Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅದರ ಬಗ್ಗೆ ಮಾತನಾಡಬಾರದು’ ಎಂದು ಹೇಳಿದ್ದಾರೆ: ಅಮಿತ್ ಶಾ ಭೇಟಿ ಬಗ್ಗೆ ಕುಸ್ತಿಪಟು ಬಜರಂಗ್ ಪುನಿಯಾ

ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ? ಅವರನ್ನು ಯಾಕೆ ರಕ್ಷಿಸಲಾಗುತ್ತಿದೆ ಎಂದು ನಾವು ಗೃಹ ಸಚಿವರನ್ನು ಕೇಳಿದ್ದೇವೆ ಎಂದು ಬಜರಂಗ್ ಪುನಿಯಾ ಹೇಳಿದರು.

'ಅದರ ಬಗ್ಗೆ ಮಾತನಾಡಬಾರದು' ಎಂದು ಹೇಳಿದ್ದಾರೆ: ಅಮಿತ್ ಶಾ ಭೇಟಿ ಬಗ್ಗೆ ಕುಸ್ತಿಪಟು ಬಜರಂಗ್ ಪುನಿಯಾ
ಬಜರಂಗ್ ಪುನಿಯಾ
Follow us
ರಶ್ಮಿ ಕಲ್ಲಕಟ್ಟ
|

Updated on: Jun 06, 2023 | 8:09 PM

ದೆಹಲಿ: ಕುಸ್ತಿ ಫೆಡರೇಶನ್ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ (BJP MP) ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ಅವರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ (Wrestlers Protest) ಕುಸ್ತಿಪಟುಗಳಲ್ಲಿ ಒಬ್ಬರಾದ ಒಲಿಂಪಿಯನ್ ಕುಸ್ತಿಪಟು ಬಜರಂಗ್ ಪುನಿಯಾ(Bajrang Punia) ಅವರು ಗೃಹ ಸಚಿವ ಅಮಿತ್ ಶಾ (Amit Shah) ಜತೆಗೆ ತಮ್ಮ ತಡರಾತ್ರಿಯ ಸಭೆಯ ಬಗ್ಗೆ ಮಾತನಾಡದಂತೆ ಸರ್ಕಾರ ಪ್ರತಿಭಟನಾಕಾರರಿಗೆ ಹೇಳಿದೆ ಎಂದಿದ್ದಾರೆ. ಶನಿವಾರ ರಾತ್ರಿ ಕುಸ್ತಿಪಟುಗಳು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪುನಿಯಾ ಅವರು ಗೃಹ ಸಚಿವರೊಂದಿಗೆ ಯಾವುದೇ ಒಪ್ಪಂದದ ವದಂತಿಯನ್ನು ನಿರಾಕರಿಸಿದರು. ಡಬ್ಲ್ಯುಎಫ್ಐ ಮುಖ್ಯಸ್ಥರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ ಎಂದಿದ್ದಾರೆ ಪುನಿಯಾ. ಪ್ರತಿಭಟನಾ ಚಳವಳಿ ನಿಂತಿಲ್ಲ, ಅದು ಮುಂದುವರಿಯುತ್ತದೆ. ಅದನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಎಂಬುದರ ಕುರಿತು ನಾವು ಕಾರ್ಯತಂತ್ರ ರೂಪಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಗೃಹ ಸಚಿವರನ್ನು ಭೇಟಿಯಾದ ಕುಸ್ತಿಪಟುಗಳು ಒಪ್ಪಂದ ಮಾಡಿಕೊಂಡಿದ್ದಾರೆ. ಇನ್ನು ಹೆಚ್ಚಿನ ಪ್ರತಿಭಟನೆಗಳನ್ನು ಮಾಡುವುದಿಲ್ಲ ಎಂಬ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಪುನಿಯಾ, ಅಮಿತ್ ಶಾ ಅವರೊಂದಿಗಿನ ಸಭೆಯ ಬಗ್ಗೆ ಚರ್ಚಿಸದಂತೆ ಸರ್ಕಾರ ನಮ್ಮಲ್ಲಿ ಹೇಳಿದೆ. ಆದರೆ ಅಲ್ಲಿಂದ ಮಾಹಿತಿ ಸೋರಿಕೆಯಾಗಿದೆ ಎಂದಿದ್ದಾರೆ ಪುನಿಯಾ.

ಕ್ರೀಡಾಪಟುಗಳು ಸರ್ಕಾರದ ಪ್ರತಿಕ್ರಿಯೆಯಿಂದ ತೃಪ್ತರಾಗಿಲ್ಲ, ನಮ್ಮ ಬೇಡಿಕೆಗಳಿಗೆ ಸರ್ಕಾರವು ಸಮ್ಮತಿಸುತ್ತಿಲ್ಲ ಎಂದು ಭೇಟಿ ವೇಳೆ ಶಾ ಅವರಲ್ಲಿ ಹೇಳಿರುವುದಾಗಿ ಪುನಿಯಾ ಹೇಳಿದ್ದಾರೆ.  ರಾತ್ರಿ 11 ಗಂಟೆಗೆ ಆರಂಭವಾದ ಸಭೆ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು ಎಂದು ಮೂಲಗಳು ತಿಳಿಸಿವೆ. ಅಮಿತ್ ಶಾ ಅವರೊಂದಿಗಿನ ಚರ್ಚೆಯಲ್ಲಿ ಪುನಿಯಾ ಜತೆ, ಸಾಕ್ಷಿ ಮಲಿಕ್, ಸಂಗೀತಾ ಫೋಗಟ್ ಮತ್ತು ಸತ್ಯವರ್ತ್ ಕರ್ದಿಯಾನ್ ಉಪಸ್ಥಿತರಿದ್ದರು.

ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಿಷ್ಪಕ್ಷಪಾತ ತನಿಖೆ ಮತ್ತು ತ್ವರಿತ ಕ್ರಮಕ್ಕೆ ಕುಸ್ತಿಪಟುಗಳು ಒತ್ತಾಯಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ ಎಂದು ಅಮಿತ್ ಶಾ ಕುಸ್ತಿಪಟುಗಳಿಗೆ ಭರವಸೆ ನೀಡಿದ್ದು, ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳಲಿ ಎಂದು ಅವರು ಕುಸ್ತಿಪಟುಗಳಿಗೆ ಹೇಳಿದ್ದಾರೆ.

ಇದನ್ನೂ ಓದಿ: Wrestlers Protest: ಗೃಹ ಸಚಿವ ಅಮಿತ್​ ಶಾರನ್ನು ಭೇಟಿಯಾದ ಕುಸ್ತಿಪಟುಗಳು

ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ? ಅವರನ್ನು ಯಾಕೆ ರಕ್ಷಿಸಲಾಗುತ್ತಿದೆ ಎಂದು ನಾವು ಗೃಹ ಸಚಿವರನ್ನು ಕೇಳಿದ್ದೇವೆ ಎಂದು ಬಜರಂಗ್ ಪುನಿಯಾ ಹೇಳಿದರು.

ಈ ಬಗ್ಗೆ ನಾವು ಅದನ್ನು ಚರ್ಚಿಸುತ್ತಿದ್ದು ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ. ಆದರೆ ಕೇವಲ ಭರವಸೆಗಳ ಆಧಾರದ ಮೇಲೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ. ಸರ್ಕಾರದ ಭರವಸೆಗಳ ಆಧಾರದ ಮೇಲೆ ನಾವು ಜನವರಿಯಲ್ಲಿ ಹಿಂದೆ ಸರಿದಿದ್ದೆವು. ಆದರೆ ಅದೆಲ್ಲವೂ ಸುಳ್ಳು ಆಗಿತ್ತು ಎಂದಿದ್ದಾರೆ ಪುನಿಯಾ.

ಕುಸ್ತಿಪಟುಗಳು ತಮ್ಮ ರೈಲ್ವೇ ಉದ್ಯೋಗಗಳಿಗೆ ಮರುಸೇರ್ಪಡೆಗೊಂಡ ನಂತರ ಪ್ರತಿಭಟನೆಗಳಿಂದ ಹಿಂದೆ ಸರಿಯುತ್ತಾರೆ ಎಂಬ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಪುನಿಯಾ ನಾವು ಕೆಲಸದಿಂದ ರಜೆ ತೆಗೆದುಕೊಂಡಿದ್ದೇವೆ. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ ಸ್ಥಳದಿಂದ ಹೊರಹಾಕಲ್ಪಟ್ಟ ನಂತರ ಸೈನ್ ಇನ್ ಮಾಡಲು ಒಂದು ದಿನ ಅಲ್ಲಿಗೆ ಹೋಗಿದ್ದೆವು. ಅಂದಿನಿಂದ ನಾವು ನಮ್ಮ ಕೆಲಸಗಳಿಗೆ ಹಿಂತಿರುಗಿಲ್ಲ. ನಾವು ಎಲ್ಲವನ್ನೂ ಪಣಕ್ಕಿಟ್ಟಿದ್ದೇವೆ. ನಮ್ಮ ಆಂದೋಲನದಲ್ಲಿ ಒಂದು ಅಡಚಣೆಯಾದರೆ ನಮ್ಮ ಸರ್ಕಾರಿ ಉದ್ಯೋಗಗಳನ್ನು ತ್ಯಜಿಸಲು ಸಿದ್ಧರಿದ್ದೇವೆ. ಇದು ದೊಡ್ಡ ವಿಷಯವಲ್ಲ.

ಇದು ಗೌರವ ಮತ್ತು ಘನತೆಗಾಗಿ ಇರುವ ಹೋರಾಟವಾಗಿದೆ. ನಾವು ವದಂತಿಗಳಿಗೆ ಹೆದರುವುದಿಲ್ಲ,. ಯಾರಾದರೂ ನಮ್ಮ ಮೇಲೆ ಒತ್ತಡ ಹೇರಿದರೆ ನಾವು ಕೆಲಸವನ್ನು ತೊರೆಯುತ್ತೇವೆ ಎಂದು ಪುನಿಯಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ