ಕಾಂಗ್ರೆಸ್ ಪಕ್ಷದಲ್ಲಿ ರಮೇಶ್ ಕುಮಾರ್ ಶಕುನಿ ಪಾತ್ರಧಾರಿ: ರಾಹುಲ್ ಗಾಂಧಿ ಬಂದರೂ ಈ ಬಾರಿ ಗೆಲ್ಲೋದಿಲ್ಲ -ಕೆ.ಹೆಚ್.ಮುನಿಯಪ್ಪ
ಕೋಲಾರ ಜಿಲ್ಲಾ ಕಾಂಗ್ರೇಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಮಹಾಭಾರತ ಯುದ್ದಕ್ಕೆ ಹೋಲಿಸಿರುವ ಮುನಿಯಪ್ಪ ಮುಕ್ಕಾಲು ಭಾಗ ಯುದ್ದ ಮುಗಿದಿದೆ, ನಮ್ಮ ವನವಾಸದ ಸಮಯ ಮುಕ್ತಾಯವಾಗುತ್ತಿದೆ ಇನ್ನು ಕಾಲು ಭಾಗ ಮಾತ್ರ ಬಾಕಿ ಇದೆ. ಶ್ರೀಕೃಷ್ಣ ನಮ್ಮ ಜೊತೆಗಿದ್ದಾನೆ ಎಂದರು.
ಕೋಲಾರ: ಅವಿಭಜಿತ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಮಾಜಿ ಶಾಸಕರುಗಳಾದ ಕೊತ್ತೂರು ಮಂಜುನಾಥ್(Kothur Manjunath) ಹಾಗೂ ಚಿಂತಾಮಣಿ ಸುಧಾಕರ್ ಕಳೆದ ವಾರವಷ್ಟೇ ದೆಹಲಿಯಲ್ಲಿ ರಾಹುಲ್ ಗಾಂಧಿ(Rahul Gandhi) ಸಮ್ಮುಖದಲ್ಲಿ ಕಾಂಗ್ರೇಸ್(Congress) ಸೇರ್ಪಡೆಯಾಗಿದ್ದರು. ಆದರೆ ಇದು ಕಾಂಗ್ರೇಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ(KH Muniyappa) ಅವರನ್ನ ಕೆರಳಿಸಿದೆ. ಅದರಲ್ಲೂ ಕಾಂಗ್ರೇಸ್ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲು ಮಾಜಿ ಸ್ಪೀಕರ್ ರಮೇಶ್ ಕುಮಾರ್(Ramesh Kumar) ಕಾರಣ ಎಂದು ರಮೇಶ್ ಕುಮಾರ್ ಮೇಲೆ ತಮ್ಮ ಆರೋಪಗಳ ಸುರಿಮಳೆಗೈದಿರುವ ಕೆ.ಹೆಚ್.ಮುನಿಯಪ್ಪ, ರಮೇಶ್ ಕುಮಾರ್ ಕಾಂಗ್ರೇಸ್ ಪಕ್ಷದಲ್ಲಿ ಶಕುನಿ ಪಾತ್ರದಾರಿ ಎಂದು ವರ್ಣಿಸಿದ್ದಾರೆ. ಕೋಲಾರದ ತಮ್ಮ ನಿವಾಸದ ಬಳಿ ತಮ್ಮ ಬೆಂಬಲಿಗರು ಹಾಗೂ ಮುಖಂಡರುಗಳ ಸಭೆ ಕರೆದು ತಮ್ಮ ಮುಂದಿನ ರಾಜಕೀಯ ನಿರ್ಧಾರಗಳ ಕುರಿತು ಚರ್ಚೆ ನಡೆಸಿದ ಮುನಿಯಪ್ಪ, ರಮೇಶ್ ಕುಮಾರ್ ಸೇರಿದಂತೆ ಜಿಲ್ಲೆಯ ಶಾಸಕರುಗಳ ಮೇಲೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಶಕುನಿ ಪಾತ್ರದಾರಿ ರಮೇಶ್ ಕುಮಾರ್, ಎಲ್ಲರನ್ನೂ ಮರುಳು ಮಾಡುತ್ತಿದ್ದಾರೆ ಸದ್ಯ ಕೋಲಾರ ಜಿಲ್ಲಾ ಕಾಂಗ್ರೇಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಮಹಾಭಾರತ ಯುದ್ದಕ್ಕೆ ಹೋಲಿಸಿರುವ ಮುನಿಯಪ್ಪ ಮುಕ್ಕಾಲು ಭಾಗ ಯುದ್ದ ಮುಗಿದಿದೆ, ನಮ್ಮ ವನವಾಸದ ಸಮಯ ಮುಕ್ತಾಯವಾಗುತ್ತಿದೆ ಇನ್ನು ಕಾಲು ಭಾಗ ಮಾತ್ರ ಬಾಕಿ ಇದೆ. ಶ್ರೀಕೃಷ್ಣ ನಮ್ಮ ಜೊತೆಗಿದ್ದಾನೆ ಎಂದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೇಸ್ ಪಕ್ಷದಲ್ಲಿ ಶಕುನಿ ಪಾತ್ರ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಾನು ಬೆಳೆಸಿದ್ದವರೆನ್ನೆಲ್ಲಾ ಮಾಟ, ಮಂತ್ರ ಮಾಡಿ ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ. ಕೇವಲ ಶಕುನಿ ಪಾತ್ರವನ್ನಷ್ಟೇ ಅಲ್ಲಾ ದುಷ್ಯಾಸನ, ಧರ್ಮರಾಯ, ಹೀಗೆ ಎಲ್ಲರ ಪಾತ್ರಗಳನ್ನು ಏಕಪಾತ್ರಾಭಿನಯ ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಅವರ ಮುಖವಾಡವನ್ನು ಬಯಲು ಮಾಡುತ್ತೇನೆ ಎಂದರು. ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸಿರುವುದು ನಾನು. ಕಳೆದ 35 ವರ್ಷಗಳಿಂದ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಹೀಗಿರುವಾಗ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯರಿಗೆ ನನ್ನ ಬಗ್ಗೆ ಏನನ್ನು ಹೇಳಿದ್ದಾರೋ ಗೊತ್ತಿಲ್ಲ, ನನ್ನನ್ನು ಬಿಟ್ಟು ನನ್ನ ವಿರುದ್ದ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ ಮಾಜಿ ಶಾಸಕರುಗಳಾದ ಕೊತ್ತೂರು ಮಂಜುನಾಥ್ ಹಾಗೂ ಚಿಂತಾಮಣಿ ಸುಧಾಕರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ ಇದಕ್ಕೆಲ್ಲ ಕಾರಣ ಶಕುನಿ ಪಾತ್ರ ಮಾಡಿ ಎಲ್ಲರನ್ನು ನಂಬಿಸುತ್ತಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎಂದು ಏಕವಚನದಲ್ಲೇ ನೇರ ನೇರ ಆರೋಪ ಮಾಡಿದ್ದಾರೆ.
ನಾನು ಬೆಳೆಸಿದವರಿಗೆಲ್ಲಾ ಮಾಟ ಮಂತ್ರ ಮಾಡಿಸಿ ಬಾವಿಗೆ ಹಾಕುತ್ತಿದ್ದಾರೆ ಜಿಲ್ಲೆಯಲ್ಲಿ ರಮೇಶ್ಕುಮಾರ್ ಬಿಟ್ಟು ಬೇರೆ ಯಾರೂ ಬೆಳೆಯಬಾರದು, ತನ್ನನ್ನು ಬಿಟ್ಟು ಯಾರೂ ಮಂತ್ರಿಯಾಗಬಾರದು ಅನ್ನೋ ಕಾರಣಕ್ಕೆ ಕಳೆದ ಮೂವತ್ತು ವರ್ಷಗಳಿಂದ ನಾನು ಬೆಳೆಸಿದ ಶಾಸಕರುಗಳಿಗೆ ರಮೇಶ್ ಕುಮಾರ್ ಮಾಟ ಮಂತ್ರ ಮಾಡಿಕೊಂಡಿದ್ದಾನೆ. ತಾನು ಸೋತು ಇವರ್‍ಯಾರೂ ಶಾಸಕರಾಗುವುದನ್ನು ನೋಡಲಾರದೆ, ಎಲ್ಲರಿಗೂ ಮಾಟ ಮಾಡಿಸಿ ಬಾವಿಗೆ ಹಾಕಿದ್ದಾರೆ. ಈ ಗುಟ್ಟು ಎಲ್ಲರಿಗೂ ಗೊತ್ತಿಲ್ಲ, ಇವರಿಂದ ತೊಂದರೆ ಅನುಭವಿಸಿದವರು ಮತ್ತೆ ಮರಳಿ ನನ್ನ ಬಳಿಗೆ ಬಂದೆ ಬರುತ್ತಾರೆ ಎಂದರು. ಮುಂದಿನ ಚುನಾವಣೆಯಲ್ಲಿ ರಮೇಶ್ ಕುಮಾರ್ ಸೋಲುವುದನ್ನು ರಾಹುಲ್ ಗಾಂಧಿ ಬಂದರೂ ತಪ್ಪಿಸಲು ಸಾಧ್ಯವಿಲ್ಲ ಎಂದರು. ಇವರ ತಂತ್ರ, ಕುತಂತ್ರ, ಮುಖವಾಡ ಎಲ್ಲವೂ ಕಳಚಿ ಬೀಳಲಿದೆ ಎಂದು ರಮೇಶ್ ಕುಮಾರ್ ವಿರುದ್ಧ ಕೆಂಡ ಉಗುಳಿದರು.
ನಾನು ಬೆಳೆಸಿದ ಶಾಸಕರುಗಳೇ ನನ್ನ ವಿರುದ್ಧ ತಿರುಗಿಬಿದ್ದಿದ್ದಾರೆ, ನನ್ನ ಸಹಾಯವನ್ನು ಎಲ್ಲರೂ ಮರೆತಿದ್ದಾರೆ. ಜಿಲ್ಲೆಯಲ್ಲಿ ಕಳೆದ ಮೂವತ್ತೈದು ವರ್ಷದಿಂದ ಕಾಂಗ್ರೇಸ್ ಪಕ್ಷವನ್ನು ಕಟ್ಟಿ ಬೆಳೆಸಿರುವುದು ನಾನು, ಈಗ ನಾನು ಕಟ್ಟಿದ ಹುತ್ತದಲ್ಲಿ ವಿಷದ ಹಾವುಗಳು ಬಂದು ಸೇರಿವೆ ಮುಂದಿನ ದಿನಗಳಲ್ಲಿ ಜನರೇ ಹಾವುಗಳನ್ನು ಹೊಡೆದು ಸಾಯಿಸುತ್ತಾರೆ ಎಂದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಒಂದು ಕಾಲದಲ್ಲಿ ಯಾರು ದಿಕ್ಕಿಲ್ಲದೆ ನಡು ಬೀದಿಯಲ್ಲಿ ನಿಂತಿದ್ದರು ಈ ಸಂದರ್ಭದಲ್ಲಿ ಅವರನ್ನು ಎಸ್.ಎಂ.ಕೃಷ್ಣ ಅವರ ಬಳಿ ಕರೆದುಕೊಂಡು ಹೋಗಿ ಪಕ್ಷಕ್ಕೆ ಸೇರಿಸಿಕೊಂಡಿದ್ದು ನಾನು ಇಂದು ಅವರೇ ನನ್ನ ವಿರುದ್ದ ಸಂಚು ಮಾಡುತ್ತಿದ್ದಾರೆ. ಇನ್ನು ಮನೆಯ ಮಗನಂತಿದ್ದ ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಈಗ ರಮೇಶ್ ಕುಮಾರ್ ಅವರ ಜೊತೆಗೆ ಸೇರಿ ನನ್ನ ವಿರುದ್ದ ತಿರುಗಿ ಬಿದಿದ್ದಾರೆ. ಸ್ಟಾಂಪ್ ವೆಂಡರ್ ಕೆಲಸ ಮಾಡಿಕೊಂಡಿದ್ದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರನ್ನು ಕರೆದುಕೊಂಡು ಬಂದು ಶಾಸಕರನ್ನಾಗಿ ಮಾಡಿದ್ದಾರೆ, ನನ್ನ ಶ್ರಮ ಹಣ ಎಲ್ಲವನ್ನೂ ಕೊಟ್ಟಿದ್ದೇನೆ ಅವರು ನನ್ನ ವಿರುದ್ದ ಕೆಲಸ ಮಾಡುತ್ತಿದ್ದಾರೆ. ಇನ್ನು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಕಲ್ಲು ಗಣಿಗಾರಿಕೆ ವಿಚಾರದಲ್ಲಿ ಜೈಲಿಗೆ ಹೋಗುತ್ತಿದ್ದವರನ್ನು ರಕ್ಷಣೆ ಮಾಡಿ ಅವರಿಗೆ ಬೆಂಬಲವಾಗಿ ನಿಂತು ಶಾಸಕರನ್ನಾಗಿ ಮಾಡಿದ್ದೆ ಅವರು ನನ್ನ ವಿರದ್ದು ತಿರುಗಿ ಬಿದಿದ್ದಾರೆ ಹೀಗೆ ಎಲ್ಲರಿಗೂ ರಮೇಶ್ ಕುಮಾರ್ ಮರುಳು ಮಾಡಿದ್ದಾರೆ ಎಲ್ಲರಿಗೂ ಮುಂದಿನ ದಿನಗಳಲ್ಲಿ ಎಲ್ಲವೂ ಅರ್ಥವಾಗುತ್ತದೆ ಎಂದು ತಮ್ಮ ವಿರುದ್ದ ತಿರುಗಿ ಬಿದ್ದಿರುವ ಮುಖಂಡರಿಗೆ ಮಾರ್ಮಿಕವಾಗಿ ಎಚ್ಚರಕೊಟ್ಟಿದ್ದಾರೆ.
ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ
Published On - 10:40 pm, Sun, 3 July 22