ಚಂದ್ರನಲ್ಲಿ 3 ಎಕರೆ ಜಮೀನು; 8ನೇ ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಭರ್ಜರಿ ಗಿಫ್ಟ್ ಕೊಟ್ಟ ಪತಿ
ನಮ್ಮ ಪಾರ್ಟಿಯ ಸೆಟ್ ಕೂಡಾ ಸಖತ್ ಆಗಿತ್ತು. ನಾವು ಚಂದ್ರನಲ್ಲಿ ಇದ್ದೇವೆ ಎಂದು ಭಾಸವಾಗುವಂತೆ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಪಾರ್ಟಿಯಲ್ಲಿ ನನ್ನ ಪತಿ ಚಂದ್ರನಲ್ಲಿ ಖರೀದಿಸಿರುವ ಜಮೀನಿನ ದಾಖಲೆ ನನ್ನ ಕೈಗೆ ನೀಡಿದ್ದರು ಎಂದು ಸಪ್ನಾ ಹೇಳಿದ್ದಾರೆ.
ಅಜ್ಮೇರ್: ‘ನಿನ್ನನ್ನು ಚಂದ್ರನಲ್ಲಿ ಕರೆದುಕೊಂಡು ಹೋಗುವೆ, ತಾರೆಗಳನ್ನೇ ಮುಡಿಸುವೆ’ ಎಂದು ಭರವಸೆ ನೀಡುವ ಪ್ರೇಮಿಗಳ ಸಂಭಾಷಣೆಯನ್ನು ನಾವು ಪ್ರೇಮಕಥೆ, ಕಾವ್ಯಗಳಲ್ಲಿ ಓದಿರುತ್ತೇವೆ. ಆದರೆ ರಾಜಸ್ಥಾನದ ಅಜ್ಮೇರ್ ನಿವಾಸಿಯೊಬ್ಬರು ತನ್ನ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಉಡುಗೊರೆಯಾಗಿ ಚಂದ್ರನಲ್ಲಿ 3 ಎಕರೆ ಜಮೀನು ಕೊಡಿಸಿದ್ದಾರೆ.
ಡಿ.24ರಂದು ಧರ್ಮೇಂದ್ರ ಅನಿಜಾ ಮತ್ತು ಸಪ್ನಾ ಅನಿಜಾ ದಂಪತಿ ತಮ್ಮ 8ನೇ ವರ್ಷದ ವಿವಾಹ ವಾರ್ಷಿಕ ಆಚರಿಸಿಕೊಂಡಿದ್ದಾರೆ. ನನ್ನ ಪತ್ನಿಗೆ ಏನಾದರೂ ವಿಶೇಷವಾದ ಉಡುಗೊರೆ ನೀಡಬೇಕು ಎಂದು ಬಯಸಿದ್ದೆ. ಎಲ್ಲರೂ ಕಾರು ಅಥವಾ ಆಭರಣಗಳನ್ನು ಉಡುಗೊರೆಯಾಗಿ ಕೊಡುತ್ತಾರೆ. ಆದರೆ ನನ್ನ ಉಡುಗೊರೆ ವಿಶೇಷವಾಗಿಯೇ ಇರಬೇಕು ಎಂದು ಚಂದ್ರನಲ್ಲಿ ಜಮೀನು ಖರೀದಿಸಿದೆ ಎಂದು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಧರ್ಮೇಂದ್ರ ಹೇಳಿದ್ದಾರೆ.
ನ್ಯೂಯಾರ್ಕ್ ನಗರದಲ್ಲಿರುವ ಲೂನಾ ಸೊಸೈಟಿ ಇಂಟರ್ನ್ಯಾಷನಲ್ ಮೂಲಕ ಧರ್ಮೇಂದ್ರ ಚಂದ್ರನಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಜಮೀನು ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದು ವರ್ಷ ಬೇಕಾಗಿ ಬಂತು. ನನಗೆ ತುಂಬಾ ಖುಷಿ ಆಗಿದೆ. ಚಂದ್ರನಲ್ಲಿ ಜಮೀನು ಖರೀದಿಸಿದ ರಾಜಸ್ಥಾನದ ಮೊದಲ ವ್ಯಕ್ತಿ ನಾನೇ ಅಂತಾರೆ ಧರ್ಮೇಂದ್ರ.
ಹೀಗೊಂದು ಉಡುಗೊರೆ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನನಗೆ ತುಂಬಾ ಖುಷಿ ಆಗಿದೆ. ನಮ್ಮ ಪಾರ್ಟಿಯ ಸೆಟ್ ಕೂಡಾ ಸಖತ್ ಆಗಿತ್ತು. ನಾವು ಚಂದ್ರನಲ್ಲಿ ಇದ್ದೇವೆ ಎಂದು ಭಾಸವಾಗುವಂತೆ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಪಾರ್ಟಿಯಲ್ಲಿ ನನ್ನ ಪತಿ ಚಂದ್ರನಲ್ಲಿ ಖರೀದಿಸಿರುವ ಜಮೀನಿನ ದಾಖಲೆ ನನ್ನ ಕೈಗೆ ನೀಡಿದ್ದರು ಎಂದು ಸಪ್ನಾ ಹೇಳಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಭೋದ್ ಗಯಾ ನಿವಾಸಿ ನೀರಜ್ ಕುಮಾರ್ ತಮ್ಮ ಹುಟ್ಟುಹಬ್ಬಕ್ಕೆ ಚಂದ್ರನಲ್ಲಿ 1 ಎಕರೆ ಜಮೀನು ಖರೀದಿಸಿ ಸುದ್ದಿಯಾಗಿದ್ದರು.
ಚಂದ್ರನಲ್ಲಿ ಇಳಿಯಲು ಹೊಸ ದಾರಿ ಹುಡುಕೋಣ; ಇಸ್ರೋ ವಿಜ್ಞಾನಿಗಳಿಗೆ ಮೋದಿ ಆತ್ಮಸ್ಥೈರ್ಯ