ಕೇಂದ್ರ ಸರ್ಕಾರದ ಕೃಷಿ ಕಾಯ್ದೆ (Farm Laws) ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿಕೊಂಡಿರುವ ರೈತರಲ್ಲಿ ಕೆಲವರು ರೈಲ್ವೆ ಹಳಿಗಳ ಮೇಲೆ ಕುಳಿತು ಧರಣಿ ನಡೆಸಿದ್ದರು. ಅವರ ವಿರುದ್ಧ ರೈಲ್ವೆ ಸಂರಕ್ಷಣಾ ಪಡೆ (Railway Protection Force) ಪ್ರಕರಣ ದಾಖಲಿಸಿತ್ತು. ಇದೀಗ ಪಂಜಾಬ್ ನೂತನ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿ, ಆ ರೈತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆದಿದ್ದಾರೆ. ರೈಲ್ವೆ ಹಳಿಗಳ ಮೇಲೆ ಕುಳಿತು ಧರಣಿ ನಡೆಸಿದ್ದ ರೈತರ ಮೇಲೆ ದಾಖಲಿಸಿದ ಪೊಲೀಸ್ ಕೇಸ್ಗಳನ್ನು ಹಿಂಪಡೆಯುವಂತೆ ಆದೇಶಿಸಿ ರೈಲ್ವೆ ಸಂರಕ್ಷಣಾ ಪಡೆ (RPF)ಗೆ ಪತ್ರ ಬರೆದಿದ್ದಾರೆ.
ಪಂಜಾಬ್ ನೂತನ ಸಿಎಂ ಚರಣಜಿತ್ ಸಿಂಗ್ ಛನ್ನಿ ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಈ ಭೇಟಿಯ ವೇಳೆ ಮೋದಿ ಮತ್ತು ಚರಣಜಿತ್ ಛನ್ನಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆಯೂ ಚರ್ಚಿಸಿದ್ದಾರೆ. ಹಾಗೇ, ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ನರೇಂದ್ರ ಮೋದಿಯವರ ಬಳಿ ಚರಣಜಿತ್ ಮನವಿ ಮಾಡಿದ್ದಾರೆ. ಪ್ರಧಾನಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಚರಣಜಿತ್ ಸಿಂಗ್ ಛನ್ನಿ, ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಆಂದೋಲನವನ್ನು ಕೊನೆಗೊಳ್ಳಿಸಲು ನಾನು ಪ್ರಧಾನಿಯವರಿಗೆ ಒತ್ತಾಯಿಸಿದ್ದೇನೆ. ನನ್ನ ಮಾತುಗಳನ್ನು ಅವರು ಆಲಿಸಿದ್ದಾರೆ ಮತ್ತು ಈ ಸಮಸ್ಯೆಗೊಂದು ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದರು. ಅಷ್ಟೇ ಅಲ್ಲ, ರೈತರೊಂದಿಗೆ ಮಾತುಕತೆ ಪ್ರಕ್ರಿಯೆ ಮುಂದುವರಿಸಿ ಎಂದೂ ನಾನು ಕೇಳಿಕೊಂಡಿದ್ದೇನೆ. ನನ್ನ ಮನವಿಯನ್ನು ಪುರಸ್ಕರಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ಛನ್ನಿ ತಿಳಿಸಿದ್ದರು.
ಕೇಂದ್ರ ಸರ್ಕಾರ ಕಳೆದ ವರ್ಷ ಜಾರಿಗೊಳಿಸಿದ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಸೇರಿ ಕೆಲವು ರಾಜ್ಯಗಳ ರೈತರು ಹೋರಾಟ ನಡೆಸುತ್ತಿದ್ದಾರೆ. ಅದರಲ್ಲೂ ಪ್ರಸಕ್ತವರ್ಷದ ಫೆಬ್ರವರಿಯಲ್ಲಿ ದೊಡ್ಡ ಮಟ್ಟದಲ್ಲಿ ರೈಲ್ವೆ ಹಳಿಗಳ ಮೇಲೆ ಮಲಗಿ, ಕುಳಿತು ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ರೈಲು ಸಂಚಾರ ರದ್ದುಗೊಂಡಿತ್ತು. ಪಂಜಾಬ್, ದೆಹಲಿ, ಮಹಾರಾಷ್ಟ್ರ, ಹರ್ಯಾಣದಲ್ಲಿ ಈ ರೈಲು ತಡೆ ಚಳವಳಿ ನಡೆದಿತ್ತು.
ಇದನ್ನೂ ಓದಿ: WhatsApp: ನೀವು ವಾಟ್ಸ್ಆ್ಯಪ್ನಲ್ಲಿ ಅಶ್ಲೀಲ ವಿಡಿಯೋ ಕಳುಹಿಸುತ್ತೀರಾ?: ಹಾಗಿದ್ರೆ ತಪ್ಪದೇ ಈ ಸ್ಟೋರಿ ಓದಿ
ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ರಾಷ್ಟ್ರೀಯ ದಿನ; ತೈವಾನ್ನತ್ತ 38 ಚೀನಾ ಮಿಲಿಟರಿ ವಿಮಾನಗಳ ದಾಂಗುಡಿ
Published On - 2:57 pm, Sat, 2 October 21