ಗಂಗಾ ನದಿಯಲ್ಲಿ ಮೃತದೇಹ ತೇಲಿ ಬಂದಿರುವ ವಿಚಾರ ಅತ್ಯಂತ ಗಂಭೀರವಾದುದು: ಸುಪ್ರೀಂಕೋರ್ಟ್
ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಹೇಮಂತ್ ಗುಪ್ತಾ ಅವರ ಎರಡು ಸದಸ್ಯರ ಪೀಠವು ಅರ್ಜಿದಾರರಿಗೆ ಎನ್‌ಎಚ್‌ಆರ್‌ಸಿಯನ್ನು ಸಂಪರ್ಕಿಸುವಂತೆ ನಿರ್ದೇಶನ ನೀಡಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಕೆಲವು ನಿರ್ದೇಶನಗಳನ್ನು ನೀಡಿದೆ.
ದೆಹಲಿ: ಕಳೆದ ತಿಂಗಳು ಎರಡನೇ ಕೊವಿಡ್ ಅಲೆಯ ಉತ್ತುಂಗದಲ್ಲಿದ್ದಾಗ ಗಂಗಾ ನದಿಯಲ್ಲಿ ತೇಲಿ ಬಂದ ಮೃತದೇಹಗಳ ಭೀಕರ ನೋಟ “ಅತ್ಯಂತ ಗಂಭೀರ ಸಮಸ್ಯೆ” ಎಂದು ಸುಪ್ರೀಂಕೋರ್ಟ್ ಸೋಮವಾರ ತಿಳಿಸಿದೆ. ಮೃತರ ಹಕ್ಕುಗಳನ್ನು ರಕ್ಷಿಸಲು ನೀತಿಗಳನ್ನು ರೂಪಿಸುವುದರ ಬಗ್ಗೆ ಅರ್ಜಿ ಆಲಿಸುವ ವೇಳೆ ನ್ಯಾಯಾಲಯ ಈ ರೀತಿ ಹೇಳಿದೆ. ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಹೇಮಂತ್ ಗುಪ್ತಾ ಅವರ ಎರಡು ಸದಸ್ಯರ ಪೀಠವು ಅರ್ಜಿದಾರರಿಗೆ ಎನ್‌ಎಚ್‌ಆರ್‌ಸಿಯನ್ನು ಸಂಪರ್ಕಿಸುವಂತೆ ನಿರ್ದೇಶನ ನೀಡಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಕೆಲವು ನಿರ್ದೇಶನಗಳನ್ನು ನೀಡಿದೆ.
“ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಂದೆ ಹೋಗಿ. ನೀವು ಎಷ್ಟು ವೇದಿಕೆಗಳನ್ನು ಸಂಪರ್ಕಿಸಬಹುದು? ಇದು ಗಂಭೀರ ಸಮಸ್ಯೆ. ನಮಗೆ ತಿಳಿದಿದೆ. ಅದೃಷ್ಟವಶಾತ್ ಈಗ ಪರಿಸ್ಥಿತಿ ಇಲ್ಲ. ನೀವು ಎನ್‌ಎಚ್‌ಆರ್‌ಸಿ ಶಿಫಾರಸುಗಳನ್ನು ಉಲ್ಲೇಖಿಸಿದ್ದೀರಿ . ಎನ್‌ಎಚ್‌ಆರ್‌ಸಿಗೆ ಹೋಗಿ” ಎಂದು ನ್ಯಾಯಪೀಠ ಹೇಳಿದೆ.
ಕಳೆದ ತಿಂಗಳು ಹೊರಡಿಸಲಾದ ಈ ಶಿಫಾರಸುಗಳಲ್ಲಿ “ಮೃತರ ಹಕ್ಕುಗಳನ್ನು ರಕ್ಷಿಸಲು ನಿರ್ದಿಷ್ಟವಾದ ಶಾಸನವನ್ನು” ಜಾರಿಗೊಳಿಸುವುದು ಮತ್ತು ತಾತ್ಕಾಲಿಕ ಶವಾಗಾರಗಳನ್ನು ಸ್ಥಾಪಿಸುವುದು ಒಳಗೊಂಡಿತ್ತು. ಕೊವಿಡ್ ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಹೆಚ್ಚಿನ ಶುಲ್ಕ ವಿಧಿಸುವುದರ ವಿರುದ್ಧ ಕ್ರಮ ಸೇರಿದಂತೆ ಮೃತರ ಹಕ್ಕುಗಳನ್ನು ರಕ್ಷಿಸಲು ನೀತಿಗಳನ್ನು ರೂಪಿಸುವಲ್ಲಿ ಸಹಾಯಕ್ಕಾಗಿ ಅರ್ಜಿದಾರರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ವಾದದಲ್ಲಿ ಅರ್ಜಿದಾರ ಡಿಸ್ಟ್ರೆಸ್ ಮ್ಯಾನೇಜ್ಮೆಂಟ್ ಕಲೆಕ್ಟಿವ್ ಎಂಬ ಎನ್ಜಿಒ ಮೇ ತಿಂಗಳಲ್ಲಿ ಗಂಗಾದಲ್ಲಿ ಎಸೆಯಲ್ಪಟ್ಟ ಕೋವಿಡ್ ನಿಂದದ ಮೃತಪಟ್ಟ ಜನರ ಮೃತದೇಹಗಳನ್ನು ಉಲ್ಲೇಖಿಸಿದೆ.
ಮೇ ಆರಂಭದಲ್ಲಿ ಎರಡನೇ ಅಲೆಯದ ಉತ್ತುಂಗವಿದ್ದಾಗ ಪ್ರತಿದಿನ (ಅಧಿಕೃತವಾಗಿ) 3,000-4,000 ಕೊವಿಡ್ ಸಂಬಂಧಿತ ಸಾವುಗಳು ವರದಿಯಾಗುತ್ತಿದ್ದವು ,ಶಂಕಿತ ಕೊರೊನಾವೈರಸ್ ರೋಗಿಗಳ ಶವಗಳು ಬಿಹಾರ ಮತ್ತು ಉತ್ತರ ಪ್ರದೇಶದ ಗಂಗಾ ತೀರದಲ್ಲಿ ಪತ್ತೆಯಾಗದ್ದವು.
ಶವಗಳು ಗ್ರಾಮೀಣ ಪ್ರದೇಶದ ಕೊವಿಡ್ ಸಂತ್ರಸ್ತರು ಎಂದು ಶಂಕಿಸಲಾಗಿದೆ. ಅಲ್ಲಿ,ಪ್ರೋಟೋಕಾಲ್ಗಳ ಅನುಪಸ್ಥಿತಿಯಲ್ಲಿ ವೈರಸ್ ಹರಡುತ್ತದೆ ಎಂಬ ಭಯದಿಂದ ಸ್ಥಳೀಯರು ಶವಗಳನ್ನು ನದಿಗೆ ಎಸೆದರು. ಆರಂಭದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮೃತದೇಹಗಳು ತೇಲಿ ಬಂದಿದ್ದು ಸಾರ್ವಜನಿಕ ಆರೋಗ್ಯದ ಭೀತಿಯನ್ನು ಹುಟ್ಟುಹಾಕಿತು. ಅದೇ ವೇಳೆ ಉತ್ತರ ಪ್ರದೇಶ ಮತ್ತು ಬಿಹಾರ ಸರ್ಕಾರಗಳ ನಡುವೆ ರಾಜಕೀಯ ಆಪಾದನೆಯೂ ನಡೆಯಿತು . ಭಯಭೀತರಾದ ಮತ್ತು ಕೋಪಗೊಂಡ ಸ್ಥಳೀಯರು ಎರಡೂ ರಾಜ್ಯಗಳನ್ನು ದೂಷಿಸಿದರು. ಉತ್ತರ ಪ್ರದೇಶ ಮತ್ತು ಬಿಹಾರದ ಆಂಬ್ಯುಲೆನ್ಸ್ ಚಾಲಕರು ಶವಗಳನ್ನು ಎಸೆಯುತ್ತಾರೆ ಎಂದು ನಿವಾಸಿ ಅರವಿಂದ್ ಸಿಂಗ್ ಹೇಳಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಶವಸಂಸ್ಕಾರಗಳಿಗೆ ಉರುವಲಿನ ಅತಿಯಾದ ಬೆಲೆಯಿಂದಾಗಿ ಜನರು ಶವಗಳನ್ನು ಎಸೆಯುತ್ತಿದ್ದಾರೆ ಎಂಬ ವರದಿಗಳು ಬಂದಿದ್ದರೂ ಸರ್ಕಾರ ನಿರಾಕರಿಸಿದವು. ಗಂಗಾದಲ್ಲಿ ಶವಗಳನ್ನು ಎಸೆಯಲಾಗುವುದರ ಬೆನ್ನಲ್ಲೇ ನದಿ ತೀರದಲ್ಲಿ ಆಳವಿಲ್ಲದ ತರಾತುರಿಯಲ್ಲಿ ಅಗೆದು ಹೂಳಲಾಗಿದ್ದ ಶವಗಳೂ ಮೇಲೇಳಲು ಆರಂಭಿಸಿದವು. ಅಂತ್ಯ ಸಂಸ್ಕಾರ ಕ್ರಿಯೆಗಳೂ ದರೋಡೆ ರೂಪ ಪಡೆದವು.
ಕೇಂದ್ರ ಸರ್ಕಾರವು ಮೇ ಮಧ್ಯದಲ್ಲಿ ಮಧ್ಯ ಪ್ರವೇಶಿಸಿ ಬಿಹಾರ ಮತ್ತು ಉತ್ತರ ಪ್ರದೇಶ ಎರಡೂ ರಾಜ್ಯಗಳು ಶವಗಳನ್ನು ಮತ್ತಷ್ಟು ಎಸೆಯುವುದನ್ನು ತಡೆಯಲು ಮತ್ತು ಗೌರವಾನ್ವಿತ ದಹನ ಮತ್ತು ಅವಶೇಷಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ಬಗ್ಗೆ ಗಮನಹರಿಸಿತು.
ಏತನ್ಮಧ್ಯೆ, ಇಂದು ಸುಪ್ರೀಂ ಕೋರ್ಟ್ನಲ್ಲಿ ನಡೆದ ಮತ್ತೊಂದು ವಿಚಾರಣೆಯಲ್ಲಿ, ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ಗಂಗಾ ಮೇಲೆ ತೇಲುತ್ತಿರುವ ಶವಗಳಿಗೆ ಕಾರಣವಾದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕೆಂದು ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ) ಕೇಳಲು ನಿರಾಕರಿಸಿತು.
ಇದನ್ನೂ ಓದಿ: ಪವಿತ್ರ ಗಂಗಾ ನದಿಯಲ್ಲಿ 2000 ಕೊರೊನಾ ಮೃತದೇಹಗಳು.?
(Bodies Found Floating In Ganga is a serious problem says Supreme Court)