ಚಂಡೀಗಡ: ‘ನಮ್ಮ ಪೋಷಕರನ್ನು ನಾವು ದೇವರಂತೆ ಕಾಣಬೇಕು’ ಎಂದು ತಂದೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ಮಗನಿಗೆ ಕಿವಿಮಾತು ಹೇಳಿದ ಪಂಜಾಬ್-ಹರ್ಯಾಣ ಹೈಕೋರ್ಟ್ನ ನ್ಯಾಯಾಧೀಶರು, ‘ಮನೆಯ ರಿಪೇರಿಗೆಂದು ಹಣ ಖರ್ಚು ಮಾಡಿದ ಮಾತ್ರಕ್ಕೆ ಮಗನಿಗೆ ತಂದೆಯ ಮನೆಯ ಮೇಲೆ ಹಕ್ಕು ಬರುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದೆ. ಮಗ ಮತ್ತು ಆತನ ಪತ್ನಿಯೇ ತಂದೆಯ ಮನೆಯಿಂದ ಹೊರ ನಡೆಯಬೇಕು ಎಂಬ ಆದೇಶವನ್ನು ದೃಢಪಡಿಸಿದ ಹೈಕೋರ್ಟ್, ‘ಪೋಷಕರು ಮತ್ತು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗೆ ಕಾಯ್ದೆ, 2007 (ಹಿರಿಯ ನಾಗರಿಕರ ಕಾಯ್ದೆ)’ ಅನ್ವಯ ತೆರವು ಆದೇಶವು ಸಿಂಧು ಆಗುತ್ತದೆ ಎಂದು ಅಭಿಪ್ರಾಯಪಟ್ಟಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆಯು ಮನೆಯನ್ನು ಗಿಫ್ಟ್ ಅಥವಾ ಇತರ ಯಾವುದೇ ಮಾರ್ಗದ ಮೂಲಕ ಮಗನ ಹೆಸರಿಗೆ ಹಸ್ತಾಂತರಿಸಿಲ್ಲ. ಮನೆಯ ರಿಪೇರಿಗೆ ಹಣ ಖರ್ಚು ಮಾಡಿದ್ದೇವೆ ಎಂದು ಮಗ ಹಕ್ಕು ಸ್ಥಾಪನೆಗೆ ಮುಂದಾಗಿದ್ದಾರೆ. ಆದರೆ ಈ ಹಕ್ಕುಸ್ಥಾಪನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.
ಮಕ್ಕಳು ತಮ್ಮ ತಂದೆ-ತಾಯಿಯರನ್ನು ಅವರಷ್ಟಕ್ಕೆ ಬಿಟ್ಟು, ಹಿಂಸೆ ಕೊಡಲು ಶುರು ಮಾಡಿದರೆ ಪೋಷಕರು ಕಂಪಿಸುವುದಿಲ್ಲವೇ. ಇಂಥ ಸಂದರ್ಭಗಳಲ್ಲಿ ಪೋಷಕರು ಅಸಹಾಯಕ ಸ್ಥಿತಿ ತಲುಪುತ್ತಾರೆ. ಕಷ್ಟ ಪರಿಹರಿಸಿಕೊಳ್ಳಲು ಒಂದು ವೇದಿಕೆಯಿಂದ ಮತ್ತೊಂದು ಸಂಸ್ಥೆಗೆ ಎಡತಾಕುತ್ತಾರೆ. ಬದುಕು ಎನ್ನುವುದು ಅಸಾಧಾರಣ ಸವಾಲುಗಳು ಮತ್ತು ಅವಕಾಶಗಳಿಂದ ತುಂಬಿದೆ. ಆದರೆ ಇಂಥ ಅವಕಾಶಗಳನ್ನು ನೀವು ನಿಮ್ಮ ಪೋಷಕರ ವಿರುದ್ಧ ಬಳಸಿಕೊಳ್ಳಬಾರದು ಎಂದು ನ್ಯಾಯಾಲಯವು ತಿಳಿಸಿತು.
ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್ನ ವಾಕ್ಯವೊಂದನ್ನು ಉದ್ಧರಿಸಿದ ನ್ಯಾಯಾಲಯವು, ಮಕ್ಕಳು ತಮ್ಮ ಪೋಷಕರನ್ನು ದೇವರಂತೆ ಕಾಣಬೇಕು ಎಂದು ಹೇಳಿತು. ‘ಗುರು ಗ್ರಂಥ ಸಾಹಿಬ್ನಲ್ಲಿ ಶ್ರೀ ಗುರು ರಾಮ್ ದಾಸ್ ಹೀಗೆ ಬರೆದಿದ್ದಾರೆ. ‘ಓ ಮಗನೇ, ನಿನ್ನ ತಂದೆಯ ಜೊತೆಗೆ ನೀನೇಕೆ ವಾದ ಮಾಡುತ್ತೀ? ನಿನ್ನನ್ನು ಬೆಳೆಸಿದವನೊಂದಿಗೆ ವಾದ ಮಾಡುವುದು ಪಾಪ’. ಪೋಷಕರನ್ನು ದೇವರಂತೆ ಕಾಣಬೇಕು ಎನ್ನಲು ಇಂಥ ವಾಕ್ಯಗಳು ನಮಗೆ ಮಾರ್ಗದರ್ಶಿಯಾಗಬೇಕು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.
(Punjab Haryana High Court Denies Sons Plea to Stay in Fathers House)
ಇದನ್ನೂ ಓದಿ: Senior Citizens IT Returns: ಹಿರಿಯ ನಾಗರಿಕರು ಐಟಿ ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ; ಷರತ್ತುಗಳು ಅನ್ವಯ
ಇದನ್ನೂ ಓದಿ: Senior Citizens Fixed Deposits: ಹಿರಿಯ ನಾಗರಿಕರಿಗೆ ಶೇ 7.25ರ ತನಕ ಬಡ್ಡಿ ದರ ನೀಡುವ ಟಾಪ್ 5 ಬ್ಯಾಂಕ್ಗಳಿವು