ರಾಂಚಿ: ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ (Jharkhand High Court) ತಿರಸ್ಕರಿಸಿದೆ. ರಾಂಚಿಯಲ್ಲಿ ದಾಖಲಾದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಹಾಜರಾಗಲು ಸಮನ್ಸ್ ಜಾರಿ ಮಾಡಿದ ಆದೇಶದ ವಿರುದ್ಧ ರಾಹುಲ್ ಗಾಂಧಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
2019ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮ್ಮ ಸಭೆಯೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ರಾಹುಲ್ ಗಾಂಧಿ ವಿರುದ್ಧ ವಕೀಲ ಪ್ರದೀಪ್ ಮೋದಿ ರಾಂಚಿ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ನೀರವ್ ಮೋದಿ ಮತ್ತು ಲಲಿತ್ ಮೋದಿ ಮಾಡಿದ ಹಗರಣಗಳನ್ನು ಪ್ರಸ್ತಾಪಿಸಿ “ಮೋದಿ ಎಂಬ ಸರ್ನೇಮ್ ಹೊಂದಿರುವ ಎಲ್ಲಾ ಜನರು ಕಳ್ಳರು” ಎಂದು ಹೇಳಿದ್ದರು.
ಈ ಹೇಳಿಕೆಯು ಅನೇಕರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ರಾಂಚಿಯ ವಕೀಲ ಪ್ರದೀಪ್ ಮೋದಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧ ಹೈಕೋರ್ಟ್ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ರಾಹುಲ್ ಗಾಂಧಿಯಿಂದ 20 ಕೋಟಿ ರೂ. ನಷ್ಟ ಪರಿಹಾರ ಕೋರಿ ವಕೀಲರು ಮಾನನಷ್ಟಕ್ಕಾಗಿ ಪ್ರತ್ಯೇಕ ಸಿವಿಲ್ ಮೊಕದ್ದಮೆ ಹೂಡಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದಲ್ಲಿ ರಮೇಶ್ ಕುಮಾರ್ ಶಕುನಿ ಪಾತ್ರಧಾರಿ: ರಾಹುಲ್ ಗಾಂಧಿ ಬಂದರೂ ಈ ಬಾರಿ ಗೆಲ್ಲೋದಿಲ್ಲ -ಕೆ.ಹೆಚ್.ಮುನಿಯಪ್ಪ
ಪ್ರದೀಪ್ ಮೋದಿ ಕೇಸ್ ದಾಖಲಿಸಿದ ನಂತರ ಜಿಲ್ಲಾ ನ್ಯಾಯಾಲಯವು ರಾಹುಲ್ ಗಾಂಧಿಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಅಥವಾ ಅವರ ವಕೀಲರು ಪ್ರತಿನಿಧಿಸುವಂತೆ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಈ ಅರ್ಜಿಯನ್ನು ರದ್ದುಗೊಳಿಸುವಂತೆ ಕೋರಿ ರಾಹುಲ್ ಗಾಂಧಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಎಸ್‌ಕೆ ದ್ವಿವೇದಿ ಅವರು ಸುದೀರ್ಘ ವಿಚಾರಣೆ ನಡೆಸಿದ ನಂತರ ರಾಹುಲ್ ಗಾಂಧಿಯವರ ಅರ್ಜಿಯನ್ನು ವಜಾಗೊಳಿಸಿದ್ದಾರೆ.