ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು: ನವಜೋತ್ ಸಿದ್ಧುರನ್ನು ಮಂಗಳವಾರ ಭೇಟಿಯಾಗಲು ನಿರ್ಧರಿಸಿದ ರಾಹುಲ್ ಮತ್ತು ಪ್ರಿಯಾಂಕಾ ವಾದ್ರಾ

|

Updated on: Jun 28, 2021 | 8:55 PM

ರಾಹುಲ್ ಜೊತೆ ಚರ್ಚೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತಾಡಿದ ನಾಯಕರು, ಮುಂದಿನ ವರ್ಷ ಪಂಜಾಬ್​ನಲ್ಲಿ ವಿಧಾನ ಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಪಡಿಸುವ ಬಗ್ಗೆ ಮಾತುಕತೆ ನಡೆಯಿತು ಎಂದು ಹೇಳಿದರು.

ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು: ನವಜೋತ್ ಸಿದ್ಧುರನ್ನು ಮಂಗಳವಾರ ಭೇಟಿಯಾಗಲು ನಿರ್ಧರಿಸಿದ ರಾಹುಲ್ ಮತ್ತು ಪ್ರಿಯಾಂಕಾ ವಾದ್ರಾ
ನವಜೋತ್ ಸಿಂಗ್ ಸಿದ್ಧು
Follow us on

ನವದೆಹಲಿ: ಪಂಜಾಬಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಅವರ ವಿರುದ್ಧ ಅಕ್ಷರಶಃ ಯುದ್ಧ ಸಾರಿರುವ ಪಂಜಾಬಿನ ಅಸಂತುಷ್ಟ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿದ್ಧು ನಡುವಿನ ವಿರಸವನ್ನು ಕೊನೆಗಾಣಿಸಲು ಹಿರಿಯ ನಾಯಕರು ವಿಫಲರಾದ ನಂತರ ಪಕ್ಷದ ಮಾಜಿ ಅಧ್ಯಕ್ಷ ಮತ್ತು ಸಂಸದ ರಾಹುಲ್ ಗಾಂಧಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮಾಜಿ ಕ್ರಿಕೆಟರ್ ಮಂಗಳವಾರದಂದು ಭೇಟಿಯಾಗಲಿದ್ದಾರೆ. ಪಕ್ಷದ ರಾಜ್ಯ ಘಟಕದಲ್ಲಿ ತಲೆದೋರಿರುವ ಬಂಡಾಯ ಮತ್ತು ಬಿಕ್ಕಟ್ಟನ್ನು ಬಗೆಹರಿಸಲು ರಾಹುಲ್ ತಮ್ಮ ದೆಹಲಿ ನಿವಾಸದಲ್ಲಿ ಹಿರಿಯ ಮತ್ತು ಪಂಜಾಬಿನ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಶುಕ್ರವಾರದಂದು ರಾಹುಲ್ ಅವರನ್ನು ಭೇಟಿಯಾದ ನಾಯಕರಲ್ಲಿ ವಿಜೇಂದ್ರ ಸಿಂಗ್ಲ, ರಾಣಾ ಗುರುಜಿತ್ ಸಿಂಗ್, ರಾಜ್ಯಸಭೆ ಸದಸ್ಯ ಶಂಶೇರ್ ಸಿಂಗ್ ಧಿಲ್ಲೋನ್ ಮತ್ತು ಶಾಸಕ ಲಖ್ವೀರ್ ಸಿಂಗ್ ಮೊದಲಾದವರು ಪ್ರಮುಖರು.

ರಾಹುಲ್ ಜೊತೆ ಚರ್ಚೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತಾಡಿದ ನಾಯಕರು, ಮುಂದಿನ ವರ್ಷ ಪಂಜಾಬ್​ನಲ್ಲಿ ವಿಧಾನ ಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಪಡಿಸುವ ಬಗ್ಗೆ ಮಾತುಕತೆ ನಡೆಯಿತು ಎಂದು ಹೇಳಿದರು. ರಾಜ್ಯದ ಇಬ್ಬರು ಪ್ರಮುಖ ನಾಯಕರು ಮತ್ತು ಅವರ ಬಣಗಳ ನಡುವೆ ಜಾರಿಯಲ್ಲಿರುವ ತಿಕ್ಕಾಟ, ಪಕ್ಷವು ಅಧಿಕಾರವನ್ನು ಉಳಿಸಿಕೊಳ್ಳುವ ಅವಕಾಶಗಳ ಮೇಲೆ ಪರಿಣಾಮ ಬೀರಬಹುದಾದ ಆತಂಕವನ್ನು ಈ ನಾಯಕರು ವ್ಯಕ್ತಪಡಿಸಿದರು.

ಅದಕ್ಕೆ ಮೊದಲು, ರಾಹುಲ್, ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಜಾಖರ್, ಪಂಜಾಬಿನ ಹಣಕಾಸು ಸಚಿವ ಮನ್​ಪ್ರೀತ್ ಸಿಂಗ್ ಬಾದಲ್ ಮತ್ತು ಹರೀಶ್ ರಾವತ್ ಅವರನ್ನು ಭೇಟಿಯಾಗಿದ್ದರು
ಪಂಜಾಬ್ ಕಾಂಗ್ರೆಸ್​ನಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಹೈಕಮಾಂಡ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಮೂರು-ಸದಸ್ಯರ ಸಮಿತಿಯನ್ನು ರಚಿಸಿದೆ. ದೆಹಲಿಗೆ ಮೂರು ದಿನಗಳ ಪ್ರವಾಸಕ್ಕೆ ಬಂದಿದ್ದ ಅಮರಿಂದರ್ ಸಿಂಗ್ ಅವರನ್ನು ಸಮಿತಿಯು ಈಗಾಗಲೇ ಭೇಟಿ ಮಾಡಿದೆ. ಆದರೆ ಅಮರಿಂದರ್​ಗೆ ಸೋನಿಯಾ ಗಾಂಧಿ ಮತ್ತು ರಾಹುಲ್​ರನ್ನು ಭೇಟಿಯಾಗುವ ಅವಕಾಶ ಸಿಗಲಿಲ್ಲ.

ತಮ್ಮ ಖಾತೆಯನ್ನು ಬದಲಾಯಿಸಿದ್ದರಿಂದ ಕೋಪಗೊಂಡಿದ್ದ ಸಿದ್ಧು, 2019 ರಲ್ಲಿ ಅಮರಿಂದರ್ ಅವರ ಸಂಪುಟದಿಂದ ಹೊರಬಂದರು. ಅದರೆ ಕಳೆದ ಕೆಲ ತಿಂಗಳುಗಳಿಂದ ಅವರು ಅಮರಿಂದರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. 2015 ರ ಪೊಲೀಸ್ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕಾನೂನಾತ್ಮಕ ಹಿನ್ನಡೆಯಾದ ನಂತರ ಅವರ ದಾಳೀ ಮತ್ತಷ್ಟು ಹರಿತಗೊಂಡಿದೆ.

ಸಾರ್ವಜನಿಕವಾಗಿ ಮುಖ್ಯಮಂತ್ರಿಗಳನ್ನು ಸುಳ್ಳುಗಾರ ಎಂದು ಜರಿದಿರುವ ಸಿದ್ಧು, ಸಾಲ ಮನ್ನಾ ಮತ್ತು ಇತರ ಪ್ರಮುಖ ಅಂಶಗಳಿಗೆ ಸಂಬಂಧಿಸಿದಂತೆ ಸರ್ಕಾರದ ನಿಷ್ಕ್ರಿಯತೆ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡಿರುವ ಕೆಲವೇ ರಾಜ್ಯಗಳಲ್ಲಿ ಪಂಜಾಬ ಒಂದಾಗಿದ್ದು ಅಲ್ಲಿ ನಡೆಯುವ ವಿಧಾನ ಸಭೆ ಚುನಾವಣೆಯ ಫಲಿತಾಂಶಗಳು ದೇಶದ ಇತರ ಭಾಗಗಳ ಮೇಲೆ ಪ್ರಭಾವ ಬೀರಲಿವೆ.

ಇದನ್ನೂ ಓದಿ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ಭುಗಿಲೆದ್ದ ಅಸಮಾಧಾನ, ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ