‘ರಾಷ್ಟ್ರಧ್ವಜ ಗೌರವಿಸುವ ಬಗ್ಗೆ ಬಿಜೆಪಿ ಪಾಠ ಬೇಕಿಲ್ಲ; ಪ್ರತಿಭಟನೆಯಲ್ಲಿರುವ ರೈತರ ಮಕ್ಕಳೂ ಗಡಿ ಕಾಯುತ್ತಿದ್ದಾರೆ’
ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಮುಖಂಡರು ಇಂದು (ಜ.30) ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ‘ಸದ್ಭಾವನಾ ದಿನವನ್ನಾಗಿ’ ಆಚರಿಸಲಿದ್ದಾರೆ.
ದೆಹಲಿ: ರಾಷ್ಟ್ರಧ್ವಜವನ್ನು ಗೌರವಿಸುವ ಬಗ್ಗೆ ಬಿಜೆಪಿ ಪಾಠ ಮಾಡಬೇಕಿಲ್ಲ. ಪ್ರತಿಭಟನೆಯಲ್ಲಿ ತೊಡಗಿರುವ ಬಹಳಷ್ಟು ರೈತರ ಮಕ್ಕಳು ದೇಶ ರಕ್ಷಣೆಯಲ್ಲಿ ಗಡಿಕಾಯುತ್ತಿದ್ದಾರೆ ಎಂದು ರೈತ ಮುಖಂಡ ಯದುವೀರ್ ಸಿಂಗ್ ಬಿಜೆಪಿಗೆ ಕುಟುಕಿದ್ದಾರೆ. ಮತ್ತೋರ್ವ ರೈತ ಮುಖಂಡ ದರ್ಶನ್ ಪಾಲ್, ನಿರ್ಬಂಧಿಸಿರುವ ಅಂತರ್ಜಾಲ ಸೇವೆಯನ್ನು ಮರಳಿ ನೀಡಬೇಕು. ಇಲ್ಲವಾದರೆ ಆ ಬಗ್ಗೆ ಕೂಡ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಮುಖಂಡರು ಇಂದು (ಜ.30) ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಈ ದಿನವನ್ನು ಸದ್ಭಾವನಾ ದಿನವನ್ನಾಗಿ ಆಚರಿಸುತ್ತೇವೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉಪವಾಸ ಕೈಗೊಂಡಿದ್ದೇವೆ ಎಂದು ರೈತ ಮುಖಂಡರು ಹೇಳಿದ್ದಾರೆ.
ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯು ದೆಹಲಿ-ಉತ್ತರ ಪ್ರದೇಶದ ಗಡಿಭಾಗ ಗಾಜಿಬಾದ್ನಲ್ಲಿ ಕೂಡ ಮುಂದುವರಿದಿದೆ. ಗಣರಾಜ್ಯೋತ್ಸವ ದಿನದಂದು ದಹಲಿಯಲ್ಲಿ ನಡೆದ ಹಿಂಸಾಚಾರ, ಕೆಂಪುಕೋಟೆಯಲ್ಲಿ ನಡೆದ ಪ್ರತಿಭಟನೆಯ ಬಳಿಕ ರೈತರು ಗಾಜಿಬಾದ್ ಪ್ರದೇಶವನ್ನು ಪ್ರತಿಭಟನೆಯ ಹೊಸ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಹಾಗೂ ರೈತ ಹೋರಾಟಗಾರರಿಗೆ ಬೆಂಬಲ ಸೂಚಿಸಲು ರೈತರು ಉತ್ತರ ಪ್ರದೇಶ ಗಡಿಭಾಗದಲ್ಲಿ ಸೇರುತ್ತಿದ್ದಾರೆ. ಮೊನ್ನೆಯ ವೇಳೆ (ಜ.28) ಸುಮಾರು 3 ಸಾವಿರದಷ್ಟು ಇದ್ದ ರೈತ ಹೋರಾಟಗಾರರ ಸಂಖ್ಯೆ ನಿನ್ನೆಗೆ (ಜ.29) 25 ಸಾವಿರದಷ್ಟು ಆಗಿದೆ. ರಾಕೇಶ್ ಟಿಕಾಯತ್ ಭಾವನಾತ್ಮಕ ಮಾತುಗಳಿಂದ ಸ್ಪೂರ್ತಿಗೊಂಡ ರೈತರು ಪ್ರತಿಭಟನಾ ಸ್ಥಳದಲ್ಲಿ ಸೇರುತ್ತಿದ್ದಾರೆ.
ಇದನ್ನೂ ಓದಿ : Budget 2021 | ರೈತರ ಖಾತೆಗೆ ಹೆಚ್ಚು ಹಣ, ಕಿಸಾನ್ ಸಮ್ಮಾನ್ ಮೊತ್ತ ₹10,000ಕ್ಕೆ ಏರುವ ನಿರೀಕ್ಷೆ
ಬಾಗ್ಪತ್, ಶಾಮ್ಲಿ, ಮುಜಾಫರ್ನಗರ್, ಹರ್ಯಾಣದ ಗಡಿ ಭಾಗಗಳು ಹಾಗೂ ಪಶ್ಚಿಮ ಉತ್ತರ ಪ್ರದೇಶ ಭಾಗದಿಂದ, ಭಾರತೀಯ ಕಿಸಾನ್ ಯೂನಿಯನ್ ಕರೆಗೆ ಓಗೊಟ್ಟ ರೈತರು ಸಹಸ್ರ ಸಂಖ್ಯೆಯಲ್ಲಿ ಪ್ರತಿಭಟನಾ ಪ್ರದೇಶಕ್ಕೆ ಬರುತ್ತಿದ್ದಾರೆ. ದೆಹಲಿ-ಮೀರತ್ ಹೆದ್ದಾರಿ ಭಾಗದಲ್ಲಿ ಪ್ರತಿಭಟನಾಕಾರರು ನೆಲೆಯೂರಿದ್ದಾರೆ. ಗಾಜಿಬಾದ್ ಆಡಳಿತದ ಸೂಚನೆಗಳನ್ನು ಪಾಲಿಸಲು ಹೋರಾಟಗಾರರು ಒಪ್ಪುತ್ತಿಲ್ಲ. ಸ್ಥಳವನ್ನು ಖಾಲಿ ಮಾಡಬೇಕು ಎಂಬ ಸೂಚನೆಯನ್ನು ಪ್ರತಿಭಟನಾಕಾರರು ಕೇಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ದೆಹಲಿಯ ಇಸ್ರೇಲಿ ರಾಯಭಾರಿ ಕಛೇರಿಯಲ್ಲಿ ಬಾಂಬ್ ದಾಳಿ ನಡೆದ ಬಳಿಕ, ರೈತ ಪ್ರತಿಭಟನಾ ಸ್ಥಳದಲ್ಲಿ ಕೂಡ ಕಟ್ಟೆಚ್ಚರ ವಹಿಸಲಾಗಿದೆ. ರೈತ ಧರಣಿ ನಡೆಯುತ್ತಿರುವ ಪ್ರದೇಶಗಳನ್ನೂ ಭಯೋತ್ಪಾದಕರು ಗುರಿಯಾಗಿಸಿರುವ ಸಾಧ್ಯತೆ ಅಂದಾಜಿಸಲಾಗಿದೆ. ಹೀಗಾಗಿ, ಭದ್ರತೆ ಬಿಗಿಗೊಳಿಸಲಾಗಿದೆ.
ಮುಜಾಫರ್ನಗರದ ರೈತರನ್ನು ಕೇಂದ್ರದ ವಿರುದ್ಧದ ಪ್ರತಿಭಟನೆಯಲ್ಲಿ ಮುಂದುವರಿಯುವಂತೆ ಆಪ್ ಪಕ್ಷದ ನಾಯಕ ಸಂಜಯ್ ಸಿಂಗ್ ಹೇಳಿಕೆ ನೀಡಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ಬೆಂಬಲಿಸಿ ನಿನ್ನೆ (ಜ.29) ನಡೆದ ಮಹಾಪಂಚಾಯತ್ನಲ್ಲಿ ಸಹಸ್ರಾರು ರೈತರು ಭಾಗಿಯಾಗಿದ್ದಾರೆ. ದೆಹಲಿಯಲ್ಲಿ ನೀರು, ಆಹಾರ ಮತ್ಯಾವುದಕ್ಕೂ ಕೊರತೆ ಉಂಟಾಗುವುದಿಲ್ಲ. ನಾವು ರೈತರೊಂದಿಗೆ ಇದ್ದೇವೆ ಎಂದು ಕಿಸಾನ್ ಮಹಾಪಂಚಾಯತ್ ಉದ್ದೇಶಿಸಿ ಸಂಜಯ್ ಸಿಂಗ್ ತಿಳಿಸಿದ್ದಾರೆ. ರೈತರ ಹೋರಾಟಕ್ಕೆ ರಾಷ್ಟ್ರೀಯ ಲೋಕದಳದಿಂದಲೂ ಬೆಂಬಲ ಲಭಿಸಿದೆ.
ಮಹಾಪಂಚಾಯತ್ ಫರ್ಮಾನು! ಮನೆಯಿಂದ ಒಬ್ಬ ರೈತ ದೆಹಲಿ ಪ್ರತಿಭಟನೆಗೆ ಬರಲೇಬೇಕು, ಇಲ್ಲದಿದ್ರೆ 1500 ರೂ ದಂಡ!
Published On - 1:25 pm, Sat, 30 January 21