ಕೊಚ್ಚಿ: ನಾಲ್ಕೂವರೆ ತಿಂಗಳ ವಿರಾಮದ ನಂತರ ಇಂಧನ ಬೆಲೆ ಹೆಚ್ಚಳವಾಗಿದ್ದು, ಕೇರಳದ (Kerala) ಖಾಸಗಿ ಬಸ್ ನಿರ್ವಾಹಕರು ಟಿಕೆಟ್ ದರ ಹೆಚ್ಚಳಕ್ಕೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದಾರೆ .ಇಂದು ಮಾರ್ಚ್ 24, ಗುರುವಾರದಿಂದ ರಾಜ್ಯದಲ್ಲಿ ಖಾಸಗಿ ಬಸ್ಗಳು (Private Bus) ಅನಿರ್ದಿಷ್ಟಾವಧಿ ರಸ್ತೆಗಿಳಿಯುವುದಿಲ್ಲ ಎಂದು ಹೇಳಿವೆ. ಕೇರಳ ರಾಜ್ಯ ಖಾಸಗಿ ಬಸ್ ಆಪರೇಟರ್ಸ್ ಫೆಡರೇಶನ್ ಅಧ್ಯಕ್ಷ ಸತ್ಯನ್, ಉದ್ದೇಶಿತ ಮುಷ್ಕರದ ಕುರಿತು ಎರಡು ವಾರಗಳ ಹಿಂದೆ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ ಎಂದು ಪಿಟಿಐಗೆ ತಿಳಿಸಿದರು. ಆದರೆ, ಈ ಬಗ್ಗೆ ಇನ್ನೂ ಚರ್ಚೆಗೆ ಕರೆದಿಲ್ಲ ಎಂದರು. ಪರೀಕ್ಷೆ ನಡೆಯುತ್ತಿರುವುದರಿಂದ ಖಾಸಗಿ ಬಸ್‌ಗಳಲ್ಲಿ ನಿತ್ಯ ಸಂಚರಿಸುವ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಬಸ್ ಚಾಲಕರು ಮುಷ್ಕರ ನಡೆಸದಂತೆ ರಾಜ್ಯ ಸಾರಿಗೆ ಸಚಿವ ಆಂಟನಿ ರಾಜು (Antony Raju)ಕೇಳಿಕೊಂಡಿದ್ದಾರೆ. ಆದರೆ, ಖಾಸಗಿ ಬಸ್ ನಿರ್ವಾಹಕರ ಸಂಕಷ್ಟದ ಬಗ್ಗೆ ನವೆಂಬರ್‌ನಲ್ಲಿ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸತ್ಯನ್ ಸಚಿವರನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಮತ್ತು ಅದರ ಜವಾಬ್ದಾರಿ ಬಸ್ ಮಾಲೀಕರ ಮೇಲಲ್ಲ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಸಚಿವರು, ಖಾಸಗಿ ಬಸ್ ನಿರ್ವಾಹಕರು ತಮ್ಮ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಬಹುದು ಎಂದು ಭಾವಿಸಬಾರದು. ಖಾಸಗಿ ಬಸ್ ನಿರ್ವಾಹಕರು ಮುಷ್ಕರ ನಡೆಸಿದರೆ, ಸಾರ್ವಜನಿಕರ ಪ್ರಯಾಣ ಅಗತ್ಯಗಳನ್ನು ಪೂರೈಸಲು ಕೆಎಸ್‌ಆರ್‌ಟಿಸಿ ಹೆಚ್ಚಿನ ಸೇವೆಗಳನ್ನು ನಡೆಸಲಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕರ ಪ್ರಯಾಣ ದರವನ್ನು ಹೆಚ್ಚಿಸಬೇಕು ಮತ್ತು ವಿದ್ಯಾರ್ಥಿಗಳ ರಿಯಾಯಿತಿ ದರವನ್ನು ಹೆಚ್ಚಿಸಬೇಕು ಎಂದು ಮಾಲೀಕರು ಒತ್ತಾಯಿಸಿದ್ದಾರೆ. ಇದಲ್ಲದೆ, ನಿರ್ವಾಹಕರು ಪ್ರತಿ ಕಿಲೋಮೀಟರ್ ಶುಲ್ಕವನ್ನು ಪ್ರಸ್ತುತ 90 ಪೈಸೆಯಿಂದ 1.10 ರೂ.ಗೆ ಹೆಚ್ಚಿಸಲು ಮತ್ತು ಕೊವಿಡ್ ಸಾಂಕ್ರಾಮಿಕ ಅವಧಿಗೆ ರಸ್ತೆ ತೆರಿಗೆಯನ್ನು ಮನ್ನಾ ಮಾಡಲು ಕೋರಿದ್ದಾರೆ.
ನಾಲ್ಕೂವರೆ ತಿಂಗಳ ಚುನಾವಣೆ ಸಂಬಂಧಿತ ವಿರಾಮದ ನಂತರ ಮಾರ್ಚ್ 23 ಬುಧವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತ ಎರಡನೇ ದಿನವೂ ಲೀಟರ್‌ಗೆ ತಲಾ 80 ಪೈಸೆಗಳಷ್ಟು ಏರಿಕೆಯಾಗಿದೆ.
ದರ ಪರಿಷ್ಕರಣೆಯಲ್ಲಿ ದಾಖಲೆಯ 137 ದಿನಗಳ ವಿರಾಮವು ಮಾರ್ಚ್ 22 ರಂದು ದರಗಳಲ್ಲಿ ಲೀಟರ್‌ಗೆ 80 ಪೈಸೆ ಹೆಚ್ಚಳದೊಂದಿಗೆ ಕೊನೆಗೊಂಡಿತು. ಉತ್ತರ ಪ್ರದೇಶ ಮತ್ತು ಪಂಜಾಬ್‌ನಂತಹ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ನವೆಂಬರ್ 4 ರಿಂದ ಬೆಲೆ ಏರಿಕೆಯಾಗಿರಲಿಲ್ಲ. ಈ ಅವಧಿಯಲ್ಲಿ ಕಚ್ಚಾ ವಸ್ತುಗಳ (ಕಚ್ಚಾ ತೈಲ) ಬೆಲೆ ಪ್ರತಿ ಬ್ಯಾರೆಲ್‌ಗೆ $ 30 ರಷ್ಟು ಏರಿತ್ತು.