ಮೊದಲ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳದ ಮುಸ್ಲಿಂ ವ್ಯಕ್ತಿ ಮತ್ತೊಂದು ಮದುವೆಯಾಗುವಂತಿಲ್ಲ!

| Updated By: ಸುಷ್ಮಾ ಚಕ್ರೆ

Updated on: Oct 12, 2022 | 9:30 AM

ಮುಸ್ಲಿಂ ಪುರುಷನಿಗೆ ತನ್ನ ಹೆಂಡತಿ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗದಿದ್ದರೆ, ಕುರಾನ್ ಆತನಿಗೆ ಎರಡನೇ ಮದುವೆಯಾಗಲು ಅನುಮತಿಸುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಮೊದಲ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳದ ಮುಸ್ಲಿಂ ವ್ಯಕ್ತಿ ಮತ್ತೊಂದು ಮದುವೆಯಾಗುವಂತಿಲ್ಲ!
ಪ್ರಾತಿನಿಧಿಕ ಚಿತ್ರ
Follow us on

ಪ್ರಯಾಗ್‌ರಾಜ್: ಮುಸ್ಲಿಂ ಪುರುಷನಿಗೆ ತನ್ನ ಮೊದಲ ಹೆಂಡತಿ ಮತ್ತು ಮಕ್ಕಳನ್ನು ಪೋಷಿಸುವ ಸಾಮರ್ಥ್ಯವಿಲ್ಲದಿದ್ದರೆ ಕುರಾನ್ (Quran) ಆದೇಶದ ಪ್ರಕಾರ ಅವನು ಬೇರೆ ಮಹಿಳೆಯನ್ನು ಮದುವೆಯಾಗುವಂತಿಲ್ಲ. ಹಾಗೇ, ಮೊದಲ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಎರಡನೇ ಮದುವೆಯಾಗಿರುವ ಮುಸ್ಲಿಂ ಪುರುಷ ತನ್ನ ಮೊದಲ ಪತ್ನಿ ತನ್ನೊಂದಿಗೆ ಇರಬೇಕೆಂದು ಒತ್ತಾಯಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ (Allahabad High Court) ಹೇಳಿದೆ.

ಮುಸ್ಲಿಂ ಪುರುಷನಿಗೆ ತನ್ನ ಹೆಂಡತಿ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗದಿದ್ದರೆ, ಕುರಾನ್ ಆತನಿಗೆ ಎರಡನೇ ಮದುವೆಯಾಗಲು ಅನುಮತಿಸುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮುಸ್ಲಿಂ ಮಹಿಳೆಯನ್ನು ಎರಡನೇ ಮದುವೆಯಾಗಿದ್ದ ತನ್ನ ಪತಿಯೊಂದಿಗೆ ವಾಸಿಸುವಂತೆ ಒತ್ತಾಯಿಸಲು ನಿರಾಕರಿಸಿದೆ.

ಪವಿತ್ರ ಕುರಾನ್‌ನ ಸುರಾ 4 ಆಯತ್ 3ರ ಧಾರ್ಮಿಕ ಆದೇಶದ ಪ್ರಕಾರ, ಮುಸ್ಲಿಂ ಪುರುಷನು ತಮ್ಮ ಆಯ್ಕೆಯ 4 ಮಹಿಳೆಯರನ್ನು ಮದುವೆಯಾಗಬಹುದು. ಆದರೆ, ಆತ ತನ್ನ ಮೊದಲ ಪತ್ನಿಯರನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ಆತ ಮತ್ತೊಂದು ಮದುವೆಯಾಗುವಂತಿಲ್ಲ. ಒಂದುವೇಳೆ ಆತ ತನ್ನ ಎಲ್ಲ ಪತ್ನಿಯರೊಂದಿಗೆ ನ್ಯಾಯಯುತವಾಗಿ ಜೀವಿಸಲು ಸಾಧ್ಯವಿಲ್ಲ ಎಂದು ಭಯಪಟ್ಟರೆ ಆತ ಒಬ್ಬರನ್ನು ಮಾತ್ರ ಮದುವೆಯಾಗಬಹುದು ಎಂದು ಉಲ್ಲೇಖವಾಗಿದೆ. ಈ ಕುರಾನ್​ ಅನ್ನು ಉಲ್ಲೇಖಿಸಿರುವ ಅಲಹಾಬಾದ್ ಹೈಕೋರ್ಟ್​ ಈ ತೀರ್ಪು ನೀಡಿದೆ.

ಇದನ್ನೂ ಓದಿ: Crime News: ತನ್ನನ್ನು ಮದುವೆಯಾಗಲು ನಿರಾಕರಿಸಿದ ಯುವತಿಗೆ ಬೆಂಕಿ ಹಚ್ಚಿ ಕೊಂದ ಯುವಕ!

ಮೊದಲ ಪತ್ನಿಯೊಂದಿಗಿನ ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸಲು ಅರ್ಜಿದಾರರ ಮನವಿಯನ್ನು ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರ ತೀರ್ಪನ್ನು ಪ್ರಶ್ನಿಸಿ ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆಯಡಿ ಸಲ್ಲಿಸಲಾದ ಮೇಲ್ಮನವಿಯ ಮೇಲೆ ನ್ಯಾಯಮೂರ್ತಿಗಳಾದ ಸೂರ್ಯ ಪ್ರಕಾಶ್ ಕೇಸರವಾಣಿ ಮತ್ತು ರಾಜೇಂದ್ರ ಕುಮಾರ್ ಅವರ ಪೀಠವು ಇತ್ತೀಚೆಗೆ ಈ ಆದೇಶವನ್ನು ನೀಡಿದೆ.

ಮೇಲ್ಮನವಿದಾರನು ತನ್ನ ಮೊದಲ ಹೆಂಡತಿಯಿಂದ ಸತ್ಯವನ್ನು ಮುಚ್ಚಿಟ್ಟು ಎರಡನೇ ಮದುವೆ ಆಗುವುದು ಮೊದಲ ಪತ್ನಿಗೆ ಮಾಡಿದ ದ್ರೋಹವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಮೊದಲ ಮದುವೆಯು ಉಳಿದಿರುವಾಗಲೂ ಮುಸ್ಲಿಂ ಪುರುಷ ಎರಡನೇ ಹೆಂಡತಿಯನ್ನು ಮದುವೆಯಾಗುವ ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತಾನೆ. ಆದರೆ ಅವನು ಹಾಗೆ ಮಾಡಿದರೆ ಮತ್ತು ಮೊದಲ ಹೆಂಡತಿಯನ್ನು ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನೊಂದಿಗೆ ವಾಸಿಸುವಂತೆ ಒತ್ತಾಯಿಸಲು ಸಿವಿಲ್ ನ್ಯಾಯಾಲಯದ ಸಹಾಯವನ್ನು ಕೋರಿದರೆ, ಆಗ ಆಕೆ ಆತನೊಂದಿಗೆ ವಾಸಿಸಲೇಬೇಕೆಂದು ಕೋರ್ಟ್​ ಹೇಳಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಹಿಂದೂ-ಮುಸ್ಲಿಂ ಡಿಎನ್​ಎ ಒಂದೇ ಎಂದಮೇಲೆ ಅಸಮತೋಲನ ಎಲ್ಲಿದೆ?; ಮೋಹನ್ ಭಾಗವತ್​ಗೆ ಓವೈಸಿ ತಿರುಗೇಟು

ಮಹಿಳೆಯರನ್ನು ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳುವುದು ಕಡ್ಡಾಯ ಎಂದು ಜನರಿಗೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಮುಸ್ಲಿಂ ಪುರುಷನು ತನ್ನ ಹೆಂಡತಿ ಮತ್ತು ಮಕ್ಕಳನ್ನು ಪೋಷಿಸುವ ಸಾಮರ್ಥ್ಯ ಹೊಂದಿಲ್ಲದಿದ್ದರೆ, ಪವಿತ್ರ ಕುರಾನ್‌ನ ಮೇಲಿನ ಆದೇಶದ ಪ್ರಕಾರ ಅವನು ಇತರ ಮಹಿಳೆಯನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಕೋರ್ಟ್​ ಹೇಳಿದೆ.

ಏನಿದು ಪ್ರಕರಣ?:

ಈ ಪ್ರಕರಣದಲ್ಲಿ ಅಜೀಜುರ್ರಹ್ಮಾನ್ ಮತ್ತು ಹಮೀದುನ್ನಿಶಾ ಮೇ 1999ರಲ್ಲಿ ವಿವಾಹವಾಗಿದ್ದರು. ಅವರಿಗೆ ನಾಲ್ಕು ಮಕ್ಕಳಿದ್ದರು. ನಂತರ ಅಜೀಜುರ್ರಹ್ಮಾನ್ ಎರಡನೇ ಬಾರಿಗೆ ವಿವಾಹವಾದರು. ಎರಡನೇ ಹೆಂಡತಿಯಿಂದಲೂ ಅವರು ಮಕ್ಕಳನ್ನು ಹೊಂದಿದ್ದರು. ಅವರು ಈ ವಿಷಯವನ್ನು ತನ್ನ ಮೊದಲ ಹೆಂಡತಿ ಹಮೀದುನ್ನಿಶಾಗೆ ಮರೆಮಾಡಿದ್ದರು. ಎರಡನೇ ಮದುವೆಗೆ ಯಾವುದೇ ವಿವರಣೆಯನ್ನು ನೀಡಿರಲಿಲ್ಲ. ಇದರಿಂದಾಗಿ ಹಮೀದುನ್ನಿಶಾ ಆತನಿಂದ ದೂರ ಸರಿದು 93 ವರ್ಷದ ತಂದೆಯೊಂದಿಗೆ ವಾಸಿಸುತ್ತಿದ್ದರು.

2015ರಲ್ಲಿ ಅಜೀಜುರ್ರಹ್ಮಾನ್ ಉತ್ತರ ಪ್ರದೇಶದ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿ ದಾಂಪತ್ಯದ ಹಕ್ಕುಗಳನ್ನು ಮರುಸ್ಥಾಪಿಸಲು ಒತ್ತಾಯಿಸಿದರು. ನ್ಯಾಯಾಲಯವು ತನ್ನ ಮೊದಲ ಹೆಂಡತಿಯನ್ನು ತನ್ನೊಂದಿಗೆ ವಾಸಿಸುವಂತೆ ನಿರ್ದೇಶಿಸಬೇಕೆಂದು ಅವರು ಅರ್ಜಿ ಸಲ್ಲಿಸಿದ್ದರು. ಈ ವರ್ಷದ ಆಗಸ್ಟ್‌ನಲ್ಲಿ ನ್ಯಾಯಾಲಯವು ಅವರ ಮನವಿಯನ್ನು ತಿರಸ್ಕರಿಸಿತ್ತು. ನಂತರ ಅವರು ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:30 am, Wed, 12 October 22