ಪುಣೆ ಪೋಷೆ ಕಾರು ಅಪಘಾತ ಪ್ರಕರಣ; ಉನ್ನತ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿಲ್ಲ: ಅಜಿತ್ ಪವಾರ್

ಸುನೀಲ್ ಟಿಂಗ್ರೆ ಘಟನೆ ನಡೆದ ಕ್ಷೇತ್ರದ ಶಾಸಕ. ಇಂತಹ ಘಟನೆಗಳು ನಡೆದಾಗಲೆಲ್ಲ ಸ್ಥಳೀಯ ಶಾಸಕರು ಆಗಾಗ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಸುನೀಲ್ ಟಿಂಗ್ರೆ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರಾ? ಅವರ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ ಎಂದು ಪವಾರ್ ಹೇಳಿದ್ದಾರೆ.

ಪುಣೆ ಪೋಷೆ ಕಾರು ಅಪಘಾತ ಪ್ರಕರಣ; ಉನ್ನತ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿಲ್ಲ: ಅಜಿತ್ ಪವಾರ್
ಅಜಿತ್ ಪವಾರ್
Follow us
ರಶ್ಮಿ ಕಲ್ಲಕಟ್ಟ
|

Updated on: Jun 01, 2024 | 2:01 PM

ಮುಂಬೈ ಜೂನ್ 01: ಪೋಷೆ ಅಪಘಾತ ಪ್ರಕರಣಕ್ಕೆ(Pune Porsche crash) ಸಂಬಂಧಿಸಿದಂತೆ ಪುಣೆ ಪೊಲೀಸ್ ಕಮಿಷನರ್‌ಗೆ ದೂರವಾಣಿ ಕರೆ ಮಾಡಿರುವುದನ್ನು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ನಿರಾಕರಿಸಿದ್ದಾರೆ. ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪವಾರ್, “ನಾನು ಅನೇಕ ವಿಷಯಗಳ ಬಗ್ಗೆ ಪೊಲೀಸ್ ಆಯುಕ್ತರಿಗೆ ಆಗಾಗ್ಗೆ ಕರೆ ಮಾಡುತ್ತೇನೆ ಆದರೆ ಈ ಪ್ರಕರಣದಲ್ಲಿ ನಾನು ಅವರಿಗೆ ಒಂದೇ ಒಂದು ಕರೆಯನ್ನು ಮಾಡಿಲ್ಲ” ಎಂದು ಹೇಳಿದ್ದಾರೆ.  ಮೇ 19 ರ ಮುಂಜಾನೆ ಪುಣೆಯ ಕಲ್ಯಾಣಿ ನಗರದಲ್ಲಿ ಹದಿಹರೆಯದ ಬಾಲಕ ಕುಡಿದ ಮತ್ತಿನಲ್ಲಿ ಪೋಷೆ ಕಾರು ಚಲಾಯಿಸಿ ಬೈಕ್​​ಗೆ ಡಿಕ್ಕಿ ಹೊಡೆದಿದ್ದು ಬೈಕ್​​ನಲ್ಲಿದ್ದ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾದ ಅನೀಶ್ ಅವಾಧಿಯಾ ಮತ್ತು ಅಶ್ವಿನಿ ಕೋಷ್ಟ ಸಾವಿಗೀಡಾಗಿದ್ದರು.

ಕಾರು ಚಲಾಯಿಸಿದ್ದ ಅಪ್ರಾಪ್ತ ಬಾಲಕ ಶ್ರೀಮಂತ ಮತ್ತು ಪ್ರಭಾವಿ ಕುಟುಂಬದವನು. ಈತನನ್ನು ಬಂಧಿಸಿದ್ದರೂ ಪೊಲೀಸ್ ಬಂಧನದಲ್ಲಿ ಆತನನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವಂತೆ ಎನ್​​ಸಿಪಿ ಪಕ್ಷದ ಶಾಸಕ ಸುನಿಲ್ ಟಿಂಗ್ರೆ ಶಿಫಾರಸು ಮಾಡಿದ್ದರು ಎನ್ನಲಾಗಿದೆ.ಆದಾಗ್ಯೂ ಟಿಂಗ್ರೆ ಅವರನ್ನು ಪವಾರ್ ಸಮರ್ಥಿಸಿಕೊಂಡಿದ್ದಾರೆ. ಸುನೀಲ್ ಟಿಂಗ್ರೆ ಘಟನೆ ನಡೆದ ಕ್ಷೇತ್ರದ ಶಾಸಕ. ಇಂತಹ ಘಟನೆಗಳು ನಡೆದಾಗಲೆಲ್ಲ ಸ್ಥಳೀಯ ಶಾಸಕರು ಆಗಾಗ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಸುನೀಲ್ ಟಿಂಗ್ರೆ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರಾ? ಅವರ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ ಎಂದು ಪವಾರ್ ಹೇಳಿದ್ದಾರೆ.

ಅಜಿತ್ ಪವಾರ್ ಹೇಳಿದ್ದೇನು?

ಗೃಹ ಇಲಾಖೆ ಮುಖ್ಯಸ್ಥರಾಗಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅಪಘಾತದ ಮರುದಿನವೇ ಪುಣೆ ಪೊಲೀಸರಿಗೆ ತೀವ್ರ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.

“ಮುಖ್ಯಮಂತ್ರಿ (ಏಕನಾಥ್ ಶಿಂಧೆ) ಕೂಡ ಸರಿಯಾದ ಸೂಚನೆಗಳನ್ನು ನೀಡಿದ್ದಾರೆ. ಆರಂಭದಲ್ಲಿ ವಿಳಂಬ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಸಾಸೂನ್ ಜನರಲ್ ಆಸ್ಪತ್ರೆಯವರೂ ಪೊಲೀಸ್ ಕ್ರಮವನ್ನು ಎದುರಿಸಿದ್ದಾರೆ ಎಂದು ಅವರು ಹೇಳಿದರು.

ಆರೋಪಿ ಅಪ್ರಾಪ್ತ ಬಾಲಕನನ್ನು ಜೂನ್ 5 ರವರೆಗೆ ಅಬ್ಸರ್ವೇಶನ್ ಹೋಮ್‌ನಲ್ಲಿ ಇರಿಸಲಾಗಿದೆ. ಆತನ ತಂದೆ ವಿಶಾಲ್ ಅಗರ್ವಾಲ್ ಮತ್ತು ಅಜ್ಜ ಸುರೇಂದ್ರ ಅಗರ್ವಾಲ್ ಅವರನ್ನು ಆರೋಪದ ಮೇಲೆ ಬಂಧಿಸಲಾಗಿದೆ. ಕುಟುಂಬದ ಚಾಲಕನನ್ನು ಅಪಹರಿಸಿ ಆಪಾದನೆಯನ್ನು ಹೊರುವಂತೆ ಅವನ ಮೇಲೆ ಒತ್ತಡ ಹೇರಿದ್ದರಿಂದ ಸದ್ಯ ಇವರಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದನ್ನೂ ಓದಿ: ಚೆನ್ನೈ-ಮುಂಬೈ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ; ತುರ್ತು ಲ್ಯಾಂಡಿಂಗ್

ಅಪಘಾತದ ಸಮಯದಲ್ಲಿ ಅವನು ಕುಡಿದಿರಲಿಲ್ಲ ಎಂದು ತೋರಿಸಲು ಅಪ್ರಾಪ್ತ ವಯಸ್ಕನ ರಕ್ತದ ಮಾದರಿಗಳನ್ನು ಬದಲಿಸಿ ಅದರ ಬದಲಿಗೆ ಅವನ ತಾಯಿಯ ರಕ್ತ ನೀಡಿದ್ದಕ್ಕಾಗಿ ಸಾಸೂನ್ ಆಸ್ಪತ್ರೆಯ ಇಬ್ಬರು ವೈದ್ಯರು ಮತ್ತು ಸಿಬ್ಬಂದಿಯನ್ನು ಸಹ ಬಂಧಿಸಲಾಗಿದೆ.

ಆರೋಪಿಯ ತಾಯಿಯನ್ನು ಪುಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆರೋಪಿಯ ರಕ್ತದ ಮಾದರಿಗಳನ್ನು ಆತನ ತಾಯಿಯ ರಕ್ತದೊಂದಿಗೆ ಬದಲಾಯಿಸಿಕೊಳ್ಳಲಾಗಿದೆ ಎಂದು ಅಪಘಾತದ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ