ರಾಜರ ಕಾಲದಲ್ಲಿ ಯುದ್ಧದ ಸಮಯದಲ್ಲಿ ಸಾವಿರಾರು ಆನೆ, ಕುದುರೆಗಳು(Horse) ಮೃತಪಟ್ಟವು ಎಂಬ ಬಗ್ಗೆ ನಾವು ಓದಿರುತ್ತೇವೆ. ಆದ್ರೆ ಮಹಾರಾಜ ರಂಜಿತ್ ಸಿಂಗ್(Maharaja Ranjit Singh) ಅವರ ಕಾಲದಲ್ಲಿ ಒಂದೇ ಒಂದು ಕುದುರೆಗಾಗಿ ಅನೇಕರು ಮೃತಪಟ್ಟಿದ್ದಾರೆ(Asp e Laila). ಭಾರೀ ನಷ್ಟ ಸಂಭವಿಸಿದೆ ಎಂದ್ರೆ ನೀವು ನಂಬಲೇ ಬೇಕು. ಹೌದು ಮಹಾರಾಜ ರಂಜಿತ್ ಸಿಂಗ್ ಅವರಿಗೆ ಕುದುರೆ ಹಾಗೂ ಕುದುರೆ ಸವಾರಿ ಎಂದರೆ ಎಲ್ಲಿಲ್ಲದ ಪ್ರೀತಿ. ಮಹಾರಾಜ ರಂಜಿತ್ ಸಿಂಗ್ ಅವರ ಬಳಿ 12 ಸಾವಿರ ಕುದುರೆಗಳಿದ್ದವು. ಈ ಪೈಕಿ 1 ಸಾವಿರ ಕುದುರೆಗಳನ್ನು ಕೇವಲ ಕುದುರೆ ಸವಾರಿಗಾಗಿಯೇ ಬಳಸುತ್ತಿದ್ದರಂತೆ. ಅವರಿಗೆ ಇಷ್ಟ ಆಗುವ ಕುದುರೆಯನ್ನು ಪಡೆಯಲು ಅವರು ಯಾವ ಹಂತಕ್ಕೆ ಬೇಕಾದ್ರು ಹೋಗುತ್ತಿದ್ದರಂತೆ. ಕುದುರೆಗಳಿಗಾಗಿ ಯುದ್ಧಗಳೇ ನಡೆಯುತ್ತಿದ್ದವಂತೆ, ರಕ್ತವೇ ಹರಿಯುತ್ತಿತ್ತಂತೆ. ಇವರ ಬಳಿ ಇದ್ದ ಯಾವ ಕುದುರೆಯೂ 20 ಸಾವಿರ ರೂಗಳಿಗಿಂತ ಕಡಿಮೆ ಇರಲಿಲ್ಲ.
ತಮ್ಮ ಸಾಮ್ರಾಜ್ಯಕ್ಕೆ ಬರುವ ಹೆಚ್ಚಿನ ಅತಿಥಿಗಳೊಂದಿಗೆ ಮಹಾರಾಜ ರಂಜಿತ್ ಸಿಂಗ್ ಅವರು ಹೆಚ್ಚಾಗಿ ಕುದುರೆಗಳ ಬಗ್ಗೆ ಚರ್ಚಿಸುತ್ತಿದ್ದರು. ಒಳ್ಳೆಯ ತಳಿಯ ಕುದುರೆಗಳು, ಅಪರೂಪದ ಕುದುರೆಗಳು ಸಿಕ್ಕಿದ್ರೆ ಅವನ್ನು ತಮ್ಮದಾಗಿಸಿಕೊಳ್ಳುವವರೆಗೆ ಅವರಿಗೆ ಸಮಾಧಾನವಿರುತ್ತಿರಲಿಲ್ಲ. ಸ್ನೇಹಿತರಿಂದ ಸಂಬಂಧಿಕರವರೆಗೆ ಎಲ್ಲರಿಗೂ ಈ ವಿಚಾರ ತಿಳಿದಿತ್ತು. ಮಹಾರಾಜ ರಂಜಿತ್ ಸಿಂಗ್ ತಮ್ಮ ಕುದುರೆಗಳಿಗೆ ಮನುಷ್ಯರ ಹೆಸರನ್ನು ಇಡುತ್ತಿದ್ದರು. ರೂಹಿ, ನಸೀಮ್, ಗೌಹರ್ ಇತ್ಯಾದಿ. ಆದರೆ ಲೈಲಾ ಎಂಬ ಕುದುರೆಯ ಹೆಸರು ಮಾತ್ರ ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಈ ಕುದುರೆಯನ್ನು ಪಡೆಯಲು ರಂಜಿತ್ ಸಿಂಗ್ ತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ.
ಬ್ರಿಟಿಷನೊಬ್ಬ ಹೈದರಾಬಾದ್ ನಿಜಾಮನಿಗೆ ಅಪಾರ ಸಂಖ್ಯೆಯ ಅರೇಬಿಯನ್ ಕುದುರೆಗಳನ್ನು ಉಡುಗೊರೆಯಾಗಿ ನೀಡಿದ್ದ. ಈ ವಿಚಾರ ಮಹಾರಾಜ ರಂಜಿತ್ ಸಿಂಗ್ ಅವರ ಕಿವಿಗೆ ಬೀಳುತ್ತೆ. ಬಳಿಕ ರಂಜಿತ್ ಸಿಂಗ್ ಅವರು ನಿಜಾಮನಿಗೆ ಕೆಲವು ಕುದುರೆಗಳನ್ನು ಕಳುಹಿಸಬೇಕೆಂದು ಸಂದೇಶವನ್ನು ಕಳುಹಿಸುತ್ತಾರೆ. ಆದರೆ ನಿಜಾಮನು ಬೇಡಿಕೆಯನ್ನು ನಿರಾಕರಿಸುತ್ತಾನೆ. ಇದು ರಂಜಿತ್ ಸಿಂಗ್ ಅವರನ್ನು ಕೆರಳಿಸುತ್ತದೆ. ನಿಜಾಮನ ನಿರಾಕರಣೆಗೆ ಕೋಪಗೊಂಡ ರಂಜಿತ್ ಸಿಂಗ್ ನಿಜಾಮರ ಮೇಲೆ ಯುದ್ಧ ಸಾರಿ ಅವರ ಸುಲ್ತಾನನನ್ನು ವಶಪಡಿಸಿಕೊಂಡನು. ಇದು ರಂಜಿತ್ ಸಿಂಗ್ ಅವರಿಗೆ ಕುದುರೆಗಳ ಮೇಲಿದ್ದ ಪ್ರೀತಿಗೆ ಉತ್ತಮ ಉದಾಹರಣೆ.
ಇನ್ನು ಮತ್ತೊಂದು ದಿನ ಲೈಲಾ ಎಂಬ ಕುದುರೆಯ ಸೌಂದರ್ಯದ ಸುದ್ದಿ ರಂಜಿತ್ ಸಿಂಗ್ ತಲುಪಿತು. ಅಫ್ಘಾನಿಸ್ತಾನದಿಂದ ಪರ್ಷಿಯಾವರೆಗೂ ಲೈಲಾಳ ಚರ್ಚೆಗಳೇ ಆಗುತ್ತಿದ್ದವು. ಈ ರೀತಿ ಭಾರಿ ಸದ್ದು ಮಾಡಿದ್ದ ಲೈಲಾ ಎಂಬ ಕುದುರೆ ಇದ್ದದ್ದು ಪಾಕಿಸ್ತಾನ ಬಳಿಕ ಪೇಶಾವರದ ದೊರೆ ಯಾರ್ ಮೊಹಮ್ಮದ್ ಅವರ ಬಳಿ. ಮೊಹಮ್ಮದ್, ರಂಜಿತ್ ಸಿಂಗ್ ಅವರಿಗೆ ತೆರಿಗೆ ಸಂಗ್ರಹಿಸುತ್ತಿದ್ದ. ಅಚ್ಚರಿ ಎಂದರೆ ಆ ಅವಧಿಯಲ್ಲೇ ಮೊಹಮ್ಮದ್ ಅವರ ಬಳಿ ಇದ್ದ ಲೈಲಾ ಕುದುರೆಯನ್ನು 50 ಸಾವಿರ ರೂಪಾಯಿಗೆ ಖರೀದಿಸಲು ಅನೇಕ ರಾಜರು ಮುಗಿಬಿದ್ದಿದ್ದರು. ಆದ್ರೆ ಮೊಹಮ್ಮದ್ ಕುದುರೆ ಮಾರಾಟ ಮಾಡಲು ತಿರಸ್ಕರಿಸಿದ್ದರು. ಅಲ್ಲದೆ ಲೈಲಾಳನ್ನು ರಂಜಿತ್ ಸಿಂಗ್ ಅವರಿಗೆ ಮಾರಲು ಮೊಹಮ್ಮದನಿಗೆ ಇಷ್ಟ ಇರಲಿಲ್ಲ. ಲೈಲಾ ಕುದುರೆ ಅವನ ಹೆಮ್ಮೆ ಆಗಿತ್ತು. ಹೀಗಾಗಿ ಕಳೆದುಕೊಳ್ಳಲು ಇಷ್ಟ ಇರಲಿಲ್ಲ.
ಇದನ್ನೂ ಓದಿ: 25 ನೇ ವಯಸ್ಸಿನಲ್ಲೇ 20 ಮದುವೆ, ಹೆಂಡತಿಯರನ್ನು ನೋಡಿಕೊಳ್ಳಲು ಸೇವಕಿಯರನ್ನು ನೇಮಿಸಿದ್ದ ಈ ಮೊಘಲ್ ದೊರೆ
ಇತಿಹಾಸಕಾರ ಕನ್ಹಯ್ಯಾ ಲಾಲ್ ಪ್ರಕಾರ, ರಣಜಿತ್ ಸಿಂಗ್ ಅವರು 1823 ರಲ್ಲಿ ಲೈಲಾ ಬಗ್ಗೆ ತಿಳಿದಾಗ, ಅವರು ಲೈಲಾಳನ್ನು ಹುಡುಕಲು ತನ್ನ ಸೇನೆಯನ್ನು ಕಳಿಸಿದ್ದರಂತೆ. ಇದು ತಿಳಿಯುತ್ತಿದ್ದಂತೆ ಮೊಹಮ್ಮದ್ ಲೈಲಾಳನ್ನು ಕಾಬೂಲ್‌ಗೆ ಕಳುಹಿಸಿದನಂತೆ. ಒಂದು ಕಡೆ ಲೈಲಾಗಾಗಿ ಹುಡುಕಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಅರಮನೆಯಲ್ಲಿ ಮಹಾರಾಜ ರಂಜಿತ್ ಸಿಂಗ್ ವೇದನೆಯನ್ನು ಅನುಭವಿಸುತ್ತಿದ್ದರು. ತಾವು ಪಡೆಯಲೇ ಬೇಕೆಂದು ಕೊಂಡ ಕುದುರೆಯನ್ನು ಕಳೆದುಕೊಳ್ಳತ್ತೇನೆಯೇ ಎಂಬ ನೋವು ಅವರನ್ನು ಕಾಡುತ್ತಿತ್ತಂತೆ. ಇದನ್ನು ಕಂಡ ಅವರ ಹಿತೈಷಿಗಳು ಅವರನ್ನು ಮೆಚ್ಚಿಸಲು, ಬೇರೊಂದು ಕುದುರೆಯನ್ನು ಲೈಲಾ ಎಂದು ನೀಡಿದರಂತೆ. ಆದ್ರೆ ಅದು ಸುಳ್ಳೆಂದು ಬೇಗ ತಿಳಿದುಹೋಯಿತು.
ಮೊಹಮ್ಮದನಿಗೆ ಲೈಲಾಳನು ರಂಜಿತ್ ಸಿಂಗ್ಗೆ ಒಪ್ಪಿಸಲು ಇಷ್ಟವಿರಲಿಲ್ಲ. ಅದಕ್ಕಾಗಿ ಆ ಸಮಯದಲ್ಲಿ ರಣಜಿತ್ ಸಿಂಗ್ ಜೊತೆ ಯುದ್ಧ ಮಾಡುತ್ತಿದ್ದ ಸಯಬ್ ಅಹಮದ್ ಬರೇಲ್ವಿಯವರನ್ನು ಹೋಗಿ ಭೇಟಿಯಾದ. ಬಳಿಕ 1826 ರಲ್ಲಿ ಲೈಲಾಳನ್ನು ಪಡೆಯಲು ಮಹಾರಾಜ ರಂಜಿತ್ನ ಒಂದು ತಂಡವು ಸೈಯದ್ ಅಹ್ಮದ್ ಬಳಿ ತಲುಪಿತು. ಆದರೆ ಕುದುರೆ ನೀಡಲು ಸೈಯದ್ ಅಹಮದ್ ನಿರಾಕರಿಸಿದ. ಆಗ ಯುದ್ಧವೇ ಶುರುವಾಯಿತು. ಮೊಹಮ್ಮದ್, ಲೈಲಾ ಸತ್ತಳೆಂದು ಹೇಳಿದರೂ ರಂಜಿತ್ ಸಿಂಗ್ ಒಪ್ಪಲಿಲ್ಲ. ಕೊನೆಗೊಂದು ದಿನ ಲೈಲಾ ಸಿಕ್ಕಿದಾಗ ಮಹಾರಾಜ ರಂಜಿತ್ ಸಿಂಗ್ ಕುದುರೆಯನ್ನು ಅಪ್ಪಿ ಕಣ್ಣೀರು ಹಾಕಿದ್ದರು.
ಕೆಲ ಇತಿಹಾಸಗಾರರ ಪ್ರಕಾರ, ಲೈಲಾಳನ್ನು ಪೇಶಾವರದಿಂದ ಪಂಜಾಬ್‌ಗೆ 500 ಸೈನಿಕರೊಂದಿಗೆ ಬಿಗಿ ಭದ್ರತೆಯಲ್ಲಿ ಕರೆತರಲಾಯಿತು. ಲಾಹೋರ್ನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಲೈಲಾಳಿಗೆ ಕೊಹಿನೂರು ವಜ್ರ ತೊಡಿಸಿ ಅದ್ಧೂರಿ ಸ್ವಾಗತದಿಂದ ಸಿಖ್ರ ರಾಜಧಾನಿಗೆ ಕರೆತರಲಾಯಿತು. ಲೈಲಾ ಕುದುರೆ, ಮಹಾರಾಜ ರಂಜಿತ್ ಸಿಂಗ್ರ ಅಚ್ಚುಮೆಚ್ಚಿನ ಕುದುರೆಯಾಯಿತು. ಲೈಲಾಳನ್ನು ಪಡೆಯಲು ರಂಜಿತ್ ಸಿಂಗ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಪಟ್ಟ ಏರಿ 19 ವಯಸ್ಸಿನವರಿರುವಾಗಲೇ ಯುದ್ಧ ಭೂಮಿಗೆ ಇಳಿದು ಸಿಡುಬು ರೋಗದಿಂದ ಒಂದು ಕಣ್ಣನ್ನು ಕಳೆದುಕೊಂಡರೂ ಉತ್ತಮ ರಾಜನಾಗಿ ಮೆರೆದು ಸರ್ವ ಧರ್ಮ ಪಾಲಕನಾಗಿ ಸಿಖ್ರ ಮುಖ್ಯಸ್ಥನಾಗಿದ್ದ ಮಹಾರಾಜ ರಂಜಿತ್ ಸಿಂಗ್ಗೆ ಕುದುರೆ ಅಂದ್ರೆ ಸರ್ವಸ್ವ.