ಕಾರು, ಮನೆ, ಕಚೇರಿ ಬೇಕು ಎಂದು ಬೇಡಿಕೆ ಇಟ್ಟಿದ್ದ ವಿವಾದಿತ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಯಾರು?
ಅಧಿಕಾರ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಟ್ರೈನಿ ಐಎಎಸ್ ಅಧಿಕಾರಿ ಡಾ.ಪೂಜಾ ಖೇಡ್ಕರ್ ಅವರನ್ನು ಪುಣೆಯಿಂದ ವಾಶಿಮ್‌ಗೆ ವರ್ಗಾವಣೆ ಮಾಡಲಾಗಿದೆ. ಖೇಡ್ಕರ್ ಅವರು ಜಿಲ್ಲಾಧಿಕಾರಿ ಕಚೇರಿಯಿಂದ ವಿಶೇಷ ಸವಲತ್ತುಗಳನ್ನು ಕೋರಿ ಪತ್ರ ಬರೆದು ವಿವಾದಕ್ಕೆ ಸಿಲುಕಿದ್ದರು.
ಈ ಟ್ರೈನಿ ಐಎಎಸ್ ಅಧಿಕಾರಿಯ ಬೇಡಿಕೆಗಳನ್ನು ಕೇಳಿ ಸರ್ಕಾರವೇ ಸುಸ್ತಾಗಿದೆ. ಐಎಎಸ್ ಅಧಿಕಾರಿ ಕೇವಲ ಸರ್ಕಾರಿ ನೌಕರನಷ್ಟೇ ಅಲ್ಲ ಸಾರ್ವಜನಿಕರಿಗೆ ಜವಾಬ್ದಾರನಾಗಿರುತ್ತಾನೆ ಎಂಬುದನ್ನು ಮರೆತು ಈ ಟ್ರೈನಿ ಅಧಿಕಾರಿ ಹಲವು ಬೇಡಿಕೆಗಳನ್ನಿಟ್ಟು ವಿವಾದಕ್ಕೆ ಸಿಲುಕಿದ್ದಾರೆ. ಪೂಜಾ ಖೇಡ್ಕರ್ ಎಂಬುವವರು 2022ರ ಯುಪಿಎಸ್ಸಿ ಫಲಿತಾಂಶದಲ್ಲಿ 841ನೇ ಆಲ್ ಇಂಡಿಯಾ ರ್ಯಾಂಕ್ ಪಡೆದುಕೊಂಡಿದ್ದಾರೆ.
ಅವರು ಪುಣೆಯಲ್ಲಿ ಟ್ರೈನಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಅಧಿಕಾರ ದುರ್ಬಳಕೆ ಅತಿಯಾಗಿದೆ. ತರಬೇತಿ ಅವಧಿಯಲ್ಲಿಯೇ ವಿಶೇಷ ಸವಲತ್ತುಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬರೆದಿದ್ದಾರೆ.
ವಿಐಪಿ ನಂಬರ್ ಪ್ಲೇಟ್ ಸಹ ಅಳವಡಿಸಿದ್ದಾರೆ ಅದರ ಮೇಲೆ ಮಹಾರಾಷ್ಟ್ರ ಸರ್ಕಾರ ಎಂದು ಬೋರ್ಡ್ ಹಾಕಿಸಿದ್ದಾರೆ.
ಇಷ್ಟೇ ಅಲ್ಲ, ಸರ್ಕಾರಿ ಕಾರು, ವಸತಿ, ಸಿಬ್ಬಂದಿ ಹಾಗೂ ಕಾನ್ಸ್ಟೆಬಲ್ ಸೇರಿದಂತೆ ಅಧಿಕೃತ ಚೇಂಬರ್ ಒದಗಿಸಿಬೇಕೆಂದು ಕೇಳಿದ್ದಾರೆ. ಪುಣೆಯ ಹೆಚ್ಚುವರಿ ಜಿಲ್ಲಾಧಿಕಾರಿ ಅಜಯ್ ಮೋರೆ ಇಲ್ಲದ ಸಮಯದಲ್ಲಿ ಅವರ ಚೇಂಬರ್ ಒತ್ತುವರಿ ಮಾಡಿಕೊಂಡು ತನ್ನ ಹೆಸರಿನ ಬೋರ್ಡ್ ಹಾಕಿಕೊಂಡಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿಗಳ ಪೂರ್ವ ಅನುಮತಿ ಇಲ್ಲದೆ ಸೋಫಾ, ಕುರ್ಚಿ,ಟೇಬಲ್ ಸೇರಿದಂತೆ ಎಲ್ಲಾ ವಸ್ತುಗಳನ್ನು ತೆಗೆದಿದ್ದಾರೆ.
ಮತ್ತಷ್ಟು ಓದಿ: ನಿವೃತ್ತ ಐಎಎಸ್ ಅಧಿಕಾರಿ ಪತ್ನಿ ಶವವಾಗಿ ಪತ್ತೆ, ಮನೆಯಲ್ಲಿದ್ದ ಚಿನ್ನಾಭರಣ ಲೂಟಿ
ಪೂಜಾ ಅವರ ತಂದೆ ನಿವೃತ್ತ ಆಡಳಿತಾಧಿಕಾರಿಯಾಗಿದ್ದು ಅವರೂ ಕೂಡ ಮಗಳ ಬೇಡಿಕೆ ಈಡೇರಿಸುವಂತೆ ಒತ್ತಡ ಹೇರಿದ್ದರು. ಕೊನೆಗೆ ಆಕೆಯ ಬೇಡಿಕೆಯನ್ನು ಸ್ವೀಕರಿಸಲಾಗಿದೆ ಎಂದು ಕಲೆಕ್ಟರ್ ಸುಹಾಸ್ ದಿವಾಸೆ ಹೇಳಿದ್ದಾರೆ. ಅವರ ತರಬೇತಿ ಪೂರ್ಣಗೊಳ್ಳುವ ಮೊದಲೇ ವರ್ಗಾವಣೆ ಮಾಡಲಾಗಿದೆ. ವಾಶಿಮ್ನ ಸೂಪರ್‌ನ್ಯೂಮರರಿ ಅಸಿಸ್ಟೆಂಟ್ ಕಲೆಕ್ಟರ್ ಹುದ್ದೆಗೆ ವರ್ಗಾಯಿಸಲಾಗಿದೆ. ನಿಯಮಗಳ ಪ್ರಕಾರ, ತರಬೇತಿ ಪಡೆಯುವವರಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗುವುದಿಲ್ಲ ಮತ್ತು ಮೊದಲು ಗೆಜೆಟೆಡ್ ಅಧಿಕಾರಿಯಾಗಿ ನೇಮಕಗೊಳ್ಳಬೇಕಾಗುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ