ಮಾತುಕತೆ ಮೂಲಕ ರೈತ ಸಮಸ್ಯೆ ಬಗೆಹರಿಸಿಕೊಳ್ಳೋಣ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿಯಿಂದ ಮತ್ತೊಮ್ಮೆ ಚರ್ಚೆಗೆ ಆಹ್ವಾನ!
ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗುತ್ತಿದೆ. ಆದರೆ, ನಾವು ಇನ್ನೂ ಸಹಮತಕ್ಕೆ ಬಂದಿಲ್ಲ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
ದೆಹಲಿ: ರೈತರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಮಾತುಕತೆ ಮೂಲಕ ರೈತರ ಗೊಂದಲ ಪರಿಹರಿಸಲು ನಿರಂತರ ಯತ್ನವಾಗುತ್ತಿದೆ ಎಂದು ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದರು.
ಧರಣಿ ನಿರತ ರೈತರು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಿ. ನಾವು ದೇಶದ ಬಗ್ಗೆ ಆಲೋಚನೆ ಮಾಡಬೇಕು ಎಂದು ರೈತ ಕಾಯ್ದೆಗಳ ಬಗ್ಗೆ ಹಾಗೂ ಪ್ರಸ್ತುತ ನಡೆಯುತ್ತಿರುವ ರೈತ ಚಳುವಳಿಯ ಬಗ್ಗೆ ಪ್ರಧಾನಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು (ಜ.30) ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆದಿದೆ. ಈ ವೇಳೆ, ಧರಣಿ ನಿರತ ರೈತರಿಗೆ ಕೇಂದ್ರ ಸರ್ಕಾರ ನೀಡಿರುವಂತಹ ಆಫರ್ ಈಗಲೂ ಚಾಲ್ತಿಯಲ್ಲಿದೆ. ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗುತ್ತಿದೆ. ಆದರೆ, ನಾವು ಇನ್ನೂ ಸಹಮತಕ್ಕೆ ಬಂದಿಲ್ಲ ಎಂದು ಮೋದಿ ತಿಳಿಸಿದರು.
ಸಂಸತ್ ಬಜೆಟ್ ಅಧಿವೇಶನದಲ್ಲಿ ಸಹಕಾರ ಕೋರಲು ಸರ್ವಪಕ್ಷ ಸಭೆ ಆಯೋಜಿಸಲಾಗಿತ್ತು. ಮೋದಿ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆ ಈಗ ಅಂತ್ಯವಾಗಿದೆ. ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್, ಟಿಎಂಸಿ ನಾಯಕ ಸುದೀಪ್ ಬಂಡ್ಯೋಪಾಧ್ಯಾಯ್, ಶಿವಸೇನಾ ನಾಯಕ ವಿನಾಯಕ್ ರಾವತ್, ಶಿರೋಮಣಿ ಅಕಾಲಿ ದಳದ ನಾಯಕ ಬಲ್ವಿಂದರ್ ಸಿಂಗ್ ಭುಂದರ್ ಕೂಡ ಭಾಗವಹಿಸಿ, ರೈತ ಆಂದೋಲನದ ಪರವಾಗಿ ಮಾತನಾಡಿದರು. ಜೆಡಿಯು ಲೋಕಸಭಾ ಸದಸ್ಯ ಆರ್ಸಿಪಿ ಸಿಂಗ್ ನೂತನ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದರು. ಇದನ್ನೂ ಓದಿ: ರೈತ ಹೋರಾಟಕ್ಕೆ ಪಾಕ್ನಿಂದ ಶಸ್ತ್ರಾಸ್ತ್ರ, ಡ್ರಗ್ಸ್ ಪೂರೈಕೆ ಹೆಚ್ಚಿದೆ: ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಆತಂಕದ ನುಡಿಗಳು
ಸರ್ವಪಕ್ಷ ಸಭೆಯ ಬಳಿಕ ಪ್ರಲ್ಹಾದ್ ಜೋಷಿ ಮಾತು ಈಗಿನ ಜಾಗತಿಕ ಪರಿಸ್ಥಿತಿಯಲ್ಲಿ ಭಾರತ ವಿಶ್ವಕ್ಕೆ ಬಹಳಷ್ಟು ಕೊಡುಗೆ ನೀಡುವ ಅವಕಾಶಗಳಿವೆ. ಅದರಿಂದ ಭಾರತದ ಅಭಿವೃದ್ಧಿಯಾಗುವ ಜೊತೆಗೆ ಬಡ ವರ್ಗದ ಜನರಿಗೆ ಅನುಕೂಲವಾಗಲಿದೆ. ಇದು ಸರ್ಕಾರದ ಹೆಗ್ಗಳಿಕೆಯ ವಿಚಾರವಲ್ಲ ಬದಲಾಗಿ, ದೇಶದ ಯಶಸ್ಸು ಎಂದು ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮಾತನಾಡಿರುವ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಮಾಹಿತಿ ನೀಡಿದರು.
ದೇಶದ ಯಶಸ್ಸಿಗಾಗಿ ಪ್ರತಿಯೊಬ್ಬರು ಕೂಡ ಕೊಡುಗೆ ನೀಡಬೇಕು. ಅದಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಚರ್ಚೆಗೆ ಸಿದ್ಧವಿದೆ. ಬಹಳಷ್ಟು ಪಕ್ಷಗಳು ಕೊರೊನಾ ಲಸಿಕೆ ವಿತರಣೆಯ ವಿಚಾರದ ಬಗ್ಗೆ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.
ಸಂಸತ್ ಕಲಾಪದ ವೇಳೆ ಸಣ್ಣ ಪಕ್ಷಗಳಿಗೆ ಮಾತನಾಡಲು ಕಡಿಮೆ ಅವಧಿ ಸಿಗುತ್ತದೆ. ಹಾಗಾಗಿ, ಅಂಥಾ ಪಕ್ಷಗಳಿಗೆ ಹೆಚ್ಚಿನ ಸಮಯಾವಕಾಶ ನೀಡಬೇಕು ಎಂದು ಕೇಳಿಕೊಂಡಿರುವ ಬಗ್ಗೆ ಜೋಷಿ ತಿಳಿಸಿದರು. ಆದರೆ, ಬಿಜೆಪಿ ಸಹಿತ ಇತರ ದೊಡ್ಡ ಪಕ್ಷಗಳು ಅಧಿವೇಶನದಲ್ಲಿ ಅಡಚಣೆ ಉಂಟುಮಾಡಬಾರದು ಎಂದು ಹೇಳಿದ್ದಾರೆ ಎಂದು ಹೇಳಿದರು.
‘ರಾಷ್ಟ್ರಧ್ವಜ ಗೌರವಿಸುವ ಬಗ್ಗೆ ಬಿಜೆಪಿ ಪಾಠ ಬೇಕಿಲ್ಲ; ಪ್ರತಿಭಟನೆಯಲ್ಲಿರುವ ರೈತರ ಮಕ್ಕಳೂ ಗಡಿ ಕಾಯುತ್ತಿದ್ದಾರೆ’
Published On - 3:46 pm, Sat, 30 January 21