ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಮತ್ತು ಸಲ್ಮಾನ್ ಖಾನ್‌ಗೆ ಬೆದರಿಕೆ ಪತ್ರ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗ
ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಒಟ್ಟು 35 ಮಂದಿ ಆರೋಪಿಗಳಿದ್ದು ಇದುವರೆಗೆ 23 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಉನ್ನತ ಪೋಲೀಸ್ ಮಾಹಿತಿ ನೀಡಿದ್ದಾರೆ
ಸಿಧು ಮೂಸೆವಾಲಾ (Sidhu Moose Wala) ಹತ್ಯೆ ಪ್ರಕರಣ ಮತ್ತು ಸಲ್ಮಾನ್ ಖಾನ್‌ಗೆ (Salman Khan) ಕಳುಹಿಸಲಾದ ಬೆದರಿಕೆಗಳ ನಡುವಿನ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲಿರುವ ಪಂಜಾಬ್‌ನ ಉನ್ನತ ಪೊಲೀಸ್, ಆರೋಪಿಗಳಲ್ಲಿ ಒಬ್ಬರು ಬಾಲಿವುಡ್ ನಟನನ್ನು ಗುರಿಯಾಗಿಸಲು ಮುಂಬೈನಲ್ಲಿ ಸಂಚು ನಡೆಸಿದ್ದರು ಎಂದು ಭಾನುವಾರ ಹೇಳಿದ್ದಾರೆ. ಜೂನ್‌ನಲ್ಲಿ, ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಗಾಯಕ,ರಾಜಕಾರಣಿ ಮೂಸೆವಾಲಾ ಹತ್ಯೆಯಾದ ನಂತರ ಸಲ್ಮಾನ್ ಖಾನ್ ಮತ್ತು ಅವರ ಅಪ್ಪ ಸಲೀಂ ಖಾನ್ ಅವರಿಗೆ ಬೆದರಿಕೆ ಪತ್ರ ಕಳುಹಿಸಲಾಗಿತ್ತು. ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಸೂಚನೆಯ ಮೇರೆಗೆ ಈ ಸಂಚು ನಡೆಸಲಾಯಿತು. “ತನಿಖೆಯ ಸಮಯದಲ್ಲಿ, ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಕಪಿಲ್ ಪಂಡಿತ್, ಸಚಿನ್ ಬಿಷ್ಣೋಯ್ ಮತ್ತು ಸಂತೋಷ್ ಯಾದವ್ ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಲು ಮುಂಬೈನಲ್ಲಿ ಸಂಚು ನಡೆಸಿದ್ದರು ಎಂದು ಹೇಳಿದ್ದಾನೆ. ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ನಾವು ಅವರನ್ನು ಸಹ ವಿಚಾರಣೆ ಮಾಡುತ್ತೇವೆ ಎಂದಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ನಡೆಸಿದ ಸಂಚಿನಲ್ಲಿ ದರೋಡೆಕೋರರಾದ ಸಂಪತ್ ನೆಹ್ರಾ ಮತ್ತು ಗೋಲ್ಡಿ ಬ್ರಾರ್ ಕೂಡ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಹತ್ಯೆಯನ್ನು ನಡೆಸಲು ಸಂಪತ್ ನೆಹ್ರಾ ಮತ್ತು ಗೋಲ್ಡಿ ಬ್ರಾರ್ ಮೂಲಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕಪಿಲ್ ಅವರನ್ನು ಸಂಪರ್ಕಿಸಿದ್ದರು. ಅವರು ಈ ಹಿಂದೆಯೂ ಸಹ, ಸಿಧು ಮೂಸೆವಾಲಾ ಅವರನ್ನು ಕೊಲ್ಲುವ ಉದ್ದೇಶದಿಂದ ಹಲವಾರು ಬಾರಿ ಸಂಚು ನಡೆಸಿದ್ದರು.ವಿಕ್ಕಿ ಮಿದ್ದುಖೇರಾ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನವರು ಈ ಸಂಚು ಹೂಡಿದ್ದರು ಎಂದು ಉನ್ನತ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಒಟ್ಟು 35 ಮಂದಿ ಆರೋಪಿಗಳಿದ್ದು ಇದುವರೆಗೆ 23 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಉನ್ನತ ಪೋಲೀಸ್ ಮಾಹಿತಿ ನೀಡಿದ್ದಾರೆ. ಇಬ್ಬರು ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ ಕೇಂದ್ರ ಏಜೆನ್ಸಿಗಳ ಸಹಾಯದಿಂದ ಇಂಟರ್‌ಪೋಲ್ ಮೂಲಕ ದರೋಡೆಕೋರ ಗೋಲ್ಡಿ ಬ್ರಾರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಹತ್ಯೆಗೈದ ಆರೋಪಿಗಳಲ್ಲಿ ನಾಲ್ವರು ವಿದೇಶದಲ್ಲಿದ್ದರೆ, ಆರು ಮಂದಿಯನ್ನು ಇನ್ನೂ ಬಂಧಿಸಬೇಕಾಗಿದೆ. ಅವರು ಪೊಲೀಸ್ ನಿಗಾದಲ್ಲಿದ್ದಾರೆ.
ವಿದೇಶಕ್ಕೆ ಪರಾರಿಯಾಗಿರುವ ದರೋಡೆಕೋರರನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ. ಗ್ಯಾಂಗ್ ಸ್ಟರ್ ಸಚಿನ್ ಥಾಪನ್ ಅವರನ್ನು ಅಜೆರ್ಬೈಜಾನ್‌ನಲ್ಲಿ ಬಂಧಿಸಲಾಗಿದೆ ಮತ್ತು ಶೀಘ್ರದಲ್ಲೇ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಅಧಿಕೃತ ಹೇಳಿಕೆಯಲ್ಲಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ಒಟ್ಟು 105 ದಿನಗಳನ್ನು ತೆಗೆದುಕೊಂಡಿತು. ಆರೋಪಿಗಳು ಅಡಗಿರುವ ರಾಜ್ಯಗಳು ಹರ್ಯಾಣ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ” ಎಂದು ಒತ್ತಿ ಪಂಜಾಬ್‌ನ ಉನ್ನತ ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.
Published On - 10:04 pm, Sun, 11 September 22