ವಿವಾದಿತ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಾಯಿ ರೈತರೊಬ್ಬರಿಗೆ ಪಿಸ್ತೂಲ್ ಹಿಡಿದು ಹೆದರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಅದು ಹಳೆಯ ವಿಡಿಯೋ ಎಂದು ಹೇಳಲಾಗುತ್ತಿದ್ದು, ಇದೀಗ ಪೂಜಾ ಖೇಡ್ಕರ್ ತುಂಬಾ ಚರ್ಚೆಯಲ್ಲಿರುವ ಸಮಯದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ವೀಡಿಯೊವನ್ನು 2023 ರಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರದಾದ್ಯಂತ ಆಸ್ತಿ ಹೊಂದಿರುವ ಖೇಡ್ಕರ್ ಕುಟುಂಬ ಪುಣೆಯ ಮುಲ್ಶಿ ತಹಸಿಲ್‌ನಲ್ಲಿ 25 ಎಕರೆ ಭೂಮಿಯನ್ನು ಖರೀದಿಸಿತ್ತು. ಅಕ್ಕಪಕ್ಕದ ರೈತರ ಜಮೀನನ್ನು ಕೂಡ ಒತ್ತುವರಿ ಮಾಡಿಕೊಳ್ಳಲಾಗಿತ್ತು.
ಇದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದಾಗ ಖೇಡ್ಕರ್ ಅವರ ತಾಯಿ ಮನೋರಮಾ ಬೌನ್ಸರ್ ಸಮೇತ ಸ್ಥಳಕ್ಕೆ ಆಗಮಿಸಿ ಪಿಸ್ತೂಲ್ ತೋರಿಸಿ ರೈತರಿಗೆ ಬೆದರಿಕೆ ಹಾಕಿದ್ದಾರೆ. ವಿಡಿಯೋದಲ್ಲಿ ಮನೋರಮಾ ಜಮೀನು ತನ್ನ ಹೆಸರಿನಲ್ಲಿದೆ ಎಂದು ಹೇಳಿದ್ದಾರೆ.
ನೀನು ನಿಜವಾದ ಮಾಲೀಕನೇ ಆಗಿರಬಹುದು ಆದರೆ ಈ ಜಾಗವು ನನ್ನ ಹೆಸರಿನಲ್ಲಿದೆ, ಅದು ಕೋರ್ಟ್ನಲ್ಲಿದೆ ಈ ಜಾಗವನ್ನು ನೀನು ಹೇಗೆ ತೆಗೆದುಕೊಳ್ತೀಯಾ ನಾನು ನೋಡ್ತೇನೆ ಎಂದು ಧಮಕಿ ಹಾಕಿದ್ದಾರೆ.
ಆದರೆ ಮೇಡಂ ಕೋರ್ಟ್ ಇನ್ನೂ ತೀರ್ಪು ನೀಡಿಲ್ಲ, ಈಗಲೂ ಈ ಜಾಗದ ನಿಜವಾದ ಮಾಲೀಕ ನಾನೇ ಎಂದು ವ್ಯಕ್ತಿ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮತ್ತಷ್ಟು ಓದಿ: ಕಾರು, ಮನೆ, ಕಚೇರಿ ಬೇಕು ಎಂದು ಬೇಡಿಕೆ ಇಟ್ಟಿದ್ದ ವಿವಾದಿತ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಯಾರು?
ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ತಮ್ಮ ಖಾಸಗಿ ಆಡಿ ಕಾರಿಗೆ ಸೈರನ್ ಹಾಗೂ ಸರ್ಕಾರಿ ಫಲಕ ಅಳವಡಿಸಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನಲ್ಲೇ ಅವರನ್ನು ಅಧಿಕಾರ ದುರುಪಯೋಗದ ಆರೋಪದ ಮೇಲೆ ಪುಣೆಯಿಂದ ವಾಶಿಮ್‌ಗೆ ವರ್ಗಾವಣೆ ಮಾಡಲಾಗಿದೆ.
32 ವರ್ಷದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಅವರು ಈ ಹಿಂದೆ ಪ್ರತ್ಯೇಕ ಕ್ಯಾಬಿನ್, ವಾಹನ ಮತ್ತು ಸಿಬ್ಬಂದಿ ನೀಡಬೇಕು ಎಂಬ ಬೇಡಿಕೆಯಿಂದ ವಿವಾದ ಹುಟ್ಟುಹಾಕಿದ್ದರು. ಇದೀಗ ತರಬೇತಿ ಪೂರ್ಣಗೊಳ್ಳುವ ಮೊದಲು ಪುಣೆಯಿಂದ ವಿದರ್ಭ ಪ್ರದೇಶದ ವಾಶಿಮ್ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ. ವಾಶಿಮ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯಕ ಕಲೆಕ್ಟರ್ ಆಗಿ ಪೂಜಾ ಅಧಿಕಾರ ವಹಿಸಿಕೊಂಡರು.
ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಪೂಜಾ ಖೇಡ್ಕರ್ ಅವರು ನಕಲಿ ಅಂಗವೈಕಲ್ಯ ಮತ್ತು ಇತರೆ ಹಿಂದುಳಿದ ವರ್ಗದ(ಒಬಿಸಿ) ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ ಎಂಬ ಆರೋಪವೂ ಇದೆ.
ಪೂಜಾ ಖೇಡ್ಕರ್ ಅವರು ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿದ್ದ ಕಾರಣ ಅವರಿಗೆ ಸರ್ಕಾರದಿಂದ ವಾಹನ ಸೌಲಭ್ಯ ನೀಡಿಲ್ಲ. ಆದರೆ ಅವರು ತಮ್ಮ ಖಾಸಗಿ ಆಡಿ ಕಾರಿಗೆ ಕೆಂಪು- ನೀಲಿ ಬೀಕನ್ ಲೈಟ್ ಮತ್ತು ವಿಐಪಿ ನಂಬರ್ ಪ್ಲೇಟ್ ಅಳವಡಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಪುಣೆ ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ