿವೃದ್ಧಿಗೆ ಸಮಸ್ಯೆ ಆಗು್ತ್ತದೆ. ಬದಲಾವಣೆ ಅಗತ್ಯ, ಅದನ್ನು ಎಲ್ಲರೂ ಸ್ವೀಕರಿಸಬೇಕು. ರೈತರ ಹಿತದೃಷ್ಟಿಯಿಂದ ಕೆಲವು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: West bengal election 2021 ದೀದಿ ಸರ್ಕಾರ ಶೀಘ್ರದಲ್ಲೇ ರಾಮ್​ ಕಾರ್ಡ್​ ನೋಡಲಿದೆ: ಪ್ರಧಾನಿ ನರೇಂದ್ರ ಮೋದಿ

ಕನಿಷ್ಠ ಬೆಂಬಲ ಬೆಲೆ ಬಗ್ಗೆ ಮೋದಿ ಸ್ಪಷ್ಟನೆ, ಹೋರಾಟ ಹಿಂಪಡೆಯಲು ಮನವಿ
ಹಾಲು ಉತ್ಪಾದನೆ ಯಾವುದೇ ಬಂಧನಕ್ಕೆ ಒಳಗಾಗಿಲ್ಲ. ಕೃಷಿ ಕ್ಷೇತ್ರದಲ್ಲಿ ಡೇರಿಗಳ ಪಾತ್ರ ಶೇ. 28ರಷ್ಟಿದೆ. ಹೊಸ ವಿಚಾರಗಳು ಬಂದಾಗ ಗೊಂದಲಗಳಾಗುವುದು ಸಹಜ. ರೈತರ ಜೊತೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ. ಹೋರಾಟ ಮಾಡುತ್ತಿರುವ ರೈತರ ಜೊತೆ ನಿರಂತರವಾಗಿ ಚರ್ಚೆ ಮಾಡುತ್ತಿದ್ದೇವೆ. ಕನಿಷ್ಠ ಬೆಂಬಲ ಬೆಲೆ ಬಗ್ಗೆ ಗೊಂದಲ ಬೇಡ.  MSP ಇತ್ತು, MSP ಇದೆ ಮತ್ತು MSP ಮುಂದೆಯೂ ಇರಲಿದೆ ಎಂದು ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಇರುವ ಗೊಂದಲಕ್ಕೆ ಮೋದಿ ಸ್ಪಷ್ಟ ಉತ್ತರ ನೀಡಿದರು.

ದೇಶದ ರೈತರ ಕಷ್ಟಗಳನ್ನು ದೂರ ಮಾಡಬೇಕಿದೆ. ರೈತರ ಆದಾಯ ದ್ವಿಗುಣಗೊಳಿಸುವತ್ತ ಗಮನಹರಿಸಬೇಕಿದೆ. ಕಾಯ್ದೆಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸುತ್ತೇವೆ. ರೈತರು ಬಂದು ತಮ್ಮ ಸಮಸ್ಯೆ ಬಗ್ಗೆ ಮಾತುಕತೆ ನಡೆಸಲಿ ಎಂದು ಪ್ರಧಾನಿ ವಿವರಿಸಿದ್ದಾರೆ. ಪ್ರತಿಭಟನಾನಿರತ ವೃದ್ಧ ರೈತರು ಮನೆಗೆ ತೆರಳಬೇಕು ಎಂದು ರೈತರು ತಮ್ಮ ಹೋರಾಟ ಹಿಂಪಡೆಯಲು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಹೋರಾಟ ವಾಪಸ್ ಪಡೆಯುವಂತೆ ರಾಜ್ಯಸಭೆಯಲ್ಲಿ ಪ್ರಧಾನಿ ಮನವಿ ಮಾಡಿಕೊಂಡರು.

ಪಂಜಾಬ್‌ ರೈತರ ದಾರಿ ತಪ್ಪಿಸುವ ಪ್ರಯತ್ನಗಳಾಗುತ್ತಿದೆ. ಕೆಲವರು ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಕೆಲವರಿಗೆ ಹೋರಾಟವನ್ನು ಬಿಟ್ಟು ಬದುಕಲು ಆಗುವುದಿಲ್ಲ. ಆದರೆ, ನಾವು ದಾರಿ ತಪ್ಪಿಸುವ ಹೋರಾಟಗಾರರ ಬಗ್ಗೆ ಎಚ್ಚರವಾಗಿರಬೇಕು. ಈ ದೇಶ ಸಿಖ್‌ರ ಬಗ್ಗೆ ಹೆಮ್ಮೆ ಪಡುತ್ತದೆ ಎಂದು ಮೋದಿ ಹೇಳಿದರು.

ಆತ್ಮ ನಿರ್ಭರ್ ಭಾರತ್ ಕೇವಲ ಸರ್ಕಾರದಿಂದ ಸಾಧ್ಯವಾಗುವುದಿಲ್ಲ. ಇಡೀ ದೇಶದ ಜನರ ಸಹಕಾರ ಬೇಕು. ಹೊಸ FDI ಅಂದರೆ ಫಾರಿನ್ ಡಿಸ್ಟ್ರಕ್ಟಿವ್ ಐಡಿಯಾಲಜಿ. ಈ ಹೊಸ FDI ಬಗ್ಗೆ ಎಲ್ಲರೂ ಜಾಗರೂಕರಾಗಿರುವುದು ಅಗತ್ಯ ಎಂದು ಮೋದಿ ಕುಟುಕಿದರು.

ಕೊವಿಡ್ ಸಂದರ್ಭದಲ್ಲಿ ದೇಶವನ್ನು ನಾರಿಶಕ್ತಿ ಸಂಭಾಳಿಸಿತು. ಹೊಸ ಶಿಕ್ಷಣ ನೀತಿಯಿಂದ ದೇಶಕ್ಕೆ ಲಾಭವಾಗಲಿದೆ. ಕೊವಿಡ್ ಸಂದರ್ಭದಲ್ಲಿ ಗಡಿಯಲ್ಲಿ ವಿವಾದ ಸೃಷ್ಟಿಸಲು ಯತ್ನ ನಡೆಸಲಾಯಿತು. ಆದರೆ, ನಮ್ಮ ಯೋಧರು ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಿದರು. ಎಲ್‌ಎಸಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. 130 ಕೋಟಿ ಭಾರತೀಯರ ಕನಸೇ ದೇಶದ ಕನಸು ಎಂದು ಪ್ರಧಾನಿ ಮಾತನಾಡಿದರು.

ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತು

ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜಕ್ಕೆ ಅಪಮಾನವಾಗಿದೆ: ಮನ್ ಕೀ ಬಾತ್​ನಲ್ಲಿ ನರೇಂದ್ರ ಮೋದಿ ಬೇಸರ

ದೇಶದ ವಿರುದ್ಧದ ಪಿತೂರಿಗಳನ್ನು ಗೆಲ್ಲಲು ಬಿಡುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

 

Published On - 10:44 am, Mon, 8 February 21