ದೆಹಲಿ: ಕಾಂಗ್ರೆಸ್ನ ಹಿರಿಯ ನಾಯಕ, ಪಂಜಾಬ್ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಕ್ಷದಲ್ಲಿ ಈಚೆಗೆ ನಡೆಯುತ್ತಿರುವ ಆಂತರಿಕ ವಿದ್ಯಮಾನಗಳು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ದೇವರುಕೊಟ್ಟ ವರವಾಗುತ್ತದೆ. ಕಾಂಗ್ರೆಸ್ ಪಕ್ಷವು ಕುಸಿಯುತ್ತಿರುವುದು ಆಪ್ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸಲು ನೆರವಾಗುತ್ತದೆ ಎಂದು ಹೇಳಿದರು. ಪಕ್ಷವು ಇತ್ತೀಚೆಗೆ ನಡೆಸಿದ್ದ ಆಂತರಿಕ ಸಮೀಕ್ಷೆಯಲ್ಲಿಯೂ ಈ ಅಂಶ ಪ್ರಸ್ತಾಪವಾಗಿತ್ತು ಎಂದು ಅವರು ಹೇಳಿದರು. ಕಳೆದ ಜುಲೈ ಮತ್ತು ಸೆಪ್ಟೆಂಬರ್ ನಡುವಣ ಅವಧಿಯಲ್ಲಿ ಈ ಸಮೀಕ್ಷೆ ನಡೆದಿತತು. ಪಕ್ಷದ ಪ್ರಭಾವವು ಪಂಜಾಬ್ನಲ್ಲಿ ಶೇ 20ರಷ್ಟು ಕಡಿಮೆಯಾಗಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ ಎಂದರು.
ಈ ಬಾರಿ ಪಂಜಾಬ್ನಲ್ಲಿ ನಡೆಯಲಿರುವ ಚುನಾವಣೆ ಹೊಸ ರೀತಿಯಲ್ಲಿರುತ್ತದೆ. ಕಾಂಗ್ರೆಸ್, ಆಪ್, ಅಕಾಲಿ ದಳ, ಅಕಾಲಿ ದಳದ ಕೆಲ ಬಣಗಳು ಸೇರಿದಂತೆ ಹೊಸದೊಂದು ಶಕ್ತಿ ಅಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದೆ. ಹೀಗಾಗಿಯೇ ಇದನ್ನು ಹೊಸ ಚುನಾವಣೆ ಎಂದಿದ್ದು ಎಂದರು. ಪಕ್ಷದಲ್ಲಿ ವಿರೋಧಿ ಬಣದಲ್ಲಿದ್ದ ನವ್ಜೋತ್ ಸಿಂಗ್ ಸಿಧು ಎದುರು ಮೂರು ಬಾರಿ ನೇರವಾಗಿ ಅವಮಾನವಾಗಿದೆ. ಪಕ್ಷದಲ್ಲಿ ಉಳಿಯಲು ನನಗೆ ಆಸಕ್ತಿಯಿಲ್ಲ. ಹಾಗೆಂದು ಬಿಜೆಪಿಗೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಗೃಹ ಸಚಿವ ಅಮಿತ್ ಶಾ ಅವರನ್ನು ಸೆ.29ರಂದು ಭೇಟಿಯಾದ ನಂತರ ಅಮರಿಂದರ್ ಬಿಜೆಪಿಗೆ ಸೇರ್ಪಡೆಯಾಗಬಹುದು ಎಂದು ಕೆಲವರು ವಿಶ್ಲೇಷಿಸಿದ್ದರು.
ಕಳೆದ ಒಂದು ವರ್ಷದಿಂದ ಗುಪ್ತಗಾಮಿನಿಯಂತಿದ್ದ ಪಂಜಾಬ್ ಕಾಂಗ್ರೆಸ್ ಘಟಕದ ಆಂತರಿಕ ಭಿನ್ನಮತವು ಇತ್ತೀಚೆಗೆ ಅತ್ಯಂತ ಕೆಟ್ಟ ರೀತಿಯಲ್ಲಿ ಬಹಿರಂಗಗೊಂಡಿತ್ತು. ಪಕ್ಷವು ಎರಡನೇ ಬಾರಿಗೆ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನೂ ಭಿನ್ನಮತದ ವಿದ್ಯಮಾನ ಕಿತ್ತುಕೊಂಡಿತ್ತು. ದೆಹಲಿಯಲ್ಲಿ 2015ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಪಂಜಾಬ್ಗೆ ನೆಲೆ ವಿಸ್ತರಿಸಿಕೊಳ್ಳಲು ಆಮ್ ಆದ್ಮಿ ಪಕ್ಷವು ಪ್ರಯತ್ನಿಸುತ್ತಲೇ ಇದೆ. ಆದರೆ ಈವರೆಗೆ ಗಮನಾರ್ಹ ಮುನ್ನಡೆ ಗಳಿಸಿಕೊಳ್ಳಲು ಸಾಧ್ಯವಾಗಿಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಆಪ್ ಪಂಜಾಬ್ನಲ್ಲಿ 13 ಕ್ಷೇತ್ರಗಳಲ್ಲಿ ಜಯ ದಾಖಲಿಸಿತ್ತು. 2017ರಲ್ಲಿ ಆರಂಭದಲ್ಲಿ ವ್ಯಾಪಕ ಬೆಂಬಲ ಸಿಕ್ಕರೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
ಕಳೆದ ಚುನಾವಣೆಯಲ್ಲಿ 117 ವಿಧಾನಸಭೆ ಕ್ಷೇತ್ರಗಳ ಪೈಕಿ ಆಪ್ ಕೇವಲ 20 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಚಲಾವಣೆಯಾದ ಮತಗಳ ಪೈಕಿ ಶೇ 23.8 ಮತಗಳು ಆಪ್ ಪರ ಇತ್ತು. ಈಗಾಗಲೇ ಪಂಜಾಬ್ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಆಪ್ ನಾಯಕ ಅರವಿಂದ ಕೇಜ್ರಿವಾಲ್, ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ. ದೆಹಲಿಯಲ್ಲಿ ಗೆಲುವು ಸಾಧಿಸಲು ನೆರವಾದ ಸೂತ್ರಗಳನ್ನೇ ಪಂಜಾಬ್ಗೂ ಅನ್ವಯಿಸಲು ಮುಂದಾಗಿದ್ದಾರೆ.
ಚುನಾವಣೆಯ ಆರಂಭಕ್ಕೂ ಮೊದಲೇ ನೀಡಿದ್ದ ಭರವಸೆಗಳ ಪಟ್ಟಿಗೆ ಇನ್ನೂ 8 ಅಂಶಗಳನ್ನು ಸೇರಿಸಿದ್ದಾರೆ. ಉಚಿತ ಚಿಕಿತ್ಸೆ, ಮೊಹಲ್ಲಾ ಕ್ಲಿನಿಕ್ ಸ್ಥಾಪನೆ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸುವ ಭರವಸೆಗಳನ್ನು ಅವರು ಕೊಟ್ಟಿದ್ದಾರೆ. ಆದರೆ ಈವರೆಗೂ ಪಂಜಾಬ್ನಲ್ಲಿ ಪ್ರಬಲ ನಾಯಕರೊಬ್ಬರನ್ನು ಗುರುತಿಸಿ, ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಆಪ್ಗೆ ಸಾಧ್ಯವಾಗಿಲ್ಲ. ಇದು ಪಕ್ಷದ ಹಿನ್ನಡೆಗೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ: ನವಜೋತ್ ಸಿಂಗ್ ಸಿಧುವನ್ನು ಮಾತುಕತೆಗೆ ಆಹ್ವಾನಿಸಿದ ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್ ಚನ್ನಿ
ಇದನ್ನೂ ಓದಿ: ಸಿಧು ರಾಜೀನಾಮೆ ಬಗ್ಗೆ ನನಗೆ ಮಾಹಿತಿ ಇರಲಿಲ್ಲ: ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್ ಚನ್ನಿ
(Punjab Assembly Elections Aam Aadmi Party Begins Preparation Congress Losing its Ground)