ತಾಕತ್ತಿದ್ದರೆ ತನ್ನ ವಿರುದ್ಧ ಪಟಿಯಾಲಾ ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ನವಜೋತ್ ಸಿದ್ಧುಗೆ ಸವಾಲೆಸೆದ ಅಮರಿಂದರ್ ಸಿಂಗ್
ಕಳೆದ 15 ದಿನಗಳಿಂದ ಸಿದ್ಧು ಅವರ ನಿಲ್ಲದ ಟೀಕೆಗಳಿಗೆ ಪ್ರತಿಕ್ರಿಯಿಸದೆ ಸುಮ್ಮನಿದ್ದ ಅಮರಿಂದರ್ ಅವರು ಕೊನೆಗೂ ಮೌನ ಮುರಿದು ತನ್ನ ವಿರುದ್ಧ ಪಟಿಯಾಲದಿಂದ ಸ್ಫರ್ಧಿಸುವಂತೆ ಟಿವಿ ಚ್ಯಾನೆಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸವಾಲು ಹಾಕಿದ್ದಾರೆ. ಈ ಕ್ಷೇತ್ರವು ಮುಖ್ಯಮಂತ್ರಿಗಳ ಭದ್ರನೆಲೆಯಾಗಿದೆ.
ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಅವರ ಬದ್ಧ ವೈರಿ ಹಾಗೂ ಮಾಜಿ ಸಂಪುಟ ಸಹೋದ್ಯೋಗಿ, ಮಾಜಿ ಕ್ರಿಕೆಟರ್ ಮತ್ತು ಟಿವಿ ಶೋಗಳ ತೀರ್ಪುಗಾರನಾಗಿ ಸಹ ಪರದೆಗಳ ಮೇಲೆ ಕಾಣಿಸಿಕೊಳ್ಳುವ ನವಜೋತ್ಸಿಂಗ್ ಸಿದ್ಧು ನಡುವೆ ಸದಾ ಜಾರಿಯಲ್ಲಿರುವ ಜಗಳ ಈಗ ತಾರಕಕ್ಕೇರಿದಂತೆ ಕಾಣುತ್ತಿದೆ. ಸಿದ್ಧು ಅವರ ಸತತ ಟೀಕೆಗಳಿಂದ ಪ್ರಾಯಶಃ ಬೇಸತ್ತಿರುವ ಅಮರಿಂದರ್ ತಾಕತ್ತಿದ್ದರೆ ತನ್ನ ವಿರುದ್ಧ ಪಟಿಯಾಲಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸವಾಲೆಸದಿದ್ದಾರೆ.
ಕಳೆದ 15 ದಿನಗಳಿಂದ ಸಿದ್ಧು ಅವರ ನಿಲ್ಲದ ಟೀಕೆಗಳಿಗೆ ಪ್ರತಿಕ್ರಿಯಿಸದೆ ಸುಮ್ಮನಿದ್ದ ಅಮರಿಂದರ್ ಅವರು ಕೊನೆಗೂ ಮೌನ ಮುರಿದು ತನ್ನ ವಿರುದ್ಧ ಪಟಿಯಾಲದಿಂದ ಸ್ಫರ್ಧಿಸುವಂತೆ ಟಿವಿ ಚ್ಯಾನೆಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸವಾಲು ಹಾಕಿದ್ದಾರೆ. ಈ ಕ್ಷೇತ್ರವು ಮುಖ್ಯಮಂತ್ರಿಗಳ ಭದ್ರನೆಲೆಯಾಗಿದೆ. ಪಟಿಯಾಲಾದಲ್ಲಿ ಸಿದ್ಧು ಅವರು ರಾಜಕೀಯ ಚಟುವಟಿಕೆಗಳನ್ನು ತೀವ್ರಗೊಳಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅಮರಿಂದರ್ ಅವರು, ‘ಅವರು ಬಂದು ನನ್ನ ವಿರುದ್ದ ಸ್ಪರ್ಧಿಸಿಲಿ, ಜನರಲ್ ಜೆ.ಜೆ. ಸಿಂಗ್ ಅವರಂತೆ ಸಿದ್ಧು ಸಹ ಠೇವಣಿ ಕಳೆದುಕೊಳ್ಳುತ್ತಾರೆ’ ಎಂದು ಹೇಳಿದರು.
ಸಿದ್ಧು ಮತ್ತೊಂದು ಪಕ್ಷವನ್ನು ಸೇರುವ ಸಿದ್ಧತೆಯಲ್ಲಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಅಮರಿಂದರ್ ಅವರು, ‘ ತಮ್ಮ ಸ್ವಂತ ಮುಖ್ಯಮಂತ್ರಿಯನ್ನು ಟೀಕಿಸುವುದರ ಅರ್ಥ ಅವರು ಇನ್ನೊಂದು ಪಕ್ಷ ಸೇರುವ ತರಾತುರಿಯಲ್ಲಿದ್ದಾರೆ. ಆದರೆ ಬಿಜೆಪಿ ಅವರನ್ನು ಸೇರಿಸಿಕೊಳ್ಳುವುದಿಲ್ಲ. ಆ ಪಕ್ಷವನ್ನು ನಿಂದಿಸಿದ ನಂತರ ಅದನ್ನು ಅವರು ತೊರೆದಿದ್ದರು. ಶಿರೋಮಣಿ ಅಕಾಲಿ ದಳ ಸಹ ಅವರಿಗೆ ಬಾಗಿಲು ತೆರೆಯುವುದಿಲ್ಲ. ಹಿಗಾಗಿ ಅವರಿಗೆ ಸೀಮಿತ ಅವಕಾಶಗಳಿವೆ. ಒಂದೋ ಕಾಂಗ್ರೆಸ್ನಲ್ಲಿ ಮುಂದುವರಿಯುವುದು ಇಲ್ಲವೇ ಆಪ್ ಪಕ್ಷವನ್ನು ಸೇರುವುದು’ ಎಂದರು.
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸುನಿಲ್ ಜಾಖರ್ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ ಅಮರಿಂದರ್, ‘ಸಿದ್ಧು ಅವರಿಗೆ ಜಾಗ ಕಲ್ಪಿಸುವುದಕ್ಕೆ ಅವರನ್ನ್ಯಾಕೆ ವಜಾ ಮಾಡಬೇಕು,’ ಅಂತ ಕೇಳಿದರು. ಈ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳವುದು ನಿಜವಾದರೂ ತನ್ನನ್ನು ಸಂಪರ್ಕಿಸಿದರೆ ಸಿದ್ಧು ನೇಮಕಾತಿಯನ್ನು ವಿರೋಧಿಸುವುದಾಗಿ ಅವರು ಹೇಳಿದರು. ಕೇವಲ ನಾಲ್ಕೂವರೆ ವರ್ಷಗಳಿಂದ ಪಕ್ಷದಲ್ಲಿರುವ ಸಿದ್ಧು ಅವರನ್ನು ಬಹಳ ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವವರನ್ನು ಕಡೆಗಣಿಸಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸುವುದು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಅಮರಿಂದರ್ ಅವರ ಸಂದರ್ಶನ ಪ್ರಸಾರಗೊಂಡ ಸ್ವಲ್ಪ ಹೊತ್ತಿನಲ್ಲೇ ಟ್ವೀಟ್ ಮಾಡಿರುವ ಸಿದ್ಧು ಅವರು, ‘ಪಂಜಾಬಿನ ಮನಸಾಕ್ಷಿಯನ್ನು ಹಳಿ ತಪ್ಪಿಸುವ ಪ್ರಯತ್ನಗಳು ನಡೆದಿವೆ. ನನ್ನ ಆತ್ಮ ಪಂಜಾಬ್ ಅಗಿದೆ ಮತ್ತು ಪಂಜಾಬಿನ ಆತ್ಮ ಗುರು ಗ್ರಂಥ್ ಸಾಹಿಬ್ ಜೀ.. ನಮ್ಮ ಹೋರಾಟ ನ್ಯಾಯಕ್ಕಾಗಿ ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವುದಕ್ಕಾಗಿ ನಡೆದಿದೆ. ಪ್ರಸಕ್ತ ವಿದ್ಯಮಾನಗಳಲ್ಲಿ ಅಸೆಂಬ್ಲಿ ಕ್ಷೇತ್ರದ ವಿಷಯ ಚರ್ಚೆಗೆ ಯೋಗ್ಯವಾದುದಲ್ಲ’ ಎಂದು ಹೇಳಿದ್ದಾರೆ.
Efforts to derail Punjab’s conscience will fail … My Soul is Punjab and Punjab’s Soul is Guru Granth Sahib Ji … Our fight is for Justice & punishing the guilty, an assembly seat is not even worth discussion in the same breathe !!
— Navjot Singh Sidhu (@sherryontopp) April 27, 2021
ಅಮರಿಂದರ್ ಅವರು ತಮ್ಮ ಸ್ವಂತ ಜಿಲ್ಲೆಯ ಭಾಗವಾಗಿರುವ ಪಟಿಯಾಲಾ (ನಗರ) ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದರೆ, ಸಿದ್ಧು ಸಹ ಪಟಿಯಾಲಾದವರಾಗಿದ್ದು ಅಲ್ಲಿ ತಮ್ಮ ಕುಟುಂಬದ ಮನೆಯನ್ನು ಹೊಂದಿದ್ದಾರೆ. ಬಿಜೆಪಿ ಸಿದ್ಧುಗೆ ಅಮೃತ್ಸರ್ನಿಂದ ಲೋಕಸಭಾ ಚುನಾವಣೆಗೆ ಸ್ಫರ್ಧಿಸಲು ಟಿಕೆಟ್ ನೀಡಿದಾಗ ಅವರು ತಮ್ಮ ನೆಲೆಯನ್ನು ಅಲ್ಲಿಗೆ ಶಿಫ್ಟ್ ಮಾಡಿದರು. ಚುನಾವಣೆಯ ಸಂದರ್ಭದಲ್ಲಿ ಅವರು ಪವಿತ್ರ ನಗರವನ್ನು ಯಾವತ್ತೂ ಬಿಟ್ಟು ಹೋಗುವುದಿಲ್ಲ ಅಂತ ಜನರಿಗೆ ಆಶ್ವಾಸನೆ ನೀಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ಪತ್ನಿಯೊಂದಿಗೆ ಪಟಿಯಾಲಾದಲ್ಲಿ ರಾಜಕೀಯವಾಗಿ ಬಹಳ ಸಕ್ರಿಯರಾಗಿದ್ದಾರೆ. ಆ ನಗರದಲ್ಲೇ ಒಂದು ಕಚೇರಿಯನ್ನು ಮಾಡಿಕೊಂಡಿರುವುದೂ ಅಲ್ಲದೆ ಇದುವರೆಗೆ ಎರಡು ಬಾರಿ ಸುದ್ದಿಗೋಷ್ಟಿಗಳನ್ನು ನಡೆಸಿದ್ದಾರೆ.
ಧರ್ಮದ್ರೋಹದ ವಿಷಯದ ಬಗ್ಗೆ ಕಾಂಗ್ರೆಸ್ ಆವೇಶಭರಿತ ಸಭೆ ನಡೆಸಿದ ಒಂದು ದಿನದ ನಂತರ ಅಮರಿಂದರ್ ಅವರು ಸಿದ್ಧುಗೆ ಸವಾಲೆಸೆದಿದ್ದಾರೆ. ತಮ್ಮ ಸರ್ಕಾರದ ವಿರುದ್ಧ ಆಕ್ರಮಣ ನಡೆಸುತ್ತಿರುವ ಸಿದ್ಧು ವಿರುದ್ಧ ಯಾರೂ ಪ್ರತಿಕ್ರಿಯೆ ವ್ಯಕ್ತಪಡಿಸದಂತೆ ತಮ್ಮ ಸಂಪುಟದ ಸಚಿವರಿಗೆ ಅವರು ತಾಕೀತು ಮಾಡಿದ್ದಾರೆ. ಹೈಕಮಾಂಡ್ ಅವರನ್ನು ಬಹಳ ಇಷ್ಟಪಟ್ಟಿರುವ ಬಗ್ಗೆ ಸೂಚನಗಳು ಬರುತ್ತಿರುವುದರಿಂದ ತಮ್ಮಲ್ಲಿ ಯಾರೂ ಪ್ರತಿಕ್ರಿಯಿಸುವುದಿಲ್ಲ ಎನ್ನುವುದನ್ನು ಸಚಿವರು ಮುಖ್ಯಮಂತ್ರಿಗಳಿಗೆ ಹೇಳಿರುವ ಬಗ್ಗೆ ವರದಿಯಾಗಿದೆ.
ಇವರಿಬ್ಬರ ನಡುವಿನ ಮುಸುಕಿನ ಜಗಳವೀಗ ಬಯಲಿಗೆ ಬಂದಿದ್ದು, ರಾಜಿ ಮಾಡಿಸುವ ಹೈಕಮಾಂಡ್ನ ಪ್ರಯತ್ನ ಸಫಲವಾಗಲ್ಲ ಎನ್ನುವುದು ಗೊತ್ತಾಗುತ್ತಿದೆ. ಬಹಳ ಸಮಯದ ನಂತರ ಅಮರಿಂದರ್ ಅವರು ಸಿದ್ಧು ವಿರುದ್ಧ ಗುಡುಗಿದ್ದಾರೆ. ಕಳೆದ ಬಾರಿ ಅವರು ಮಾಜಿ ಕ್ರಿಕೆಟರನ್ನು ತರಾಟೆಗೆ ತೆಗೆದುಕೊಂಡಿದ್ದು ಅಸರ್ಮಪಕ ಕಾರ್ಯವೈಖರಿಯ ಕಾರಣ ಹೇಳಿ ಅವರ ಖಾತೆಯನ್ನು ಬದಲಾಯಿಸಿದಾಗ. ಅದಾದ ಮೇಲೆ ಅಮರಿಂದರ್ ಅವರು ಸಿದ್ಧು ಕುರಿತು ಸೌಮ್ಯವಾಗೇ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: ಪಂಜಾಬ್ ಸರ್ಕಾರದಿಂದ ರಾಜ್ಯದ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ