ಪ್ರಧಾನಿ ಕಾರ್ಯಾಲಯದ ಮುಖ್ಯ ಸಲಹೆಗಾರ ಪಿ.ಕೆ.ಸಿನ್ಹಾ ರಾಜೀನಾಮೆ

|

Updated on: Mar 16, 2021 | 6:00 PM

ಈಚಿನ ದಿನಗಳಲ್ಲಿ ಪ್ರಧಾನಿ ಕಾರ್ಯಾಲಯದಿಂದ ದೂರ ಸರಿಯುತ್ತಿರುವ ಎರಡನೇ ಉನ್ನತ ಅಧಿಕಾರಿ ಸಿನ್ಹಾ. ಈ ಹಿಂದೆ ಪ್ರಧಾನ ಮಂತ್ರಿಯ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಪ್ರಧಾನಿ ಕಾರ್ಯಾಲಯದ ಮುಖ್ಯ ಸಲಹೆಗಾರ ಪಿ.ಕೆ.ಸಿನ್ಹಾ ರಾಜೀನಾಮೆ
ಪಿ.ಕೆ.ಸಿನ್ಹಾ
Follow us on

ದೆಹಲಿ: ಮಾಜಿ ಕೇಂದ್ರ ಸಂಪುಟ ಕಾರ್ಯದರ್ಶಿ ಮತ್ತು ಪ್ರಧಾನಿ ಕಾರ್ಯಾಲಯದ (Prime Minister’s Office – PMO) ಮುಖ್ಯಸಲಹೆಗಾರ ಪಿ.ಕೆ.ಸಿನ್ಹಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ‘ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಸಿನ್ಹಾ ಹೇಳಿದ್ದಾರೆ. ಕೇಂದ್ರ ಸರ್ಕಾರದ ಉನ್ನತ ಮೂಲಗಳು ಈ ಬೆಳವಣಿಗೆಯನ್ನು ದೃಢಪಡಿಸಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ರಾಜೀನಾಮೆಗೆ ನಿಜವಾದ ಕಾರಣ ಏನಿರಬಹುದು ಎಂಬ ಬಗ್ಗೆ ಹಲವು ವಿಶ್ಲೇಷಣೆಗಳು ಚಾಲ್ತಿಗೆ ಬಂದಿವೆ.

ಪಿ.ಕೆ.ಸಿನ್ಹಾ ಅವರನ್ನು 2019ರ ಸಂಸದೀಯ ಚುನಾವಣೆಗಳ ನಂತರ ಪ್ರಧಾನಿ ಕಾರ್ಯಾಲಯಕ್ಕೆ ನೇಮಿಸಲಾಗಿತ್ತು. ಈ ಮೊದಲು ಅವರು ಸಂಪುಟ ಕಾರ್ಯದರ್ಶಿಯಾಗಿ ಮತ್ತು ಅದಕ್ಕೂ ಮೊದಲು ಇಂಧನ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 1978ನೇ ಬ್ಯಾಚ್​ನ ಉತ್ತರ ಪ್ರದೇಶ ಕೇಡರ್​ನ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದ ಸಿನ್ಹಾ ಈ ಮೊದಲು ಹಲವು ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದರು.

ಈಚಿನ ದಿನಗಳಲ್ಲಿ ಪ್ರಧಾನಿ ಕಾರ್ಯಾಲಯದಿಂದ ದೂರ ಸರಿಯುತ್ತಿರುವ ಎರಡನೇ ಉನ್ನತ ಅಧಿಕಾರಿ ಸಿನ್ಹಾ. ಈ ಹಿಂದೆ ಪ್ರಧಾನ ಮಂತ್ರಿಯ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಸಿನ್ಹಾ ರಾಜೀನಾಮೆಗೆ ಅನಾರೋಗ್ಯವೇ ಮುಖ್ಯ ಕಾರಣ ಎಂದು ಪ್ರಧಾನಿ ಕಾರ್ಯಾಲಯದ ಇತರ ಸಿಬ್ಬಂದಿಯ ಹೇಳಿಕೆಗಳನ್ನು ಕೆಲ ಮಾಧ್ಯಮಗಳು ವರದಿ ಮಾಡಿವೆ. ‘ಅವರ ಆರೋಗ್ಯ ಸರಿಯಿಲ್ಲ. ಇಂಥ ಪರಿಸ್ಥಿತಿಯಲ್ಲಿ ಹೆಚ್ಚು ಒತ್ತಡದ ಕೆಲಸದಿಂದ ದೂರು ಇರುವುದು ಒಳಿತು ಎಂದು ಸಿನ್ಹಾ ನಿರ್ಧರಿಸಿದಂತಿದೆ. ಸಿನ್ಹಾ ತಮ್ಮ ಅಧಿಕಾರಾವಧಿಯುದ್ದಕ್ಕೂ ಅತ್ಯುತ್ತಮ ಕಾರ್ಯಕ್ಷಮತೆಯ ಅಧಿಕಾರಿ ಎನಿಸಿಕೊಂಡಿದ್ದರು’ ಎಂದು ಮೂಲಗಳನ್ನು ಉಲ್ಲೇಖಿಸಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

ಪ್ರಧಾನಿ ಕಾರ್ಯಾಲಯದಿಂದ ಈ ವರ್ಷ ಹಲವು ಉನ್ನತ ಅಧಿಕಾರಿಗಳು ದೂರ ಸರಿದಿದ್ದಾರೆ. ಕೆಲವರು ಇತರ ಇಲಾಖೆಗಳಿಗೆ ಹೋಗಿದ್ದರೆ, ಕೆಲವರು ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಕಾರ್ಯಾಲಯದಲ್ಲಿದ್ದ ತರುಣ್ ಬಾಜಪೇಯಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ನಿಯುಕ್ತರಾದರು. ಪ್ರಧಾನಿಯ ಅತ್ಯಾಪ್ತರೆನಿಸಿದ್ದ ಎ.ಕೆ.ಶರ್ಮಾ ನಿವೃತ್ತರಾಗುವ ಮೊದಲು ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಇಲಾಖೆಗಳ ಜವಾಬ್ದಾರಿ ಹೊತ್ತಿದ್ದರು. ಪ್ರಧಾನಿ ಸಲಹೆಗಾರರಾಗಿದ್ದ ಹಿರಿಯ ಅಧಿಕಾರಿಗಳಾದ ಭಾಸ್ಕರ್ ಖುಲ್ಬೆ ಮತ್ತು ಅಮರ್​ಜೀತ್ ಸಿನ್ಹಾ ನಿವೃತ್ತರಾಗಿದ್ದಾರೆ.

ಪ್ರಧಾನಿ ಕಾರ್ಯಾಲಯದಿಂದ ಹಳಬರು ಹಲವು ಕಾರಣಗಳಿಂದ ಹೊರನಡೆಯುತ್ತಿದ್ದಾರೆ. ಶೀಘ್ರದಲ್ಲಿಯೇ ಹೊಸ ಅಧಿಕಾರಿಗಳ ನಿಯೋಜನೆ ಆರಂಭವಾಗಲಿದೆ. ಕೇಂದ್ರದ ಇತರೆಲ್ಲಾ ಇಲಾಖೆಗಳು ಮತ್ತು ದೇಶದ ರಾಜ್ಯಗಳ ಜೊತೆಗೆ ಪ್ರಧಾನಿ ಕಾರ್ಯಾಲಯ ನೇರ ಸಂಪರ್ಕ ಇರಿಸಿಕೊಂಡಿರುವ ಪರಿಸ್ಥಿತಿಯಲ್ಲಿ ಹೊಸ ಅಧಿಕಾರಿಗಳ ನಿಯೋಜನೆಯ ಬಗ್ಗೆ ಕುತೂಹಲ ಗರಿಗೆದರಿದೆ.

ಇದನ್ನೂ ಓದಿ: ‘ನಮೋ’ ಪೌರತ್ವಕ್ಕೆ ನೋಂದಣಿ ಅಗತ್ಯವಿಲ್ಲ-ಪ್ರಧಾನಿ ಕಾರ್ಯಾಲಯ