ಜೈಪುರ: ಕೊವಿಡ್-19 (Covid 19) ಸೋಂಕಿನ ಒಂದೊಂದೇ ರೂಪಾಂತರಿ ವೈರಸ್ಗಳು ಹೊರಬರುತ್ತಲೇ ಇದ್ದು, ಆತಂಕ ಸೃಷ್ಟಿಸುತ್ತಿವೆ. ಕೊವಿಡ್ 19 ರೂಪಾಂತರಿಗಳಲ್ಲಿ ಒಂದಾದ ಕಪ್ಪಾ ಹಾವಳಿ ಶುರುವಾಗಿದ್ದು, ರಾಜಸ್ಥಾನದಲ್ಲಿ 11 ಜನರಲ್ಲಿ ಈ ಕಪ್ಪಾ ವೈರಸ್ (Kappa Variant) ಕಾಣಿಸಿಕೊಂಡಿದೆ. ಈ ವಿಚಾರವನ್ನು ಆರೋಗ್ಯ ಸಚಿವ ರಘು ಶರ್ಮಾ ತಿಳಿಸಿದ್ದಾರೆ.
11 ಜನರಲ್ಲಿ ಕಪ್ಪಾ ಸೋಂಕು ಕಾಣಿಸಿಕೊಂಡಿದೆ, ಅವರಲ್ಲಿ ಇಬ್ಬರು ಅಳ್ವಾರ್ನವರು, ಇಬ್ಬರು ಜೈಪುರದವರು, ಇಬ್ಬರು ಬಾರ್ಮರ್ ಮತ್ತು ಒಬ್ಬ ಭಿಲ್ವಾರಾದವರು ಎಂದು ರಘು ಶರ್ಮಾ ತಿಳಿಸಿದ್ದಾರೆ. ಈ ಹನ್ನೊಂದು ಮಂದಿಯಲ್ಲಿ 9 ಮಂದಿಯ ಮಾದರಿಯನ್ನು ದೆಹಲಿಯ ಐಜಿಐಬಿ ಪ್ರಯೋಗಾಲಯ ತಪಾಸಣೆ ಮಾಡಿ, ಕಪ್ಪಾ ಸೋಂಕು ತಗುಲಿದ್ದನ್ನು ದೃಢಪಡಿಸಿತ್ತು. ಹಾಗೇ ಇನ್ನಿಬ್ಬರ ಮಾದರಿಗಳನ್ನು ಜೈಪುರದ ಎಸ್ಎಂಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ. ಕಪ್ಪಾ ರೂಪಾಂತರಿ ವೈರಸ್ ಡೆಲ್ಟಾಕ್ಕೆ ಹೋಲಿಸಿದರೆ ಸ್ವಲ್ಪ ಸೌಮ್ಯವಾಗಿದೆ. ಆದರೆ ನಿರ್ಲಕ್ಷಿಸುವಂತಿಲ್ಲ. ಸಾರ್ವಜನಿಕರು ಕೊವಿಡ್ 19 ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ರಘು ಶರ್ಮಾ ಹೇಳಿದ್ದಾರೆ.
ಕಪ್ಪಾ ರೂಪಾಂತರಿ ವೈರಸ್ ಭಾರತದಲ್ಲಿ ಮೊದಲು ಪತ್ತೆಯಾಗಿದ್ದು 2020ರ ಅಕ್ಟೋಬರ್ನಲ್ಲಿ. ಇದು ಕೊರೊನಾದ ಎರಡು ಬಾರಿ ರೂಪಾಂತರಗೊಂಡ ತಳಿಯಾಗಿದೆ. ಡೆಲ್ಟಾದಷ್ಟು ಅಪಾಯಕಾರಿ ಅಲ್ಲದಿದ್ದರೂ ನಿರ್ಲಕ್ಷ್ಯ ಮಾಡುವಂಥದ್ದಲ್ಲ. ಲಸಿಕೆ ತೆಗೆದುಕೊಂಡವರಿಗೆ ಇದು ಅಷ್ಟಾಗಿ ಬಾಧಿಸಲಾರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ರಾಜಸ್ಥಾನದಲ್ಲಿ 107 ಮಂದಿಯಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಪತ್ತೆಯಾಗಿದೆ.
(Rajasthan Records 11 Cases Of Kappa Variant)