ಗುಜರಾತ್ ಹಿಂಸಾಚಾರ: ನರೇಂದ್ರ ಮೋದಿಗೆ ಕ್ಲೀನ್ ಚಿಟ್ ವಿರೋಧಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ, ಏ.13ಕ್ಕೆ ವಿಚಾರಣೆ

ಜಾಫ್ರಿ ಪರವಹಿಸಿರುವ ಹಿರಿಯ ವಕೀಲ ಕಪಿಲ್ ಸಿಬಲ್, ಸದ್ಯ ಹಲವು ವಕೀಲರು ಮರಾಠ ಮೀಸಲಾತಿ ಪ್ರಕರಣದಲ್ಲಿ ತೊಡಗಿಸಿಕೊಂಡಿರುವ ಕಾರಣ ಈ ಪ್ರಕರಣದ ವಿಚಾರಣೆಯನ್ನು ಏಪ್ರಿಲ್​ನಲ್ಲಿ ನಡೆಸಬೇಕು ಎಂದು ಎ.ಎಮ್. ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠದ ಬಳಿ ಮನವಿ ಮಾಡಿಕೊಂಡಿದ್ದರು.

ಗುಜರಾತ್ ಹಿಂಸಾಚಾರ: ನರೇಂದ್ರ ಮೋದಿಗೆ ಕ್ಲೀನ್ ಚಿಟ್ ವಿರೋಧಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ, ಏ.13ಕ್ಕೆ ವಿಚಾರಣೆ
ಸುಪ್ರೀಂ ಕೋರ್ಟ್
Follow us
TV9 Web
| Updated By: ganapathi bhat

Updated on:Apr 06, 2022 | 7:06 PM

ದೆಹಲಿ: ಗುಜರಾತ್​ನಲ್ಲಿ 2002ರಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ವಿಶೇಷ ತನಿಖಾ ತಂಡ (SIT) ದೋಷಮುಕ್ತಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಏಪ್ರಿಲ್ 13ರಂದು ನಡೆಯಲಿದೆ. ಗಲಭೆಯಲ್ಲಿ ಹತ್ಯೆಗೀಡಾದ ಲೋಕಸಭಾ ಸದಸ್ಯ ಇಶಾನ್ ಜಾಫ್ರಿ ಪತ್ನಿ ಝಾಕಿಯಾ ಜಾಫ್ರಿ ಕೋರ್ಟ್​ನಲ್ಲಿ ಅರ್ಜಿದಾರರಾಗಿದ್ದಾರೆ. ಈ ವಿಚಾರಣೆಯನ್ನು ಮುಂದೂಡುವ ಕುರಿತ ಮನವಿಯನ್ನು ಪರಿಗಣಿಸುವುದಿಲ್ಲ ಎಂದೂ ಸುಪ್ರೀಂಕೋರ್ಟ್ ಹೇಳಿದೆ.

ಜಾಫ್ರಿ ಪರ ವಾದಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್, ಸದ್ಯ ಹಲವು ವಕೀಲರು ಮರಾಠ ಮೀಸಲಾತಿ ಪ್ರಕರಣದಲ್ಲಿ ತೊಡಗಿಸಿಕೊಂಡಿರುವ ಕಾರಣ ಈ ಪ್ರಕರಣದ ವಿಚಾರಣೆಯನ್ನು ಏಪ್ರಿಲ್​ನಲ್ಲಿ ನಡೆಸಬೇಕು ಎಂದು ಎ.ಎಂ. ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠದ ಬಳಿ ಮನವಿ ಮಾಡಿಕೊಂಡಿದ್ದರು.

ಆದರೆ, ಗುಜರಾತ್ ಸರ್ಕಾರದ ಪರ ವಾದಿಸಲಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿಚಾರಣೆ ಮುಂದೂಡುವ ಕುರಿತ ಅರ್ಜಿಗೆ ವಿರೋಧ ವ್ಯಕ್ತಪಡಿಸಿದ್ದರು. ಮುಂದಿನ ವಾರದಲ್ಲೇ ವಿಚಾರಣೆ ಕೈಗೊಳ್ಳುವಂತೆ ಕೇಳಿಕೊಂಡಿದ್ದರು. ಎಸ್​ಐಟಿ ಪರ ವಕೀಲ, ಮುಕುಲ್ ರೊಹಟಗಿ ಕೂಡ ವಿಚಾರಣೆಯನ್ನು ಮುಂದೂಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಅರ್ಜಿಗೆ ಸಂಬಂಧಿಸಿದ ವಿಚಾರಣೆಯನ್ನು ಏಪ್ರಿಲ್ 13ಕ್ಕೆ ನಡೆಸುತ್ತೇವೆ. ವಿಚಾರಣೆ ಮುಂದೂಡುವ ಯಾವುದೇ ಬೇಡಿಕೆಯನ್ನು ಪರಿಗಣಿಸುವುದಿಲ್ಲ ಎಂದು ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ಕೃಷ್ಣ ಮುರಾರಿ ಕೂಡ ಸದಸ್ಯರಾಗಿರುವ ನ್ಯಾಯಪೀಠ ವಿವರಿಸಿದೆ.

2002 ಫೆಬ್ರವರಿ 28ರಂದು ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದ ಹಿಂಸಾಚಾರದಲ್ಲಿ 68 ಮಂದಿ ಮೃತಪಟ್ಟಿದ್ದರು. 2012 ಫೆಬ್ರವರಿ 8ರಂದು ಎಸ್​ಐಟಿಯು ಈ ಪ್ರಕರಣದಡಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು 63 ಮಂದಿಗೆ ಕ್ಲೀನ್ ಚಿಟ್ ನೀಡಿತ್ತು.

ಇದನ್ನೂ ಓದಿ: ಕೊರೊನಾ ಎರಡನೇ ಅಲೆ ಕುರಿತು ಮೋದಿ ಸಭೆ; ಮುಖ್ಯಮಂತ್ರಿಗಳಿಗೆ ಕಠಿಣ ನಿರ್ಧಾರ ಕೈಗೊಳ್ಳಲು ಸಲಹೆ ಸಾಧ್ಯತೆ?

ಇದನ್ನೂ ಓದಿ: ಭಾರತ ರಾಜಧರ್ಮ ಅನುಸರಿಸುತ್ತಿದೆ: ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದ ಕ್ರಿಕೆಟಿಗ ಸರ್ ವಿವಿಯನ್ ರಿಚರ್ಡ್ಸ್

Published On - 5:32 pm, Tue, 16 March 21