ರೈತರಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕುತ್ತಿದ್ದ ವಿವಾದಿತ ಟ್ರೈನಿ ಐಎಸ್​ಎಸ್​ ಅಧಿಕಾರಿ ಪೂಜಾ ಖೇಡ್ಕರ್​ ತಾಯಿಯ ಬಂಧನ

|

Updated on: Jul 18, 2024 | 10:26 AM

ರೈತರಿಗೆ ಪಿಸ್ತೂಲ್​ ತೋರಿಸಿ ಬೆದರಿಕೆ ಹಾಕುತ್ತಿದ್ದ ಪ್ರೊಬೆಷನರಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್​ ತಾಯಿ ಮನೋರಮಾರನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಪೂಜಾ ಖೇಡ್ಕರ್​ ಹಲವು ವಿಚಾರಗಳಲ್ಲಿ ವಿವಾದಸೃಷ್ಟಿಸಿಕೊಂಡು ಸುದ್ದಿಯಲ್ಲಿದ್ದಾರೆ.

ರೈತರಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕುತ್ತಿದ್ದ ವಿವಾದಿತ ಟ್ರೈನಿ ಐಎಸ್​ಎಸ್​ ಅಧಿಕಾರಿ ಪೂಜಾ ಖೇಡ್ಕರ್​ ತಾಯಿಯ ಬಂಧನ
ಮನೋರಮಾ ಖೇಡ್ಕರ್
Follow us on

ರೈತರಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕುತ್ತಿದ್ದ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾಯಿಯನ್ನು ಗುರುವಾರ ಬಂಧಿಸಲಾಗಿದೆ. ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ಅವರು ಪುಣೆಯಲ್ಲಿ ರೈತರಿಗೆ ಬೆದರಿಕೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು.

ಭಾರತೀಯ ನ್ಯಾಯ ಸಂಹಿತಾ ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ರೈತರೊಬ್ಬರ ದೂರಿನ ಆಧಾರದ ಮೇಲೆ ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮನೋರಮಾ ಖೇಡ್ಕರ್ ಅವರನ್ನು ರಾಯಗಢದ ಹೋಟೆಲ್‌ನಲ್ಲಿ ಬಂಧಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಮೂರು ಪೊಲೀಸ್ ತಂಡಗಳು ಆಕೆಯೊಂದಿಗೆ ಪುಣೆಗೆ ತೆರಳುತ್ತಿವೆ.

ಮಹಾರಾಷ್ಟ್ರದಾದ್ಯಂತ ಆಸ್ತಿ ಹೊಂದಿರುವ ಖೇಡ್ಕರ್ ಕುಟುಂಬ ಪುಣೆಯ ಮುಲ್ಶಿ ತಹಸಿಲ್‌ನಲ್ಲಿ 25 ಎಕರೆ ಭೂಮಿಯನ್ನು ಖರೀದಿಸಿತ್ತು. ಅಕ್ಕಪಕ್ಕದ ರೈತರ ಜಮೀನನ್ನು ಕೂಡ ಒತ್ತುವರಿ ಮಾಡಿಕೊಳ್ಳಲಾಗಿತ್ತು. ಇದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದಾಗ ಖೇಡ್ಕರ್ ಅವರ ತಾಯಿ ಮನೋರಮಾ ಬೌನ್ಸರ್ ಸಮೇತ ಸ್ಥಳಕ್ಕೆ ಆಗಮಿಸಿ ಪಿಸ್ತೂಲ್ ತೋರಿಸಿ ರೈತರಿಗೆ ಬೆದರಿಕೆ ಹಾಕಿದ್ದಾರೆ. ವಿಡಿಯೋದಲ್ಲಿ ಮನೋರಮಾ ಜಮೀನು ತನ್ನ ಹೆಸರಿನಲ್ಲಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಟ್ರೈನಿ ಐಎಎಸ್ ಅಧಿಕಾರಿ​ ಪೂಜಾ ಖೇಡ್ಕರ್​ ತಾಯಿ ಪಿಸ್ತೂಲ್​ ಹಿಡಿದು ರೈತರ ಹೆದರಿಸುತ್ತಿರುವ ವಿಡಿಯೋ ವೈರಲ್

ನೀನು ನಿಜವಾದ ಮಾಲೀಕನೇ ಆಗಿರಬಹುದು ಆದರೆ ಈ ಜಾಗವು ನನ್ನ ಹೆಸರಿನಲ್ಲಿದೆ, ಅದು ಕೋರ್ಟ್​ನಲ್ಲಿದೆ ಈ ಜಾಗವನ್ನು ನೀನು ಹೇಗೆ ತೆಗೆದುಕೊಳ್ತೀಯಾ ನಾನು ನೋಡ್ತೇನೆ ಎಂದು ಧಮಕಿ ಹಾಕಿದ್ದಾರೆ. ಆದರೆ ಮೇಡಂ ಕೋರ್ಟ್​ ಇನ್ನೂ ತೀರ್ಪು ನೀಡಿಲ್ಲ, ಈಗಲೂ ಈ ಜಾಗದ ನಿಜವಾದ ಮಾಲೀಕ ನಾನೇ ಎಂದು ವ್ಯಕ್ತಿ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು.

ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ತಮ್ಮ ಖಾಸಗಿ ಆಡಿ ಕಾರಿಗೆ ಸೈರನ್ ಹಾಗೂ ಸರ್ಕಾರಿ ಫಲಕ ಅಳವಡಿಸಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನಲ್ಲೇ ಅವರನ್ನು ಅಧಿಕಾರ ದುರುಪಯೋಗದ ಆರೋಪದ ಮೇಲೆ ಪುಣೆಯಿಂದ ವಾಶಿಮ್‌ಗೆ ವರ್ಗಾವಣೆ ಮಾಡಲಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ