25 ನೇ ವಯಸ್ಸಿನಲ್ಲೇ 20 ಮದುವೆ, ಹೆಂಡತಿಯರನ್ನು ನೋಡಿಕೊಳ್ಳಲು ಸೇವಕಿಯರನ್ನು ನೇಮಿಸಿದ್ದ ಈ ಮೊಘಲ್ ದೊರೆ

Mughal History: ಮೊಘಲ್ ಚಕ್ರವರ್ತಿ ಜಹಾಂಗೀರ್ ಎಲ್ಲ ರಾಜರಂತಲ್ಲ. ತನ್ನ ಪ್ರತಿಯೊಬ್ಬ ಪತ್ನಿಯರನ್ನು ಹೂವಿನಂತೆ ನೋಡಿಕೊಳ್ಳುತ್ತಿದ್ದನಂತೆ. ಅವರ ಆರೈಕೆಗಾಗಿ ವಿಶೇಷ ಕಾಳಜಿವಹಿಸುತ್ತಿದ್ದನಂತೆ. ಪ್ರತಿ ಒಬ್ಬ ಹೆಂಡತಿಯನ್ನು ನೋಡಿಕೊಳ್ಳಲು 20 ಸೇವಕಿಯರನ್ನು ಸಂಬಳ ಕೊಟ್ಟು ನೇಮಿಸಿದ್ದನಂತೆ.

25 ನೇ ವಯಸ್ಸಿನಲ್ಲೇ 20 ಮದುವೆ, ಹೆಂಡತಿಯರನ್ನು ನೋಡಿಕೊಳ್ಳಲು ಸೇವಕಿಯರನ್ನು ನೇಮಿಸಿದ್ದ ಈ ಮೊಘಲ್ ದೊರೆ
ಮೊಗಲ್​ ದೊರೆ ಜಹಾಂಗೀರ್​
Follow us
ಆಯೇಷಾ ಬಾನು
| Updated By: ವಿವೇಕ ಬಿರಾದಾರ

Updated on:Aug 11, 2023 | 6:56 AM

ಹದಿನಾರನೇ ಶತಮಾನದಿಂದ ಹತ್ತೊಂಬತ್ತನೇ ಶತಮಾನದವರೆಗೆ ಆಳ್ವಿಕೆ ನಡೆಸಿದ ಮೊಘಲ್ ರಾಜವಂಶದ ನಾಲ್ಕನೇ ಚಕ್ರವರ್ತಿ ಜಹಾಂಗೀರನ ವ್ಯಕ್ತಿತ್ವದ ಬಗ್ಗೆ ಇತಿಹಾಸಕಾರರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಪಾಶ್ಚಾತ್ಯ ಇತಿಹಾಸಕಾರರು ಜಹಾಂಗೀರನನ್ನು ಐಷಾರಾಮಿ ಮತ್ತು ಅಸಮರ್ಥ ಆಡಳಿತಗಾರ ಎಂದು ಬಣ್ಣಿಸಿದ್ದಾರೆ, ಕೆಲ ಇತಿಹಾಸಕಾರರು ಈತ ಜನರ ಕಲ್ಯಾಣಕ್ಕಾಗಿ ನಿಂತಿದ್ದ. ನ್ಯಾಯಯುತ ಮತ್ತು ಬುದ್ಧಿವಂತ ಆಡಳಿತಗಾರ ಎಂದು ಬಣ್ಣಿಸಿದ್ದಾರೆ. ಆದ್ರೆ ಇವೆಲ್ಲದರ ಹೊರತಾಗಿ ಜಹಾಂಗೀರ್ ತನ್ನ ಎಲ್ಲಾ ಪತ್ನಿಯರ ನ್ನು ಹೃದಯದಾಳದಲ್ಲಿಟ್ಟು ಪ್ರೀತಿಸುತ್ತಿದ್ದ. ಈತ ತನ್ನ ಹೆಂಡತಿಯರನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದನಂತೆ. ಈ ಆರ್ಟಿಕಲ್​ನಲ್ಲಿ ಜಹಾಂಗೀರ್​ನ​ ಪತ್ನಿ ಪ್ರೇಮದ ಬಗ್ಗೆ ತಿಳಿಸಿಕೊಡಲಿದ್ದೇವೆ.

ಆಗಿನ ಕಾಲದಲ್ಲಿ ಒಬ್ಬ ರಾಜನಿಗೆ ಅನೇಕ ಹೆಂಡತಿಯರಿದ್ದದ್ದು ಸಾಮಾನ್ಯ ಸಂಗತಿ. ಆದ್ರೆ ಮೊಘಲ್ ಚಕ್ರವರ್ತಿ ಜಹಾಂಗೀರ್ ಎಲ್ಲ ರಾಜರಂತಲ್ಲ. ತನ್ನ ಪ್ರತಿಯೊಬ್ಬ ಪತ್ನಿಯರನ್ನು ಹೂವಿನಂತೆ ನೋಡಿಕೊಳ್ಳುತ್ತಿದ್ದನಂತೆ. ಅವರ ಆರೈಕೆಗಾಗಿ ವಿಶೇಷ ಕಾಳಜಿವಹಿಸುತ್ತಿದ್ದನಂತೆ.

ಮೊಘಲ್ ಚಕ್ರವರ್ತಿ ಷಹಜಹಾನ್ ಆಳ್ವಿಕೆಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಇಟಾಲಿಯನ್ ಪ್ರವಾಸಿ ಮನುಚಿ ಮತ್ತು ಡಚ್ ಉದ್ಯಮಿ ಫ್ರಾನ್ಸಿಸ್ಕೊ ​​​​ಪೆಲ್ಸರ್ಟ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಮೊಘಲ್ ಚಕ್ರವರ್ತಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಬರೆದಿದ್ದಾರೆ. ಇದರಲ್ಲಿ ಜಹಾಂಗೀರ್ ತಮ್ಮ ಪತ್ನಿಯರನ್ನು ಎಷ್ಟು ಪ್ರೀತಿಸುತ್ತಿದ್ದ ಆತನ ಪ್ರೇಮ ಎಂತಹದ್ದು ಎಂಬ ಬಗ್ಗೆ ಉಲ್ಲೇಖಿಸಲಾಗಿದೆ.

ಫ್ರಾನ್ಸಿಸ್ಕೊ ​​ಪೆಲ್ಸಾರ್ಟ್ ‘ಜಹಾಂಗೀರ್ ಇಂಡಿಯಾ’ ಎಂಬ ಹೆಸರಿನಲ್ಲಿ ಮೊಘಲ್ ಚಕ್ರವರ್ತಿಯ ಮೇಲೆ ಪುಸ್ತಕವನ್ನು ಬರೆದಿದ್ದಾರೆ. ಇದರ ಪ್ರಕಾರ, ಮೊಘಲ್ ದೊರೆ ಜಹಾಂಗೀರ್ ತಮ್ಮ ​​25 ನೇ ವಯಸ್ಸಿನಲ್ಲೇ 20 ಮದುವೆಗಳನ್ನು ಆಗಿದ್ದನಂತೆ. ಈತ ಸುಖ, ಭೋಗಗಳಲ್ಲಿ ಮುಳುಗಿರುತ್ತಿದ್ದ ರಾಜ ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಈತನ ಜೀವನದಲ್ಲಿ 300ಕ್ಕೂ ಹೆಚ್ಚು ಮಹಿಳೆಯರು ಬಂದು ಹೋಗಿದ್ದಾರೆ. ಜೀವನದುದ್ದಕ್ಕೂ ಈ ಸಂಖ್ಯೆ ಹೆಚ್ಚುತ್ತಲೇ ಇತ್ತು ಎಂದು ಉಲ್ಲೇಖಿಸಿದ್ದಾರೆ.

ಪ್ರತಿ ಹೆಂಡತಿಯನ್ನು ನೋಡಿಕೊಳ್ಳಲು 20 ಸೇವಕಿಯರು

ಜಹಾಂಗೀರ್ ತನ್ನ ಹೆಂಡತಿಯರನ್ನು ನೋಡಿಕೊಳ್ಳಲು ಸೇವಕಿಯರನ್ನು ನೇಮಿಸಿದ್ದ. ಪ್ರತಿಯೊಬ್ಬ ರಾಣಿಗೂ 20 ಸೇವಕಿಯರಿದ್ದರು. ಸೇವಕಿಯರಿಗೆ ಪ್ರತಿ ತಿಂಗಳು ಸಂಬಳ ನೀಡಲಾಗುತ್ತಿತ್ತು. ಅದರಲ್ಲೂ ಹೆಚ್ಚಾಗಿ ಆಭರಣ ಮತ್ತು ಬಟ್ಟೆಗಳನ್ನು ನೀಡಲಾಗುತ್ತಿತ್ತು. ಸೇವಕಿಯರು ರಾಜನನ್ನು ಆಕರ್ಷಿಸಲು ವಿಶೇಷ ರೀತಿಯಲ್ಲಿ ಅಲಂಕಾರ ಮಾಡಿಕೊಳ್ಳುತ್ತಿದ್ದರು. ಕೊಠಡಿಯ ಅಂದ, ಅಲ್ಲಿನ ಸುಗಂಧ ಪರಿಮಳ ರಾಜ ಜಹಾಂಗೀರನಿಗೆ ಇಷ್ಟ ಆದ್ರೆ ಆತ ಉಡುಗೊರೆಯಾಗಿ ಬಹುಮಾನಗಳನ್ನು ನೀಡುತ್ತಿದ್ದನಂತೆ.

ಜಹಾಂಗೀರ್ ತನ್ನ ಹೆಂಡತಿಯರನ್ನು (ಬೇಗಂ) ಭೇಟಿಯಾಗಲು ಇಚ್ಛಿಸಿದರೆ ಅದಕ್ಕಾಗಿ ವಿಶೇಷ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಲಾಗುತ್ತಿತ್ತು ಎಂದು ಪೆಲ್ಸಾರ್ಟ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಹೆಂಡತಿಯ ಕೋಣೆಯನ್ನು ಸುಗಂಧ ಭರಿತವಾಗಿ ಅಲಂಕರಿಸಲಾಗಿತ್ತು. ಸುಗಂಧ ದ್ರವ್ಯವನ್ನು ಸಿಂಪಡಿಸುವ ಮೂಲಕ ಕೊಠಡಿಯನ್ನು ಸುಗಂಧದಿಂದ ತುಂಬಿಸಲಾಗುತ್ತಿತ್ತು. ದಾಸಿಯರು ರೇಷ್ಮೆಯಿಂದ ಮಾಡಲಾಗಿರುವ ಬೀಸಣಿಕೆಯಿಂದ ಗಾಳಿ ಬೀಸುತ್ತಿದ್ದರು. ಚಕ್ರವರ್ತಿ ಜಹಾಂಗೀರ್ ಕೊಠಡಿಗೆ ಕಾಲಿಡುತ್ತಿದ್ದಂತೆ ಭವ್ಯ ಸ್ವಾಗತ ಕೋರಲಾಗುತ್ತಿತ್ತು. ದಾಸಿಯರು ರಾಜನ ಮೇಲೆ ಸುಗಂಧ ದ್ರವ್ಯವನ್ನು ಚುಮುಕಿಸುತ್ತಿದ್ದರು. ರಾಜನನ್ನು ಆವರಿಸಿ ಅವನ ಸೇವೆಯಲ್ಲಿ ಮುಳುಗುತ್ತಿದ್ದರು. ಊಟ ಉಪಚಾರ ಮಾಡಿ ಅಫೀಮು ಮತ್ತು ಉತ್ತೇಜಕಗಳನ್ನು ನೀಡುತ್ತಿದ್ದರು ಎಂದು ಪೆಲ್ಸಾರ್ಟ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಜಹಾಂಗೀರ್ ತನ್ನ ಹೆಂಡತಿ ತೀರಿ ಕೊಂಡಾಗ ಬಹಳ ಆಘಾತಗೊಳಗಾಗಿದ್ದನಂತೆ. ಚಕ್ರವರ್ತಿ ಜಹಾಂಗೀರ್ ಎಷ್ಟೇ ಕೆಟ್ಟ ವ್ಯಕ್ತಿಯಾದರೂ ತಮ್ಮ ಹೆಂಡತಿಯರನ್ನು ಮಾತ್ರ ಯಾವುದೇ ನೋವಾಗದಂತೆ ನೋಡಿಕೊಳ್ಳುತ್ತಿದ್ದರಂತೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:55 am, Fri, 11 August 23