ಹಿಂಸೆ ಯಾವುದಕ್ಕೂ ಪರಿಹಾರವಲ್ಲ, ಕಚೇರಿ ಧ್ವಂಸ ಮಾಡಿರುವುದು ದುರದೃಷ್ಟಕರ ಸಂಗತಿ: ರಾಹುಲ್ ಗಾಂಧಿ

ಇದು ನನ್ನ ಕಚೇರಿ. ಅದಕ್ಕಿಂತ ಮೊದಲು ಇದು ವಯನಾಡಿನ ಜನರ ಕಚೇರಿ. ವಯನಾಡಿನ ಜನರ ದನಿಯಾಗಿದೆ.  ಆಕ್ರಮಣ ಯಾವತ್ತೂ  ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಈ ಕೃತ್ಯವೆಸಗಿದ ವಿದ್ಯಾರ್ಥಿಗಳು ಬೇಜವಾಬ್ದಾರಿಯಿಂದ ಇದನ್ನು ಮಾಡಿದ್ದರೂ ನನಗೆ ಅವರ ಮೇಲೆ ಸಿಟ್ಟು ಅಥವಾ ಹಗೆತನ ಇಲ್ಲ...

ಹಿಂಸೆ ಯಾವುದಕ್ಕೂ ಪರಿಹಾರವಲ್ಲ, ಕಚೇರಿ ಧ್ವಂಸ ಮಾಡಿರುವುದು ದುರದೃಷ್ಟಕರ ಸಂಗತಿ: ರಾಹುಲ್ ಗಾಂಧಿ
ವಯನಾಡ್ ಕಚೇರಿಯಲ್ಲಿ ರಾಹುಲ್ ಗಾಂಧಿ
TV9kannada Web Team

| Edited By: Rashmi Kallakatta

Jul 01, 2022 | 7:11 PM

ವಯನಾಡ್:  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಶುಕ್ರವಾರ ವಯನಾಡ್‌ನಲ್ಲಿರುವ (Wayanad)ತಮ್ಮ ಕಚೇರಿಗೆ ಭೇಟಿ ನೀಡಿದ್ದು, ಬಫರ್ ಝೋನ್ ವಿಚಾರವಾಗಿ ಆಡಳಿತಾರೂಢ ಸಿಪಿಐ (ಎಂ)ನ ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐ(SFI) ಕಾರ್ಯಕರ್ತರು ಕಚೇರಿ ಧ್ವಂಸಗೊಳಿಸಿದ್ದು ಬೇಜವಾಬ್ದಾರಿಯ ಕೃತ್ಯ ಎಂದು ಪ್ರತಿಕ್ರಿಯಿಸಿದ್ದಾರೆ. ವಯನಾಡ್​​ಗೆ ಮೂರು ದಿನಗಳ ಭೇಟಿಯಲ್ಲಿರುವ ರಾಹುಲ್ ಗಾಂಧಿ, ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಕಚೇರಿಗೆ ಆಗಮಿಸಿ ಅಲ್ಲಿನ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ವಯನಾಡಿನ ಜನರ ಕಚೇರಿಯಾಗಿದ್ದು, ಎಡಪಕ್ಷಗಳ ವಿದ್ಯಾರ್ಥಿಗಳ ಗುಂಪು ಮಾಡಿರುವುದು ದುರದೃಷ್ಟಕರ ಸಂಗತಿ. ಆದರೆ, ಹಿಂಸಾಚಾರವು ಎಂದಿಗೂ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಅವರ ಬಗ್ಗೆ ಯಾವುದೇ ಕೋಪ ಅಥವಾ ಹಗೆತನವನ್ನು ನನಗಿಲ್ಲ ಎಂದು ರಾಹುಲ್ ಹೇಳಿದ್ದಾರೆ.

ಇದು ನನ್ನ ಕಚೇರಿ. ಅದಕ್ಕಿಂತ ಮೊದಲು ಇದು ವಯನಾಡಿನ ಜನರ ಕಚೇರಿ. ವಯನಾಡಿನ ಜನರ ದನಿಯಾಗಿದೆ.  ಆಕ್ರಮಣ ಯಾವತ್ತೂ  ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಈ ಕೃತ್ಯವೆಸಗಿದ ವಿದ್ಯಾರ್ಥಿಗಳು ಬೇಜವಾಬ್ದಾರಿಯಿಂದ ಇದನ್ನು ಮಾಡಿದ್ದರೂ ನನಗೆ ಅವರ ಮೇಲೆ ಸಿಟ್ಟು ಅಥವಾ ಹಗೆತನ ಇಲ್ಲ ಎಂದು ರಾಹುಲ್ ಹೇಳಿರುವುದಾಗಿ ರಾಹುಲ್ ಗಾಂಧಿಯವರ ವಯನಾಡ್ ಕಚೇರಿ ಟ್ವೀಟ್  ಮಾಡಿದೆ.

ದೇಶದ ಎಲ್ಲೆಡೆ, ಹಿಂಸೆ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂಬ ಕಲ್ಪನೆಯನ್ನು ನೀವು ನೋಡುತ್ತೀರಿ.  ಹಿಂಸೆ ಎಂದಿಗೂ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ.ಅದು ಒಳ್ಳೆಯದಲ್ಲ.. ಅವರು ಬೇಜವಾಬ್ದಾರಿಯಿಂದ ವರ್ತಿಸಿದರು. ಆದರೆ, ನನಗೆ ಅವರಲ್ಲಿ ಯಾವುದೇ ಕೋಪ ಅಥವಾ ದ್ವೇಷವಿಲ್ಲ. ಹಿಂಸಾಚಾರದಲ್ಲಿ ತೊಡಗಿರುವ ಎಸ್‌ಎಫ್‌ಐ ಕಾರ್ಯಕರ್ತರನ್ನು “ಮಕ್ಕಳು” ಎಂದು ಗಾಂಧಿ ಹೇಳಿದ್ದಾರೆ.

ಕಳೆದ ವಾರ, ರಾಹುಲ್ ಗಾಂಧಿಯವರ ವಿರುದ್ಧ ಎಸ್‌ಎಫ್‌ಐ ನಡೆಸಿದ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿತು. ಎಸ್‌ಎಫ್‌ಐ ಕಾರ್ಯಕರ್ತರ ಗುಂಪು ಇಲ್ಲಿನ ಕಚೇರಿಗೆ ನುಗ್ಗಿ ಅದನ್ನು ಧ್ವಂಸಗೊಳಿಸಿದ್ದರು. ಈ ಘಟನೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಖಂಡಿಸಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.

ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರ ವಯನಾಡ್‌ನ ಕಲ್ಪೆಟ್ಟಾದಲ್ಲಿರುವ ಕಚೇರಿಯಲ್ಲಿ ಎಸ್‌ಎಫ್‌ಐ ನಡೆಸಿದ “ಹಿಂಸಾಚಾರದ ಕೃತ್ಯ” ವನ್ನು ತೀವ್ರವಾಗಿ ಖಂಡಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ಇದು ಕೆಲವು ಪ್ರದೇಶಗಳಲ್ಲಿ ಹಿಂಸಾಚಾರಕ್ಕೆ ತಿರುಗಿತು.

ಅರಣ್ಯದ ಸುತ್ತಲಿನ ಬಫರ್ ಝೋನ್ ವಿಚಾರದಲ್ಲಿ ರಾಹುಲ್ ಗಾಂಧಿ ನಿಷ್ಕ್ರಿಯರಾಗಿದ್ದಾರೆ ಎಂದು ಆರೋಪಿಸಿ ಭಾರತೀಯ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕಾರ್ಯಕರ್ತರು ರಾಹುಲ್ ಗಾಂಧಿ ಅವರ ಕಚೇರಿಗೆ ಮೆರವಣಿಗೆ ನಡೆಸಿ ಕಚೇರಿಯನ್ನು ಧ್ವಂಸ ಮಾಡಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada