ದೆಹಲಿಯಲ್ಲಿ ಭಾರೀ ಬಿರುಗಾಳಿ, ಧರೆಗುರುಳಿದ 300ಕ್ಕೂ ಹೆಚ್ಚು ಮರಗಳು, ಇಬ್ಬರ ಸಾವು

ಗಂಟೆಗೆ 100 ಕಿಮೀಗಿಂತಲೂ ಹೆಚ್ಚು ವೇಗದಲ್ಲಿ ಗಾಳಿ ಬೀಸಿದೆ. ಹಲವು ಮರಗಳು ಬುಡಸಹಿತ ಉರುಳಿಬಿದ್ದಿದ್ದು, ಟ್ರಾಫಿಕ್ ಅಸ್ತವ್ಯಸ್ತಗೊಂಡಿತ್ತು.

ದೆಹಲಿಯಲ್ಲಿ ಭಾರೀ ಬಿರುಗಾಳಿ, ಧರೆಗುರುಳಿದ 300ಕ್ಕೂ ಹೆಚ್ಚು ಮರಗಳು, ಇಬ್ಬರ ಸಾವು
ಮಳೆ (ಸಂಗ್ರಹ ಚಿತ್ರ)
Edited By:

Updated on: May 31, 2022 | 7:07 AM

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಿನ್ನೆ (ಮೇ 30) ಭಾರೀ ಬಿರುಗಾಳಿಯೊಂದಿಗೆ ಹಠಾತ್ ಮಳೆ (Thunderstorm) ಸುರಿದಿದ್ದು ಜನಜೀವನ ಅಸ್ತವ್ಯವಸ್ತವಾಯಿತು. ಗಂಟೆಗೆ 100 ಕಿಮೀಗಿಂತಲೂ ಹೆಚ್ಚು ವೇಗದಲ್ಲಿ ಗಾಳಿ ಬೀಸಿದೆ. ಹಲವು ಮರಗಳು ಬುಡಸಹಿತ ಉರುಳಿಬಿದ್ದಿದ್ದು, ಟ್ರಾಫಿಕ್ ಅಸ್ತವ್ಯಸ್ತಗೊಂಡಿತ್ತು. ಬಿರುಗಾಳಿ ಮತ್ತು ಮಳೆಯಿಂದಾಗಿ ಕೆಲ ಪ್ರದೇಶಗಳಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಟ್ರಾಫಿಕ್ ಜಾಮ್​ ಉಂಟಾಗಿತ್ತು. ಕೆಟ್ಟು ಹೋದ ವಾಹನಗಳನ್ನು ರಸ್ತೆಗಳಲ್ಲಿಯೇ ಬಿಟ್ಟು, ಜನರು ಮನೆಗಳಿಗೆ ನಡೆದು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕೇಂದ್ರ ದೆಹಲಿಯ ಜಾಮಾ ಮಸೀದಿ ಪ್ರದೇಶದಲ್ಲಿ ನೆರೆಮನೆಯ ಬಾಲ್ಕನಿ ಕುಸಿದ ಕಾರಣ 50 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಪ್ರಬಲ ಗಾಳಿಯಿಂದ ನಗರದಲ್ಲಿ ಹಲವು ಕಟ್ಟಡಗಳಿಗೂ ಧಕ್ಕೆಯಾಗಿದೆ. ಉತ್ತರ ದೆಹಲಿಯ ಅಂಗೂರಿ ಬಾಗ್ ಪ್ರದೇಶದಲ್ಲಿ 65 ವರ್ಷದ ಮನೆ ರಹಿತ ವ್ಯಕ್ತಿ, ಬಸೀರ್ ಬಾಬಾ ಮರದ ಕೊಂಬೆಯೊಂದು ಮೈಮೇಲೆ ಬಿದ್ದ ಕಾರಣ ಮೃತಪಟ್ಟಿದ್ದಾನೆ.

2018ರ ನಂತರ ಇಷ್ಟು ಪ್ರಬಲವಾದ ಬಿರುಗಾಳಿ ದೆಹಲಿಯ ಮೇಲೆ ಬೀಸಿದ್ದು ಇದೇ ಮೊದಲು ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಸೋಮವಾರವೂ ರಾಷ್ಟ್ರ ರಾಜಧಾನಿಗೆ ಬಿರುಗಾಳಿ ಸಹಿತ ಭಾರೀ ಮಳೆ ಅಪ್ಪಳಿಸಿತ್ತು.

ಮಳೆಯಿಂದಾಗಿ ನಗರದ ಉಷ್ಣಾಂಶ 13ರಿಂದ 16 ಡಿಗ್ರಿಗಳಷ್ಟು ಕಡಿಮೆಯಾಗಿದೆ. ನಗರದ ಫಿರೊಝೆಶಾ ರಸ್ತೆ, ಟೊಲ್​ಸ್ಟಾಯ್ ಮಾರ್ಗ್, ಕೊಪರ್​ನಿಕಸ್ ರಸ್ತೆ, ಕೆಜಿ ಮಾರ್ಗ್, ಪಂಡಿತ್ ರವಿ ಶಂಕರ್ ಶುಕ್ಲ ಲೇನ್ ರಸ್ತೆಗಳಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಮೇಲೆ ನೀರು ನಿಂತಿತ್ತು. ವಾಹನ ಸಂಚಾರ ಸ್ಥಗಿತಗೊಂಡಿತ್ತು.

ದೆಹಲಿಯ ಪೂರ್ವ ಮತ್ತು ಮಧ್ಯ ಭಾಗದಲ್ಲಿ ಮಳೆಯಿಂದ ಹೆಚ್ಚಿನ ಅನಾಹುತ ಸಂಭವಿಸಿದೆ. ನಾಗರಿಕ ಸೇವಾ ಪ್ರಾಧಿಕಾರಗಳಿಗೆ ಮರ ಉರುಳಿರುವ ಬಗ್ಗೆ 300ಕ್ಕೂ ಹೆಚ್ಚು ಕರೆಗಳು ಬಂದಿವೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:05 am, Tue, 31 May 22