ಕರ್ನಾಟಕದಂತೆ ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ 75 ಮೀಸಲಾತಿ ಮಸೂದೆ ತಂದಿತ್ತು ಹರ್ಯಾಣ ಸರ್ಕಾರ; ಆಮೇಲೇನಾಯ್ತು?

|

Updated on: Jul 17, 2024 | 5:02 PM

ಕರ್ನಾಟಕ ಅಂಗೀಕರಿಸಿರುವ ಮಸೂದೆಯಂತೆಯೇ ಹರ್ಯಾಣ ಸರ್ಕಾರವು ಮಸೂದೆಯೊಂದಕ್ಕೆ  ಒಪ್ಪಿಗೆ ನೀಡಿತ್ತು. ಆದರೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್  ಹರ್ಯಾಣದಲ್ಲಿ ಖಾಸಗಿ ವಲಯದಲ್ಲಿ 75% ಮೀಸಲಾತಿಯನ್ನು ಒದಗಿಸುವ ಹರ್ಯಾಣದ ಕಾನೂನನ್ನು ರದ್ದುಗೊಳಿಸಿತ್ತು. ಅದೇ ವೇಳೆ ಖಾಸಗಿ ಸಂಸ್ಥೆಗಳು ತಿಂಗಳಿಗೆ 30,000 ರೂ.ಗಿಂತ ಕಡಿಮೆ ವೇತನ ಪಡೆಯುತ್ತಿರುವ ಯಾವುದೇ ಉದ್ಯೋಗಿ ಮೂರು ತಿಂಗಳೊಳಗೆ ಗೊತ್ತುಪಡಿಸಿದ ಪೋರ್ಟಲ್‌ನಲ್ಲಿ ನೋಂದಾಯಿಸಲು ಅಗತ್ಯವಿರುವ ಕಾನೂನಿನ ಮುಖ್ಯ ಅಂಶವನ್ನು ಹೈಕೋರ್ಟ್ ಟೀಕಿಸಿತ್ತು.

ಕರ್ನಾಟಕದಂತೆ ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ 75 ಮೀಸಲಾತಿ ಮಸೂದೆ ತಂದಿತ್ತು ಹರ್ಯಾಣ ಸರ್ಕಾರ; ಆಮೇಲೇನಾಯ್ತು?
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ ಜುಲೈ 17:  ಕರ್ನಾಟಕದಲ್ಲಿ (Karnataka) ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕಂಪನಿಗಳಲ್ಲಿನ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ. 100ರಷ್ಟು ಮೀಸಲಾತಿ ಕಲ್ಪಿಸುವ (Reservation for Kannadigas) ಎರಡು ಕಾಯ್ದೆಗಳಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಅದೇ ವೇಳೆ ಈ ಮಸೂದೆಗೆ ಉದ್ಯಮಿಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ರಾಜ್ಯದ ಎಲ್ಲಾ ಖಾಸಗಿ ಕೈಗಾರಿಕೆಗಳಲ್ಲಿ “ಸಿ ಮತ್ತು ಡಿ” ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕಾತಿಯನ್ನು ಕಡ್ಡಾಯಗೊಳಿಸುವ ವಿಧೇಯಕಕ್ಕೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ ಎಂದು ಸಿಎಂ ಜುಲೈ 16ರಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್​​ನ್ನು ಅವರು ಇಂದು (ಜುಲೈ 17) ಡಿಲೀಟ್ ಮಾಡಿ, ಅದರ ನಂತರ ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಮಾಡಿದ ಟ್ವೀಟ್​​ನಲ್ಲೇನಿದೆ?

ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ

ಸಮಾಲೋಚನೆ ನಡೆಸುವುದಾಗಿ ಹೇಳಿದ ಸರ್ಕಾರ

ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಡ್ಡಾಯಗೊಳಿಸುವ ಮಸೂದೆಗೆ ಉದ್ಯಮಿಗಳಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಆ ಬಗ್ಗೆ ಸಮಾಲೋಚನೆ ನಡೆಸುವುದಾಗಿ ಐಟಿ ಸಚಿವ ಪ್ರಿಯಾಂಕ್ ಖರ್ಗೆ  ಹೇಳಿದ್ದಾರೆ. ಮಸೂದೆಯ ಷರತ್ತುಗಳ ಬಗ್ಗೆ ಉದ್ಯಮ ತಜ್ಞರು ಮತ್ತು ಇತರ ಇಲಾಖೆಗಳ ಬಳಿ ಸಮಾಲೋಚನೆ ನಡೆಸಿ ನಂತರವೇ ಅದನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದೇ ರೀತಿಯ ಮಸೂದೆ ತಂದಿತ್ತು ಹರ್ಯಾಣ, ಆಮೇಲೇನಾಯ್ತು?

ಕರ್ನಾಟಕ ಅಂಗೀಕರಿಸಿರುವ ಮಸೂದೆಯಂತೆಯೇ ಹರ್ಯಾಣ ಸರ್ಕಾರವು ಮಸೂದೆಯೊಂದಕ್ಕೆ  ಒಪ್ಪಿಗೆ ನೀಡಿತ್ತು. ಆದರೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್  ಹರ್ಯಾಣದಲ್ಲಿ ಖಾಸಗಿ ವಲಯದಲ್ಲಿ 75% ಮೀಸಲಾತಿಯನ್ನು ಒದಗಿಸುವ ಹರ್ಯಾಣದ ಕಾನೂನನ್ನು ರದ್ದುಗೊಳಿಸಿತ್ತು. ಸಂವಿಧಾನದ ಅಡಿಯಲ್ಲಿ ಏನು ಮಾಡಬೇಕೆಂದು ರಾಜ್ಯವು ಖಾಸಗಿ ಉದ್ಯೋಗದಾತರಿಗೆ ನಿರ್ದೇಶಿಸಲು ಸಾಧ್ಯವಿಲ್ಲ. ಹರ್ಯಾಣದ ಶಾಸನವು ಭಾರತದ ಭೂಪ್ರದೇಶದಾದ್ಯಂತ ಮುಕ್ತವಾಗಿ ಚಲಿಸುವ ಅಥವಾ ಭಾರತದ ಯಾವುದೇ ಭಾಗದಲ್ಲಿ ವಾಸಿಸುವ ಮತ್ತು ನೆಲೆಸುವ ಹಕ್ಕಿನ ಬಗ್ಗೆ ಅವಿವೇಕದ ನಿರ್ಬಂಧಗಳನ್ನು ಹೇರುತ್ತಿದೆ ಎಂದು ಹೈಕೋರ್ಟ್ ಹೇಳಿತ್ತು.

ಖಾಸಗಿ ಸಂಸ್ಥೆಗಳು ತಿಂಗಳಿಗೆ 30,000 ರೂ.ಗಿಂತ ಕಡಿಮೆ ವೇತನ ಪಡೆಯುತ್ತಿರುವ ಯಾವುದೇ ಉದ್ಯೋಗಿ ಮೂರು ತಿಂಗಳೊಳಗೆ ಗೊತ್ತುಪಡಿಸಿದ ಪೋರ್ಟಲ್‌ನಲ್ಲಿ ನೋಂದಾಯಿಸಲು ಅಗತ್ಯವಿರುವ ಕಾನೂನಿನ ಮುಖ್ಯ ಅಂಶವನ್ನು ಹೈಕೋರ್ಟ್ ಟೀಕಿಸಿದೆ.ಇದು ಸಂವಿಧಾನದಲ್ಲಿ ಸಂರಕ್ಷಿಸಲ್ಪಟ್ಟ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಹೇಳಿತ್ತು.

ರಾಜ್ಯದ ನಿವಾಸಿಗಳಿಗೆ ಹರ್ಯಾಣ ಕೈಗಾರಿಕೆಗಳಲ್ಲಿ 75% ಮೀಸಲಾತಿಯನ್ನು ಒದಗಿಸುವ ಹರ್ಯಾಣ ಸರ್ಕಾರವು ಪರಿಚಯಿಸಿದ ಕಾನೂನನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರದ್ದುಗೊಳಿಸಿದ್ದು, ಈ ಕಾನೂನು ಉದ್ಯೋಗದಾತರ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಖಾಸಗಿ ವಲಯದ ಉದ್ಯೋಗಕ್ಕಾಗಿ ನಿವಾಸ ವಿಧಾನವನ್ನು ಪರಿಚಯಿಸುವ ಪ್ರಯತ್ನವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.

ಇದನ್ನೂ ಓದಿ: ಕಂಪನಿಗಳು ಬಿಟ್ಟು ಹೋಗ್ತವೆ ಹುಷಾರ್..! ಕನ್ನಡಿಗರಿಗೆ ಮೀಸಲಾತಿ ಕೊಡುವ ಪ್ರಸ್ತಾವಕ್ಕೆ ನಾಸ್​ಕಾಮ್ ಅಸಮಾಧಾನ

ತಿಂಗಳಿಗೆ 30,000 ರೂ.ಗಿಂತ ಕಡಿಮೆ ವೇತನ ಪಡೆಯುವ ನೌಕರರಿಗೆ ಅನ್ವಯಿಸುವ ಕಾನೂನು 2021 ರ ಮಾರ್ಚ್‌ನಲ್ಲಿ ಅಂಗೀಕರಿಸಲ್ಪಟ್ಟಿದ್ದು 2022 ರ ಜನವರಿಯಲ್ಲಿ ಜಾರಿಗೆ ಬಂದಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ